top of page
Writer's pictureMueenussannah Online

ಗ್ರಂಥಗಳೊಂದಿಗೆ‌ ಬದುಕು‌ ಸವೆದ ಅಗತ್ತಿ‌ ಉಸ್ತಾದ್



ಸುನ್ನೀ ಜಗತ್ತಿನ ಮತ್ತೊಂದು ಬೃಹತ್ ಆಳದ ಮರವೊಂದು ಧರೆಗುರುಳಿತು. ಇಪ್ಪತ್ತೈದು ವರ್ಷಗಳಿಂದ ಮ‌ಅದಿನ್ ಅಕಾಡೆಮಿ ಸಾರಥಿ ಸಯ್ಯದ್ ಇಬ್ರಾಹೀಮುಲ್ ಖಲೀಲ್ ಬುಖಾರೀ ತಂಙಳರ ಆತ್ಮೀಯ ಸಹವರ್ತಿಯಾಗಿದ್ದ 'ಉಸ್ತಾದ್ ಅಬೂ ಬಕರ್ ಕಾಮಿಲ್ ಸಖಾಫಿ‍' ನಮ್ಮನ್ನಗಳಿದರು. ಪ್ರಮುಖ ವಿದ್ವಾಂಸರಾಗಿದ್ದ ಮಹಾನರು ಮ‌ಅದಿನ್ ಅಕಾಡೆಮಿಯ ಮುಖ್ಯ ಪ್ರಾಚಾರ್ಯರು. ಖಗೋಳ ಶಾಸ್ತ್ರದಲ್ಲಿ ಆಳ ಅಧ್ಯಯನ ನಡೆಸಿದ್ದರು. 2000 ದ ಹೊತ್ತಿಗೆ ಮ‌ಅದಿನ್ ನಲ್ಲಿ ಸೇವೆ ಆರಂಭಿಸಿ ಸಂಸ್ಥೆಯ ಯಶಸ್ಸಿನ ನಾಗಾಲೋಟದಲ್ಲಿ ಪ್ರಮುಖ ಪಾತ್ರ ವಹಿಸಿದರು. ಗುರುವರ್ಯರು 'ಅಗತ್ತಿ ಉಸ್ತಾದ'ರೆಂದೇ ಜನಜನಿತರಾಗಿದ್ದಾರೆ.


ಅಗತ್ತಿ ಉಸ್ತಾದರು ರಚಿಸಿದ ನಮಾಝ್ ಸಮಯ ನಿರ್ಧಾರಣ ಕ್ರಮವನ್ನು ಇಂದು ಕೇರಳ, ಕರ್ನಾಟಕ ಸೇರಿದಂತೆ ಹಲವು ಪ್ರದೇಶಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಲ‌ಕ್‌ತುಲ್ ಜವಾಹಿರ್, ದಶಮಹಾವೃತ್ತಗಳು, ಸೈಂಟಿಫಿಕ್ ಕ್ಯಾಲ್ಕುಲೇಟರ್ ಬಳಸಿ ನಮಾಝ್ ಸಮಯ ನಿರ್ಧಾರಣ, ಮಾರ್ಗದರ್ಶಿ, ಶರ್‌ಹು ಅಖೀದತಿಲ್ ಅವಾಮ್, ಮುಸ್ತಲಹಾತು ಫಿಖ್‌ಹಿಶ್ಶಾಫಿಇಯ್ಯ್ ಸೇರಿ ಅರಬಿ, ಮಲಯಾಳಂ ಭಾಷೆಗಳಲ್ಲಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ.


ಮ‌ಅದಿನ್ ಸ್ವಲಾತ್ ನಗರಿಯ ಹಳೆಯ ಮಸೀದಿಯ ಮೇಲಂತಸ್ತಿನ ಕೊಠಡಿಯಲ್ಲಿ ಅಗತ್ತಿ ಉಸ್ತಾದರು ಗ್ರಂಥಗಳ ಸಾಂಗತ್ಯದಲ್ಲಿ ಬದುಕಿದ್ದರು. ಅರಿವಿನ ಅನ್ವೇಷಣೆಯ ಹೊರತಾಗಿ ಅವರು ಆ ಕೊಠಡಿಯ ಹೊರಗೆ ಇಳಿಯುತ್ತಿರಲಿಲ್ಲ. ಅವರ ಹೊಸ ಗೃಹಪ್ರವೇಶ ಈ ವರ್ಷದ ರಬೀಇನಲ್ಲಾಗಿತ್ತು. ಹಿಂದಿನ ದಿವಸ ವಿಮಾನದ ಮೂಲಕ ಕಾರ್ಯಕ್ರಮಕ್ಕೆ ತೆರಳಿ ಮರುದಿವಸವೇ ಮ‌ಅದಿನ್‌ಗೆ ಮರಳಿ ತನ್ನ ನಿತ್ಯ ಕಾಯಕದಲ್ಲಿ ತೊಡಗಿದ್ದರು. ಇದು ಆ ಬದುಕಿನ ಸ್ಥೂಲ ವಿವರಣೆ.


