ಇಲಾಹೀ ಚಿಂತನೆಯ ಆಳಕ್ಕೆ ಅನೇಕಾರು ವಿಶ್ವಾಸಿ ಹೃದಯಗಳಿಗೆ ದಾರಿ ತೋರಿಸಿದ, ಕಳಂಕ ರಹಿತ ಬದುಕಿನ ಮೂಲಕ ಆಧ್ಯಾತ್ಮಿಕತೆಯ ತಾಯಿಬೇರು ಸ್ಪರ್ಶಿಸಿದ ಆತ್ಮಜ್ಞಾನಿಯಾಗಿದ್ದರು ‘ಸಿ.ಎಂ ವಲೀಯುಲ್ಲಾಹ್’ ಎಂದು ಚಿರಪರಿಚಿತರಾದ ಸಿಎಂ ಮುಹಮ್ಮದ್ ಅಬೂಬಕರ್ ಮುಸ್ಲಿಯಾರ್. ಮಡವೂರು ಕುಞಿಮಾಹಿನ್ ಕೋಯ ಮುಸ್ಲಿಯರ್ ಮತ್ತು ಪೆರಿಯಾಟ್ಟಿಚ್ಚಾಲಿಲ್ ಇಂಬಿಚ್ಚಿ ಮೂಸಾರ ಪುತ್ರಿ ಆಯಿಷಾ ಹಜ್ಜುಮ್ಮ ಇವರ ಮಗನಾಗಿ ಹಿಜಿರಾ 1340 ರಬೀವುಲ್ ಅವ್ವಲ್ ಹನ್ನೆರಡರಂದು ಮಹಾನುಭಾವರ ಜನಿಸುತ್ತಾರೆ.
ಅವರ ಗರ್ಭಧಾರಣೆಯ ಸಂದರ್ಭದಲ್ಲಿ ಹಜ್ಜಿಗಾಗಿ ಹೊರಟ ತಂದೆ ಕುಞಿಮಾಹಿನ್ ಕೋಯ ಮುಸ್ಲಿಯಾರರಿಗೆ ಮಕ್ಕಾದಲ್ಲಿ ಕನಸ್ಸೊಂದು ಬಿತ್ತು. ಪ್ರಿಯತಮೆ ಗರ್ಭವತಿಯಾಗಿರುವುದಾಗಿಯೂ ಮಗು ಹುಟ್ಟಿದರೆ ‘ಮುಹಮ್ಮದ್ ಅಬೂಬಕ್ಕರ್’ ಎಂದು ನಾಮಕರಣ ಮಾಡಬೇಕೆಂದಾಗಿತ್ತು ಸ್ವಪ್ನ ಸಂದೇಶ. ಬಹುಕಾಲದ ಬಯಕೆ ಈಡೇರಿದ ಸಂತೋಷದಲ್ಲಿತ್ತು ಕುಟುಂಬ. ಈ ಸಂಗತಿಯನ್ನು ಖಾದಿರಿಯ್ಯ ತ್ವರೀಖತ್ ಶೈಖಾಗಿದ್ದ (ಆಧ್ಯಾತ್ಮಿಕ ಗುರು) ಅಬೂಬಕ್ಕರ್ ಅಲ್ ಹಸನ್ ಜೊತೆಗೆ ಹಂಚಿಕೊಂಡರು. ಕನಸು ನಡೆಯಲಿದೆ ಎಂದ ಮಹಾನುಭಾವರು, ಜನಿಸುವ ಮಗುವಿಗೆ ಅಸಾಮಾನ್ಯತೆಯನ್ನು ಭವಿಷ್ಯ ನುಡಿದರು.
