'ಕಾನೂನು' 'ನ್ಯಾಯ' ಎಂಬ ಪದಬಳಕೆಯ ಬಗ್ಗೆ ವಿಭಿನ್ನ ದೃಷ್ಟಿಕೋನಗಳು ಹಾಗೂ ಅಭಿಪ್ರಾಯಗಳಿವೆ. ವಿವಿಧ ಕಾಲಾವಧಿಗನುಸಾರ ಅಂದಿನ ಪಂಡಿತರು ವೈವಿಧ್ಯಮಯ ವ್ಯಾಖ್ಯಾನ ಕಾನೂನಿಗೆ ನೀಡಿದ್ದು ಕಾಣಬಹುದು. ಪ್ರಾಚೀನ ಕಾಲದಲ್ಲಿ ಧಾರ್ಮಿಕತೆಯನ್ನಾದರಿಸಿದ 'ನ್ಯಾಚುರಲ್' ಕಾನೂನು ಚಾಲ್ತಿಯಲ್ಲಿತ್ತು. ಕಾಲಕ್ರಮೇಣ ಕೈಗಾರಿಕಾ ಕ್ರಾಂತಿಯ ಪರಿಣಾಮ ತಂತ್ರಜ್ಞಾನ ಬೆಳವಣಿಗೆಯಿಂದ 'ಪೊಸಿಟಿವ್ ನ್ಯಾಯ'ದೆಡೆಗೆ ವಾಲಿತು. ನಂತರ ಇಸ್ಟೋರಿಕಲ್ ಸ್ಕೂಲ್ ಮತ್ತು ಸೋಶಿಯಲ್ ಸ್ಕೂಲ್ ಕಾನೂನನ್ನು ವಿಭಿನ್ನ ದೃಷ್ಟಿಕೋನದಿಂದ ವ್ಯಾಖ್ಯಾನಿಸಿತು. ಮೇಲ್ನೋಟಕ್ಕೆ ಇವೆಲ್ಲವೂ ಪರಸ್ಪರ ವೈರುಧ್ಯದಂತೆ ಕಂಡರೂ ಇಲ್ಲಿನ ಕೆಲವು ತತ್ವಗಳು ತಥೈವ. ಯಾವುದೇ ಕಾನೂನಿನ ಮುಖ್ಯ ಉದ್ದೇಶವು ಪ್ರಜೆಗಳ ಸುರಕ್ಷತೆ ಮತ್ತು ಪ್ರಗತಿಯಾಗಿದೆ. ಆ ನಿಟ್ಟಿನಲ್ಲಿ ವ್ಯವಸ್ಥೆಯು ಇಲ್ಲಿ ತಪ್ಪು- ಸರಿಗಳನ್ನು ಜಾರಿಗೊಳಿಸಿದ್ದು ಮತ್ತು ನಿಯಮ ಉಲ್ಲಂಘನೆಯ ಕಢಿವಾಣಕ್ಕೆ ಶಿಕ್ಷೆಯನ್ನು ವಿಧಿಸಿರುವುದು. ಜಾಗತಿಕವಾಗಿ ಇಂತಹಾ ಗಮನಾರ್ಹ ವಿಚಾರಗಳು ವ್ಯಾಪಕವಾಗಿ ಚರ್ಚೆಗೊಳಪಡುವುದಕ್ಕಿಂತ ಶತಮಾನಗಳ ಮುಂಚೆಯೇ ಪ್ರವಾದಿವರ್ಯರು ನ್ಯಾಯಯುತ ರಾಷ್ಟ್ರದ ಪರಿಕಲ್ಪನೆಯನ್ನು ಜಾರಿಗೊಳಿಸಿದ್ದರು. ಈ ವಿಚಾರದ ಮೇಲೆ ಸಮರ್ಪಕ ಅಧ್ಯಯನದ ಅನಿವಾರ್ಯತೆಯಿದೆ.