ಅವರ ತರಗತಿಯ ಮೇಲಿನ ಹಿಡಿತವೂ ಅಷ್ಟೇ ಕೌತುಕ. ಆಸಕ್ತ ವಿದ್ಯಾರ್ಥಿಗಳಿಗೆ ಟೈಪಿಂಗ್, ಡಿಸೈನಿಂಗ್, ಮಕ್ತಬತು ಶಾಮಿಲಿ ವೆಬ್ಸೈಟ್ ಬಳಕೆಯನ್ನು ಕಲಿಸುವ ವಿಶೇಷ ಒಲವು ಅವರಲ್ಲಿತ್ತು. ಅವರ ಜೊತೆಗೆ ಚರ್ಚಿಸದ ಒಬ್ಬ ಖಗೋಳ ಶಾಸ್ತ್ರ ಅಧ್ಯಯನಕಾರ ಇಲ್ಲ ಎಂದೇ ಹೇಳಬಹುದು. ಕೇರಳ, ಕರ್ನಾಟಕದ ಇಸ್ಲಾಮಿಕ್ ವಲಯಗಳಲ್ಲಿ ಬಿಡುಗಡೆಗೊಳ್ಳುವ ಕ್ಯಾಲೆಂಡರ್‌ಗಳಲ್ಲಿ ಇವರು ಕಂಡು ಹಿಡಿದ ನಮಾಝ್ ಸಮಯ, ತಿಂಗಳ ಆರಂಭದ ಲೆಕ್ಕಗಳು ಅವರ ಶ್ರೇಷ್ಠ ಕೊಡುಗೆ. ಕೆಲವು ರೋಗ ಅವರನ್ನು ಅಂಟಿಕೊಂಡಿದ್ದರೂ ಅವರ ಅರಿವಿನ ಉತ್ಸಾಹಕ್ಕೆ ಅದು ತಡೆಯಾಗಲಿಲ್ಲ.


ಸುಲ್ತಾನುಲ್ ಉಲಮಾ ಉಸ್ತಾದರ ಪ್ರಮುಖ ಶಿಷ್ಯರಲ್ಲಿ ಒಬ್ಬರು. ಎಂ.ಕೆ. ಮುಹಮ್ಮದ್ ಬಾಖವಿ ಮುಂಡಂಬರಂಬ್, ಮುಹಮ್ಮದ್ ದಾರಿಮಿ ಪುರಕಾಟ್ಟಿರಿ ಇನ್ನಿತರ ಪ್ರಮುಖ ಗುರುವರ್ಯರು.


ಧರ್ಮಪತ್ನಿ ನಫೀಸಾ ಅಗತ್ತಿ. ಮಕ್ಕಳು - ಹಫ್ಸಾ, ಉಮರ್, ಖದೀಜಾ, ಉಸ್ಮಾನ್, ಅಲಿ, ಅಬೂಬಕರ್, ಹಸನ್ ಹಾಗೂ ಹುಸೈನ್. ಸೋದರಳಿಯರು: ಅಸ್ಲಂ ಅಹ್ಸನಿ ಅಗತ್ತಿ, ಆದಿಲ್ ಸಖಾಫಿ ಅಗತ್ತಿ ಕುಂಞಿಕೋಯ ಹಾಗೂ ಮರಿಯಂ ದಂಪತಿಯ ಪ್ರೀತಿಯ ಮಗನಾಗಿದ್ದರು.


ಅವರು ಸಮರ್ಪಿಸಿದ ಗ್ರಂಥಗಳು, ಅವರು ಧಾರೆಯೆರೆದ ಶಿಷ್ಯಗಣಗಳು ಅವರ ನೆನಪನ್ನು ಸದಾ ಜೀವಂತವಾಗಿಡಲು ಸಹಕಾರಿಯಾಗಿದೆ.

322 views0 comments

Comments


bottom of page