ಮುಯೆನುಸ್ಸುನ್ನಾ ಆನ್ಲೈನ್
Fidaak Media
ಕಲಂಗಲ್ಲೂರ್
ಭಾರತದಲ್ಲಿ ಇಸ್ಲಾಮ್ ಧರ್ಮ ಪ್ರಚಾರದಲ್ಲಿ ಮಸೀದಿಗಳ ಪಾತ್ರ ಅಪಾರ. ಮಲಬಾರಿನ ಮುಸ್ಲಿಮರ ಜನಜೀವನ ವ್ಯವಸ್ಥೆ ಇಂದಿಗೂ ಮಸೀದಿಗಳ ಜೊತೆಗೆ ಅವಿನಾಭಾವ ಸಂಬಂಧ ಬೆಸೆದುಕೊಂಡಿದೆ. ಮಾಲಿಕ್ ಬಿನ್ ದೀನಾರ್ (ರ) ಮತ್ತು ಸಂಘಡಿಗರು ಭಾರತದಲ್ಲಿ ಧರ್ಮ ಪ್ರಚಾರಕ್ಕಾಗಿ ಮೊದಲ ಮಸೀದಿ ನಿರ್ಮಾಣ ಮಾಡಿದ್ದು ಕೇರಳದ ತ್ರಿಶೂರ್ ಜಿಲ್ಲೆಯ ಕಲಂಗಲ್ಲೂರಿನಲ್ಲಿ. ಕ್ರಿ.ಶ 629 ರಲ್ಲಿ ನಿರ್ಮಾಣಗೊಂಡಿತು.
ಮೊದಲ ಹತ್ತು ಮಸೀದಿಗಳ ಪೈಕಿ ಮಾಲಿಕ್ ಬಿನ್ ದೀನಾರ್ (ರ) ಸ್ವತಃ ನಿರ್ಮಿಸಿದ ಏಕೈಕ ಮಸ್ಜಿದ್ ಇದಾಗಿದೆ. ಉಳಿದೆಲ್ಲಾ ಮಸೀದಿಗಳನ್ನು ತಮ್ಮ ಸಹೋದರ ಪುತ್ರ ಮಾಲಿಕ್ ಬಿನ್ ಹಬೀಬರ ನಾಯಕತ್ವದಲ್ಲಿ ನಿರ್ಮಿಸಲ್ಪಟ್ಟಾಗಿದೆ. ಇಸ್ಲಾಮ್ ಸ್ವೀಕರಿಸಿ ಮಲಬಾರಿನ ಇಸ್ಲಾಮಿಕ್ ಇತಿಹಾಸಕ್ಕೆ ನಾಂದಿ ಹಾಡಿದ ಚೇರುಮಾನ್ ಪೆರುಮಾಳ್ ಅವರ ಸ್ಮರಣಾರ್ಥ ಈ ಮಸೀದಿಗೆ ಚೇರುಮಾನ್ ಪೆರುಮಾಳ್ ಮಸೀದಿ ಎಂದು ನಾಮಕರಣ ಮಾಡಲಾಗಿದೆ.
ಅತ್ತೂರ್
ಮಾಲಿಕ್ ದಿನಾರ್ ಆಗಮನದೊಂದಿಗೆ ಮಲಬಾರಿನಲ್ಲಿ ಇಸ್ಲಾಂ ಪ್ರಚಾರ ವೇಗ ಪಡೆಯಿತು. ಜಾತಿ ವ್ಯವಸ್ಥೆಯಂತಿರುವ ಕಟ್ಟುಪಾಡುಗಳಿಂದ ನೊಂದಿದ್ದ ಜನರು ಇಸ್ಲಾಮಿನೆಡೆಗೆ ಆಕರ್ಷಿತರಾದರು. ಮಾಲಿಕ್ ಬಿನ್ ದೀನಾರ್ ಮತ್ತು ಸಂಘಡಿಗರು ಇಸ್ಲಾಂ ಧರ್ಮ ಪ್ರಚಾರಾರ್ಥ ನಿರ್ಮಿಸಿದ ಹತ್ತು ಮಸೀದಿಗಳ ಪೈಕಿ ಚಾಲಿಯಮ್ಮಿನ 'ಪುಝಕ್ಕರ ಮಸೀದಿ' ಒಂದು. ಕೊಚ್ಚಿ ಮತ್ತು ಕಲ್ಲಿಕೋಟೆ ಬಂದರುಗಳು ಅಭಿವೃದ್ಧಿ ಹೊಂದುವುದಕ್ಕಿಂತ ಹಲವು ವರ್ಷಗಳ ಹಿಂದೆಯೇ ಚಾಲಿಯಂ ಜಾಗತಿಕ ಕೊಡುಕೊಳ್ಳುವಿಕೆಗಳನ್ನು ನಡೆಸುತ್ತಿದ್ದ ಬಂದರು ನಗರವಾಗಿ ಕಾರ್ಯಾಚರಿಸುತ್ತಿತ್ತು.