ನೈತಿಕತೆಯ ಸಿದ್ಧಾಂತಗಳು ಹಲವು ರೀತಿಯಲ್ಲಿ ಅವಿಷ್ಕಾರಗೊಂಡರೂ ಅದರ ಮೂಲ ತತ್ವಗಳು ಸಮಾನತೆ, ನ್ಯಾಯ ಮತ್ತು ಪ್ರಜಾಪ್ರಭುತ್ವವನ್ನು ಒಳಗೊಂಡಿರುತ್ತದೆ. ಸರ್ವರಿಗೂ ಮಾದರಿಯಾಗಬಲ್ಲ ಒಂದು ಉತ್ತಮ ರಾಷ್ಟ್ರ ನಿರ್ಮಾಣವನ್ನು ಪ್ರವಾದೀ (ಸ.ಅ) ರು ಕೈಗೆತ್ತಿಕೊಂಡರು. 'ತನ್ನ ಮಗಳು ಫಾತಿಮಾ ಕಳ್ಳತನ ಮಾಡಿದರೂ ಶಿಕ್ಷೆ ಕಡ್ಡಾಯ' ಎಂದು ಸಾರುವ ಮೂಲಕ ಸಮಾನತೆಯ ಸಿದ್ಧಾಂತಗಳಿಗೆ ಬುನಾದಿ ಹಾಕಿದರು. ಪ್ರಖ್ಯಾತ ಚಿಂತಕ ಎನ್.ಎಸ್ ಬಾರ್ಕರ್ ಕಾನೂನಿನ ಮೂಲ ತತ್ವಗಳಾಗಿ ಸ್ವಾತಂತ್ರ್ಯ, ಸಮಾನತೆ, ಸೌಹಾರ್ದತೆಯನ್ನು ಪಟ್ಟಿ ಮಾಡುತ್ತಾರೆ. ಬಾರ್ಕರ್ ತನ್ನ 'ದಿ ಪ್ರಿನ್ಸಿಪಲ್ಸ್ ಆಫ್ ಸೋಶಿಯಲ್ ಆಂಡ್ ಪೊಲಿಟಿಕಲ್ ತಿಯರಿ' ಎಂಬ ಪುಸ್ತಕದಲ್ಲಿ "ಕಾನೂನಿನ ಮೂಲ ನಿಯಮ ನ್ಯಾಯ" ಎಂದು ಉಲ್ಲೇಖಿಸುತ್ತಾರೆ.
ಮದೀನಾ ಚಾರ್ಟರ್ ಮೂಲಕ ಪ್ರವಾದಿವರ್ಯರು ಮಾದರೀ ತತ್ವ ಸಿದ್ಧಾಂತಗಳನ್ನೊಳಗೊಂಡ ನ್ಯಾಯ ಸಂಹಿತೆಯನ್ನು ಜಾರಿಗೊಳಿಸಿದರು. ಯಾವುದೇ ಪೂರ್ವಾಪರ ಮಾದರಿಯಿಲ್ಲದ ಕಾಲದಲ್ಲಿ ಮಾನವ ಚಿಂತನೆಗಳ ಮೂಲಕ ರೂಪು ಪಡೆದು, ಆಧುನಿಕ ನಿಯಮ ಸಂಹಿತೆಗಳನ್ನೂ ಮೀರಿಸಬಲ್ಲ ರೀತಿಯಲ್ಲಿ ಪ್ರವಾದಿವರ್ಯರು ರಾಷ್ಟ್ರ ನಿರ್ಮಾಣ ಪರಿಕಲ್ಪನೆಯನ್ನು ಅಳವಡಿಸಿಕೊಂಡರು. ಆ ವೇಳೆ ಬಹುಸಂಖ್ಯಾತ ವಿಭಾಗ ಮುಸಲ್ಮಾನರಾದರೂ ಅಲ್ಪಸಂಖ್ಯಾತರಾದ ಮದೀನಾದ ವಿವಿಧ ಮೇಧಾವಿಗಳೊಂದಿಗೆ ಚರ್ಚಿಸಿದರು. ಚಾರ್ಟರಿನ ಮೂರನೆಯ ಪರಿಚ್ಛೇದ ಎಲ್ಲಾ ಮದೀನಾ ನಿವಾಸಿಗಳಿಗೆ ಪೌರತ್ವ ನೀಡುವ ಬಗ್ಗೆ ಪ್ರಸ್ತಾಪಿಸುತ್ತದೆ. ನಂತರದ ಪರಿಚ್ಛೇದಗಳು ಮೂಲಭೂತ ಹಕ್ಕುಗಳನ್ನು ಪ್ರಸ್ತಾಪಿಸುತ್ತದೆ. ಪೌರರಿಗೆ ತಮ್ಮ ಇಚ್ಛಾನುಸಾರ ಯಾವುದೇ ಧರ್ಮಾವಲಂಬನೆಗೆ ಅನುಮತಿ ನೀಡುವ ಇಪ್ಪತ್ತನೆಯ ಪರಿಚ್ಛೇದದಲ್ಲಿ ದಾಖಲಿಸುವ ಮೂಲಕ ಮದೀನಾ ಚಾರ್ಟರ್ ಸಹಿಷ್ಣುತಾ ಭಾವವನ್ನು ಎತ್ತಿ ಹಿಡಿಯುತ್ತದೆ. ಅಲ್ಪಸಂಖ್ಯಾತ ಧರ್ಮಗಳಿಗೆ ಅರ್ಹ ಸ್ಥಾನಗಳನ್ನು ನೀಡುವ ಮೂಲಕ ಸೌಹಾರ್ದತೆ ಒಂದು ರಾಷ್ಟ್ರ ನಿರ್ಮಾಣದಲ್ಲಿ ಎಷ್ಟು ಮುಖ್ಯವೆಂದು ಪೈಗಂಬರ್ (ಸ.ಅ)ರು ಜಗತ್ತಿಗೆ ಸಾರಿದರು.