ಹೃದಯವನ್ನು ಇಲಾಹಿ ಚಿಂತನೆಯಿಂದ ದೂರವಿಡುವ ವಿನೋದಗಳಿಂದ, ಅನಗತ್ಯ ಮಾತು-ಒಡನಾಟಗಳಿಂದ ಬಾಲ್ಯದಲ್ಲಿಯೇ ಸಂಪೂರ್ಣವಾಗಿ ದೂರ ನಿಂತಿದ್ದರು. ತಂದೆಯವರು ನೆರೆಯ ನಾಡಿನಿಂದ ಮಡವೂರಿಗೆ ವಾಸ್ತವ್ಯವನ್ನು ಬದಲಾಯಿಸಿದ್ದರು. ಉದ್ಧಾಮ ವಿದ್ವಾಂಸರು, ಉಜ್ವಲ ವಾಗ್ಮಿಯು ಖಾಝಿಯೂ ಆಗಿದ್ದ ತಂದೆಯ ಬಳಿಯಾಗಿತ್ತು ಪ್ರಾರ್ಥಮಿಕ ಅಧ್ಯಯನ. ನಂತರ ಮಡವೂರ್, ಕೊಡುವಳ್ಳಿ, ಮಂಞಾಡ್, ಕೊಯ್ಲಾಂಡಿ ಮುಂತಾದ ಕಡೆಗಳಲ್ಲಿ ಅಧ್ಯಯನ ನಡೆಸಿ, ನಂತರ ಉನ್ನತ ಶಿಕ್ಷಣವನ್ನು ತಳಿಪ್ಪರಂಬ್ ಕುವ್ವತುಲ್ ಇಸಾಮಿನಲ್ಲಿ ಮತ್ತು ವೆಲ್ಲೂರ್ ಬಾಖಿಯಾತುಸ್ಸಾಲಿಹಾತಿನಲ್ಲಿ ಪೂರ್ತಿಗೊಳಿಸಿದರು. ಜ್ಞಾನಾನ್ವೇಷಣೆಯ ಉತ್ತುಂಗಕ್ಕೆ ತಲುಪಿದ ಮಹಾನುಭಾವರು ಆ ಕಾಲದಲ್ಲಿ ಪ್ರಸಿದ್ಧರಾದ ಹಲವಾರು ಶ್ರೇಷ್ಠ ವಿದ್ವಾಂಸರಿಂದ ವಿದ್ಯೆ ಅಭ್ಯಸಿಸಿದರು. ಮೋಙಂ ಅವರಾನ್ ಮುಸ್ಲಿಯಾರ್, ಮಲಯಮ್ಮ ಅಬೂಬಕ್ಕರ್ ಮುಸ್ಲಿಯಾರ್, ಕುಟ್ಟಿಕ್ಕಾಟೂರ್ ಇಂಬಿಚ್ಚಾಲಿ ಮುಸ್ಲಿಯಾರ್, ಶೈಖ್ ಆದಂ ಹಝ್ರತ್, ಶೈಖ್ ಹಸನ್ ಹಝ್ರತ್, ಕೊಯ್ಲಾಂಡಿ ಕುಂಞಿ ಮುಹಮ್ಮದ್ ಮುಸ್ಲಿಯಾರ್ ಅವರ ಗುರುವರ್ಯರ ಪೈಕಿ ಪ್ರಮುಖರು.
ವೆಲ್ಲೂರಿನ ಉನ್ನತ ವ್ಯಾಸಂಗದ ನಂತರ ಊರಿಗೆ ಮರಳಿದ ಮಹಾನುಭಾವರು ಸ್ವಂತ ಊರಿನಲ್ಲಿ ಅಧ್ಯಾಪನ ಆರಂಭಿಸಿದರು. ಮತ್ತು ಸಮೀಪ ಪ್ರದೇಶದ ಖಾಝಿಯಾಗಿ ನಿಯುಕ್ತರಾದರು. ಈ ಸಂದರ್ಭದಲ್ಲಿ ಅವರ ಬಳಿ ನೂರಕ್ಕೂ ಮಿಕ್ಕ ಶಿಷ್ಯಂದಿರಿದ್ದರು. ಒಂದರ್ಧ ನಿಮಿಷವನ್ನು ವ್ಯರ್ಥಗೊಳಿಸದೆ ಅತೀ ಸೂಕ್ಷ್ಮವಾಗಿ ಸಮಯವನ್ನು ಬಳಸುತ್ತಿದ್ದ ಮಹಾನುಭಾವರು ಅಧ್ಯಾಪನೆ ಮುಗಿದ ಕೂಡಲೇ ತನ್ನ ಆರಾಧನೆಯೆಡೆಗೆ ತಕ್ಷಣ ಮರಳುತ್ತಿದ್ದರು. ಅಧ್ಯಾಪನೆಯ ಆರಂಭಕಾಲದಲ್ಲಿ ಸಣ್ಣಮಟ್ಟಿನ ಸಂಬಳ ದೊರಕುತ್ತಿದ್ದಾದರೂ ಅವೆಲ್ಲವನ್ನು ಶಿಷ್ಯಂದಿರಿಗೆ ಮತ್ತು ಇತರರಿಗೆ ವಿನಯೋಗಿಸುವುದು ವಾಡಿಕೆಯಾಗಿತ್ತು. ಶುಭ್ರ ವಸ್ತ್ರ ಧರಿಸಲು ಶುಚಿತ್ವವನ್ನು ಕಾಪಿಡಲು ಪದೇಪದೇ ಕಿವಿಮಾತು ಹೇಳುತ್ತಿದ್ದರು.