ಮಾಲಿಕ್ ಬಿನ್ ಹಬೀಬರ ನಾಯಕತ್ವದಲ್ಲಿ ಸುಮಾರು ಐದು ತಿಂಗಳುಗಳ ಕಾಲ ಅಲ್ಲಿ ನಡೆದ ಧರ್ಮ ಪ್ರಚಾರದ ಭಾಗವಾಗಿ ಕ್ರಿ.ಶ 740 ರಲ್ಲಿ ಚಾಲಿಯಂ ನದಿ ದಡದಲ್ಲಿ ಕಲ್ಲಿಕೋಟೆಯ ಮೊದಲ ಮಸೀದಿ ನಿರ್ಮಾಣಗೊಂಡಿತು. ಪ್ರಸಿದ್ಧ ಅರೇಬಿಕ್ - ಮಲಯಾಳಂ ಕಾವ್ಯ 'ಮುಹ್ಯುದ್ದೀನ್ ಮಾಲೆಯ' ಕರ್ತೃ ಖಾಳಿ ಮುಹಮ್ಮದರು ತಮ್ಮ ಹುಟ್ಟೂರನ್ನು ಕಲ್ಲಿಕೋಟೆ ಸಮೀಪದ 'ಅತ್ತೂರ' ಎಂದು ಉಲ್ಲೇಖಿಸಿದ್ದಾರೆ.
ಫಾಕನ್ನೂರ್
ಇಸ್ಲಾಂ ಧರ್ಮ ಪ್ರಚಾರ ನಿಮಿತ್ತ ಭಾರತ ಉಪಖಂಡಕ್ಕೆ ತಲುಪಿದ ಮಾಲಿಕ್ ಬಿನ್ ದೀನಾರ್ ಮತ್ತು ಸಂಗಡಿಗರು ಇಲ್ಲಿ ಧರ್ಮ ಪ್ರಚಾರಕ್ಕಾಗಿ ವಿವಿಧ ಕಡೆಗಳಲ್ಲಿ ಮಸೀದಿ ನಿರ್ಮಾಣ ಮಾಡಲು ಪ್ರಾರಂಭಿಸಿದರು. ಉತ್ತರದಲ್ಲಿ ಧರ್ಮ ಪ್ರಚಾರಕ್ಕಾಗಿ ತಲುಪಿದ ತಮ್ಮ ಸಹೋದರ ಪುತ್ರ ಮಾಲಿಕ್ ಬಿನ್ ಹಬೀಬರ ತಂಡ ಕ್ರಿ.ಶ 645 ರಲ್ಲಿ (ಹಿ.22 ರಬೀಉಲ್ ಅವ್ವಲ್ 10 - ಅರೇಬಿಯಾದಿಂದ ತಂದ ಅಮೃತಶಿಲೆಯಲ್ಲಿ ಕೆತ್ತಿಡಲಾಗಿದೆ) ಉಡುಪಿ ಸಮೀಪದ ಬಾರ್ಕೂರ್ ಎಂಬಲ್ಲಿ ಮಸೀದಿ ನಿರ್ಮಿಸಿದರು.
ಬಾರ್ಕೂರನ್ನು ಪ್ರಾಚೀನ ತುಳುನಾಡಿನ ರಾಜಧಾನಿ ಎಂದು ಕೆಲವು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಪ್ರಸಿದ್ಧ ಭೂಗೋಳಶಾಸ್ತ್ರಜ್ಞ ಯಾಕೂತುಲ್ ಹಮವೀ ತಮ್ಮ ಮುಅಜಮುಲ್ ಬುಲ್ದಾನ್ ಗ್ರಂಥದಲ್ಲಿ ಬಾರ್ಕೂರನ್ನು 'ಫಾಕನ್ನೂರ್' ಎಂದು ಉಲ್ಲೇಖಿಸಿದ್ದಾರೆ.
ಮಂಜರೂರ್
ಮಸೀದಿ ನಿರ್ಮಾಣದ ಮೂಲಕ ಭಾರತದಲ್ಲಿ ಇಸ್ಲಾಮಿನ ಸಂಘಟಿತ ಪ್ರಚಾರಕ್ಕೆ ಮಾಲಿಕ್ ದೀನಾರ್ ಮತ್ತು ಸಂಘಡಿಗರು ನಾಂದಿ ಹಾಡಿದರು. ಕ್ರಿ.ಶ 645 (ಹಿ.22) ರಲ್ಲಿ ನಿರ್ಮಾಣಗೊಂಡ ಇದು ಭಾರತದ ಐದನೆಯ ಹಾಗೂ ಕರ್ನಾಟಕದ ಎರಡನೆಯ ಮಸೀದಿ. ಈ ಭಾಗದ ಇಸ್ಲಾಮಿಕ್ ಚಟುವಟಿಕೆಗಳು ಹಾಗೂ ಧರ್ಮ ಪ್ರಚಾರಕ್ಕಾಗಿ ಮಾಲಿಕ್ ಬಿನ್ ಹಬೀಬರು ಮಾಲಿಕ್ ಬಿನ್ ಇಬ್ರಾಹಿಂ ಎಂಬ ತಮ್ಮ ಸಂಬಂಧಿಯೋರ್ವರನ್ನು ನೇಮಕ ಮಾಡುತ್ತಾರೆ. ಕ್ರಿ.ಶ 1342 ರಲ್ಲಿ ಮಂಗಳೂರು ಭೇಟಿ ನೀಡಿದ ವಿಶ್ವ ಸಂಚಾರಿ ಇಬ್ನ್ ಬತೂತ ತಮ್ಮ ರಿಹ್ಲಾದಲ್ಲಿ 'ಮಂಜರೂರು' ಎಂದು ಉಲ್ಲೇಖಸಿದ್ದಾರೆ. ಟಿಪ್ಪು ಸುಲ್ತಾನರು ತಮ್ಮ ಆಡಳಿತಾವಧಿಯಲ್ಲಿ ಮಸೀದಿ ನವೀಕರಿಸಿ 'ಮಸ್ಜಿದ್ ಝೀನತ್ ಬಕ್ಷ್’ ಎಂದು ನಾಮಕರಣ ಮಾಡಿದರು.