ಪಂಡಿತ್ ಜವಾಹರ್'ಲಾಲ್ ನೆಹರೂ ಪ್ರವಾದಿವರ್ಯರ ಮದೀನಾ ಚಾರ್ಟರಿನ ಕುರಿತು "ವಿಶ್ವಾಸ ಮತ್ತು ಮನೋಧಾರ್ಡ್ಯತೆ ಇಸ್ಲಾಮ್ ಅನುಯಾಯಿಗಳಿಗೆ ಕೊಟ್ಟಿತು, ಮುಸಲ್ಮಾಮನರು ಸರ್ವರೂ ಸಮಾನರೆಂದು ಸಾಹೋದರ್ಯತೆಯ ಸಂದೇಶ ನೀಡಿತು. ಈ ರೀತಿಯಾಗಿ ಚಾರ್ಟರ್ ಪ್ರಜಾಪ್ರಭುತ್ವವನ್ನು ಪ್ರಜೆಗಳಿಗೆ ಪ್ರಸ್ತುತ ಪಡಿಸಿತು" ಎಂದು ಅಭಿಪ್ರಾಯಪಡುತ್ತಾರೆ.
ಇಂತಹಾ ಉತ್ತಮ ಸಂದೇಶಗಳನ್ನು ಮುಂದಿಡುವ ಮದೀನಾ ಚಾರ್ಟರ್ ರಾಷ್ಟ್ರ ಸಂರಕ್ಷಣೆಗಾಗಿ ಪರಸ್ಪರ ಎರಡು ಸಮೂಹಗಳು ಒಗ್ಗಟ್ಟಾಗಬೇಕಾದ ಅನಿವಾರ್ಯತೆಯ ಕುರಿತಿರುವ ಹಲವು ಸಂದರ್ಭಗಳನ್ನು ಹೇಳಿಕೋಡುತ್ತಿದೆ. ಒಪ್ಪಂದ ಉಲ್ಲಂಘನೆ ಮತ್ತು ಆರೋಪಿ ಖೈದಿಯನ್ನು ಶಿಕ್ಷಿಸಕೂಡದು ಎಂಬ ಮಾನವೀಯ ಸಂದೇಶವನ್ನು ನೀಡುತ್ತದೆ. ಜೊತೆಗೆ ಯಾತ್ರಿಕರನ್ನು, ಅಥಿತಿಗಳನ್ನು ಹಾಗೂ ವಿವಿಧ ವಿಭಾಗಕ್ಕೊಳಪಟ್ಟ ಜನರ ವ್ಯಕ್ತಿತ್ವ, ಅಸ್ತಿತ್ವ , ಸುರಕ್ಷತೆಯನ್ನು ಚಾರ್ಟರ್ ಬಣ್ಣಿಸುತ್ತದೆ. ಆಧುನಿಕ ಸಮಾಜದ ಮೌಲ್ಯಗಳೆಂದು ನಾವು ಇಂದು ಮುದ್ರೆಯೊತ್ತುವ ಅನೇಕ ತತ್ವಗಳನ್ನು ಹದಿನಾಲ್ಕು ಶತಮಾನಗಳ ಕೆಳಗೆ ಪ್ರವಾದಿ (ಸ.ಅ) ಮತ್ತು ಸಹಚರರು ಪ್ರಸ್ತುತ ಸಂವಿಧಾನಕ್ಕಿಂತ ಹೃದ್ಯವಾಗಿ ಚಿತ್ರಿಸಿದ್ದಾರೆ.