ಅಧ್ಯಾಪನ ಜೀವನದ ಮಧ್ಯೆ ಒಮ್ಮೆ ಹಜ್ಜಿಗಾಗಿ ಹೊರಟು ನಿಂತರು. ಯಾತ್ರೆಯಲ್ಲಿ ಮಹಾನುಭಾವರಿಂದ ಪವಾಡ ಸದೃಶ ಸಂಗತಿಗಳು ಸಂಭವಿಸಿರುವುದಕ್ಕೆ ಜೊತೆಗಿದ್ದವರು ಸಾಕ್ಷಿಗಳಾಗಿದ್ದರು. ಹಜ್ಜ್ ಯಾತ್ರೆಯ ನಂತರ ಭಿನ್ನವಾದ ಜೀವನ ಶೈಲಿಯು ಮಹಾನುಭಾವರಿಂದ ಗೋಚರವಾಯಿತು. ತನ್ನ ಬಳಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಹತ್ತಿರದ ಸೂಕ್ತ ಸ್ಥಳಗಳಿಗೆ ಕಳುಹಿಸಿಕೊಟ್ಟರು. ನಂತರದ ದಿನಗಳಲ್ಲಿ ಸಂಪೂರ್ಣವಾಗಿ ರಿಯಾಳ ಪೂರ್ತಿಗೊಳಿಸಲು ಮತ್ತು ಆರಾಧನೆಯಲ್ಲಿ ನಿರತರಾಗಲು ಪ್ರಾರಂಭಿಸಿದರು. ಹಗಲು ವೃತಾಚಾರಣೆ ಮತ್ತು ರಾತ್ರಿ ಪಾಳಿಯಲ್ಲಿ ಪೂರ್ಣ ನಮಾಝಿನಲ್ಲಿ ಮಗ್ನರಾಗುತ್ತಿದ್ದರು. ಈ ಸಂದರ್ಭದಲ್ಲಿ ಮರಣ ಹೊಂದಿದ ಸಾತ್ವಿಕರ ಬಳಿ ದೀರ್ಘಾವಧಿಯ ಯಾತ್ರೆಗಳನ್ನು ಕೈಗೊಂಡರು. ಈ ಪ್ರಯಾಣಗಳ ಮಧ್ಯೆ ವನ್ಯಜೀವ ವಾಸದ ದಟ್ಟಾರಣ್ಯಗಳಲ್ಲಿ ಮಹಾನುಭಾವರನ್ನು ಕಾಣಲು ಸಾಧ್ಯವಾಯಿತೆಂದು ಅನುಭವಗಳನ್ನು ಹಂಚುವ ದೃಕ್ಷಾಕ್ಷಿಗಳಿದ್ದಾರೆ.
ನೂತನವಾದಿಗಳೊಂದಿಗೆ ಮತ್ತು ಆದರ್ಶ ವಿರುದ್ಧರೊಂದಿಗೆ ರಾಜಿರಹಿತರಾಗಿ ಸಮೀಪಿಸುತ್ತಿದ್ದರು. ಮಡವೂರು ಪ್ರದೇಶದ ಖಾಝಿಯಾಗಿದ್ದ ಸಿಎಂ ವಲಿಯುಲ್ಲಾಹಿರನ್ನು ಒಬ್ಬ ನವೀನವಾದಿ ತನ್ನ ಮನೆಯಲ್ಲಿನ ನಿಕಾಹ್ ಕಾರ್ಯಕ್ರಮಕ್ಕೆ ಆಮಂತ್ರಿಸಿದ್ದ. ಮರು ಆಲೋಚಿಸದೆ ಆಹ್ವಾನವನ್ನು ತಿರಸ್ಕರಿಸಿದರು. ಇದರ ಸೆರಗು ಹಿಡಿದು ಹಲವು ಅಲ್ಪ ಜ್ಞಾನಿಗಳು ವಿವಾದವೆಬ್ಬಿಸಿದರೂ ಮಹಾನುಭಾವರು ಅಚಲವಾದ ನಿಲುವಿನ ಮುಂದೆ ಅವರಿಗೆ ಮಂಡಿಯೂರಬೇಕಾಯಿತು.