ಸಮಾನತೆಯ ಸಂಕಲ್ಪ ಪೈಗಂಬರರ ಸಂವಿಧಾನದ ಪ್ರಮುಖ ಭಾಗ. ಪತ್ನಿ ಖದೀಜಾರ ಗುಲಾಮ ಝೈದರ ತಂದೆ ತನ್ನ ಮಗನನ್ನು ಮರಳಿ ಕರೆದುಕೊಂಡು ಹೋಗಲು ಪ್ರವಾದಿ (ಸ.ಅ) ಬಳಿ ಬಂದಾಗ "ಝೈದ್ ನನ್ನ ದಾಸನಲ್ಲ ಮತ್ತು ನಾನು ಅವನ ಒಡೆಯನೂ ಅಲ್ಲ, ಅವನ ಇಚ್ಛೆಯನುಸಾರ ಆಗಲಿ " ಎಂದು ಉತ್ತರಿಸಿದರು. ಆದರೆ ಝೈದರು ತಮ್ಮ ಪ್ರೀತಿಯ ಪ್ರವಾದಿವರ್ಯರನ್ನು ಬಿಟ್ಟು ಹೊರಡಲಿಲ್ಲ ಎಂಬುದು ಇತಿಹಾಸ. ಝೈದರ ವಫಾತಿನ ನಂತರ ಅವರ ಮಗನೊಂದಿಗೆ ಪ್ರವಾದಿ (ಸ.ಅ) ರು ತೋರಿಸಿದ ಮಮತೆಯ ಕುರಿತು ಉಮರ್ (ರ) ರೊಂದಿಗೆ ತಮ್ಮ ಮಗ ಕೇಳಿದಾಗ; "ಇಸ್ಲಾಮಿಗಾಗಿ ಅತ್ಯಧಿಕ ಶ್ರಮಿಸಿದ ತಮ್ಮ ಮಗನಿಗಿಂತ ಪೈಗಂಬರರಿಗೆ ಹೆಚ್ಚು ಸ್ನೇಹ ಗುಲಾಮರಾದ ಝೈದರ ಮಗನೊಂದಿಗೆಯಾಗಿತ್ತು" ಎಂದು ಉತ್ತರಿಸಿದರು. ಇದಕ್ಕಿಂತ ಬಹುವಾಗಿ ಒಡೆಯ-ಗುಲಾರೊಂದಿಗಿನ ಸಂಬಂಧ ಇತಿಹಾಸದ ಯಾವ ಉಲ್ಲೇಖಗಳಲ್ಲಿಯೂ ಕಾಣಲು ಅಸಾಧ್ಯ. ಮದೀನಾ ಚಾರ್ಟರಿನ ಹನ್ನೆರಡನೆಯ ಪರಿಚ್ಛೇದ ಗುಲಾರೊಂದಿಗಿನ ಸಾಮಿಪ್ಯವನ್ನು ಪ್ರತಿಪಾದಿಸುತ್ತದೆ ಎಂದು ಇದರೊಂದಿಗೆ ಸೇರಿಸಿ ಓದಬೇಕು. ವರ್ಣಬೇಧ ನೀತಿ ನಿರ್ಬಂಧಿಸಿದ ಪೈಗಂಬರರು ನೀಗ್ರೋ ವರ್ಗದ ಬಿಲಾಲರನ್ನು ಮದೀನಾ ಮಸೀದಿಯ ಮುಅಝ್ಝಿನ್ ಆಗಿ ನೇಮಿಸುವ ಮೂಲಕ ವರ್ಣಬೇಧ ನೀತಿಯ ಬಗ್ಗೆ ಜಾಗೃತಿ ಮೂಡಿಸಿದರು.
ಮದೀನಾದ ಮಸ್ಜಿದ್ ಅಂದಿನ ಪರಮೋಚ್ಚ ನ್ಯಾಯಾಲಯವಾಗಿತ್ತು. ಓರ್ವ ಉತ್ತಮ ನ್ಯಾಯಾಧೀಶರಾಗಿ ಪ್ರಜೆಗಳ ಸಮಸ್ಯೆಗಳಿಗೆ ಸ್ಪಂದಿಸಲು ತಮ್ಮ ಸಮಯವನ್ನು ವ್ಯಯಿಸುತ್ತಿದ್ದರು. ಜಾಗತಿಕ ಮಟ್ಟದಲ್ಲಿ ಇಸ್ಲಾಮ್ ವ್ಯಾಪಿಸಲಾರಂಭಿಸಿದಾಗ ಮದೀನಾವನ್ನು ಸರ್ವೋಚ್ಛ ಪ್ರಾಧಿಕಾರವನ್ನಾಗಿ ಮಾಡಿ ವಿವಿಧ ಕಡೆಗೆ ನ್ಯಾಯಾಧೀಶರನ್ನು ನೇಮಿಸಿದರು. ಯುವಕರಾದ ಅಲೀ (ರ) ರನ್ನು ನ್ಯಾಯಾಧೀಶರನ್ನಾಗಿ ನೇಮಿಸಿದಾಗ ಪ್ರವಾದಿ (ಸ.ಅ) ಅವರಿಗೆ ನೀಡಿದ ನ್ಯಾಯ ಮತ್ತು ಸಮತ್ವದ ಹಿತೋಪದೇಶಗಳು ಗಮನಾರ್ಹ. "ಯಾವುದೇ ಪ್ರಕರಣಗಳು ಇತ್ಯರ್ಥಕ್ಕೆ ನಿಮ್ಮ ಬಳಿಬಂದರೆ ತಕ್ಷಣ ವಿಧಿಸಬಾರದು. ಹೊರತಾಗಿ, ಎದುರು ಕಕ್ಷಿಯ ವಾದವನ್ನೂ ಆಲಿಸುವುದು ಒಳಿತು." ಪರ ಮತ್ತು ವಿರೋಧ ವಾದಗಳನ್ನು ಅವಲೋಕಿಸಿ ಅದರ ಪುರಾವೆಗಳಿಗನುಗುನವಾಗಿ ತೀರ್ಪು ನೀಡಬೇಕೆಂಬುದು ಆಧುನಿಕ ನ್ಯಾಯಶಾಸ್ತ್ರದ ಮೂಲ ತತ್ವವಾದ 'ಓಡಿ ಅಲ್ಟ್ರಂ ಪಾರ್ಟಂ' (ಎದರು ಕಕ್ಷಿಯನ್ನು ಕೇಳಬೇಕು) ತಿಳಿಸುತ್ತದೆ. ಇದು ಇಸ್ಲಾಮಿಕ್ ಕೃಮಿನೋಲಜಿಯ ತಳಹದಿಯಾಗಿತ್ತು ಎಂಬುದು ಈ ಮೂಲಕ ತಿಳಿದುಬರುತ್ತದೆ.
ಪ್ರವಾದಿವರ್ಯರ ಕಾಲದಲ್ಲಿ ನ್ಯಾಯ ಸಂಹಿತೆ ಎಷ್ಟು ಸುಭದ್ರವಾಗಿತ್ತು ಎಂಬುದರ ಅವಲೋಕನವಾಗಿದೆ ಮದೀನಾ ಚಾರ್ಟರ್ ಮೂಲಕ ಜಗತ್ತು ತಿಳಿದದ್ದು. 1935 ರಲ್ಲಿ ಅಮೇರಿಕಾದ ಸರ್ವೋಚ್ಚ ನ್ಯಾಯಾಲಯವು "ಜಗತ್ತಿಗೆ ಮಾನವೀಯ ಮೌಲ್ಯಗಳನ್ನು ಮತ್ತು ಮಾದರೀ ನಿಯಮ ಸಂಹಿತೆಯನ್ನು ಸಮರ್ಪಿಸಿದ್ದು ಪ್ರವಾದಿ (ಸ)" ಎಂದು ಉಲ್ಲೇಖಿಸಿತು. ಮಾದರೀಯುತ ನಗರ ನಿರ್ಮಾಣ ಪ್ರಕ್ರಿಯೆಗಳಿಗೆ ಪ್ರವಾದಿವರ್ಯರ ಮದೀನಾ ಚಾರ್ಟರನ್ನು ಜಗತ್ತು ಅನುಕರಿಸಬೇಕಿದೆ.
ಮೂಲ- ಅಡ್ವ.ಅಲ್ ವಾರಿಸ್ ಫಿರ್ದೌಸ್ ಮಂಸೂರ್
~ ಇಝ್ಝುದ್ದೀನ್ ಮುಈನಿ ಕಣ್ಣೂರು
Comments