ಮುಸ್ಲಿಂ ಕೇರಳದ ಸಾಂಘಿಕ ಇತಿಹಾಸದಲ್ಲಿ ಪ್ರಾಮುಖ್ಯತೆಯನ್ನು ಪಡೆಯುವ ಎರ್ನಾಕುಳಂ ಸಮ್ಮೇಳನ ಇಲ್ಲಿ ಮಹತ್ವ ಪಡೆಯುತ್ತದೆ. ರಾಜಕೀಯ ಶತ್ರುಗಳ ಕುಬುದ್ಧಿಯ ಭಾಗವಾಗಿ ನಿರಂತರ ಕೊಂಕುನುಡಿಗಳು, ಅಡೆತಡೆಗಳು ಕಾರ್ಯಕ್ರಮಕ್ಕೆ ಉಂಟಾದಾಗ ಆಯೋಜಕರು ಎ.ಪಿ ಉಸ್ತಾದರೊಂದಿಗೆ ಶೈಖುನಾರನ್ನು ತಲುಪುತ್ತಾರೆ. ಉದ್ದೇಶವನ್ನು ಕೇಳಿ ತಿಳಿಯುವುದಕ್ಕೂ ಮುಂಚಿತವಾಗಿ “ನೀವು ಎರ್ನಾಕುಳಂ ಹೋಗಬೇಕು. ಸಮ್ಮೇಳನ ಯಶಸ್ವಿಯಾಗಿಬಿಟ್ಟಿದೆ” ಎಂದು ಭವಿಷ್ಯ ನುಡಿಯ ಮೂಲಕ ಆಶೀರ್ವದಿಸಿದರು. ಆಯೋಜಕರನ್ನು ಉತ್ತೇಜಿಸಿದರು. ಸಮ್ಮೇಳನವು ಅನಿರೀಕ್ಷಿತ ಯಶಸ್ವಿ ಸಾಧಿಸಿತು.
ಕೊನೆಯ ಕಾಲವು ಕೋಝಿಕ್ಕೋಡ್ 'ಮಮ್ಮುಟ್ಟಿ ಮೂಪ'ರವರ ಮನೆಯಲ್ಲಾಗಿತ್ತು. ದಿಕ್ಕು ಕಾಣದೆ ಕಂಗಾಲಾಗಿರುವ ಅನೇಕಾರು ಮನುಷ್ಯ ಜೀವಗಳು ಅವರ ಸನ್ನಿಧಿಗೆ ತಲುಪುತ್ತಿದ್ದರು. ಹಲವಾರು ಪವಾಡಗಳಿಗೆ ನಿಮಿತ್ತವಾಗಿದ್ದ ಮಹಾನುಭಾವರು, ರೋಗಗಳೊಂದಿಗೆ ಸಮೀಪಿಸುವವರಿಗೆ ‘ಅದು ಬೇಡ’ ಎಂಬ ದ್ವಿಪದದ ಮೂಲಕ ಶಮನ ಮತ್ತು ಧೈರ್ಯವನ್ನು ನೀಡುತ್ತಿದ್ದರು.
ಈ ಶತಮಾನದಲ್ಲಿ ನಾವು ಅನುಭವಿಸುವ ಆಧ್ಯಾತ್ಮಿಕ, ಶೈಕ್ಷಣಿಕ ಸಾಂಘಿಕವಾದ ಹಲವಾರು ಯಶಸ್ಸುಗಳಿಗೆ, ಅಭಿವೃದ್ದಿಗಳಿಗೆ ತೆರೆಮರೆಯಲ್ಲಿ ನಿಂತು ಶಕ್ತಿಯನ್ನು ಆಶೀರ್ವಾದವನ್ನು ನಿರಂತರವಾಗಿ ನೀಡುತ್ತಿದ್ದ ಮಹಾನುಭಾವರು ಹಿಜರಿ.1411 ಶವ್ವಾಲ್ ನಾಲ್ಕು ಶುಕ್ರವಾರದಂದು ಇಹಲೋಕ ತ್ಯಜಿಸಿದರು.
ಮರಣದ ನಂತರದ ಕ್ರಿಯೆಗಳಿಗೆ ಸುಲ್ತಾನಲ್ ಉಲಮ ಎ.ಪಿ ಉಸ್ತಾದ್, ವೈಲತ್ತೂರು ಯೂಸುಫುಲ್ ಜಿಲಾನಿ, ಅವೇಲತ್ ಸದಾತ್ ಕುಟುಂಬವು ನಾಯಕತ್ವವನ್ನು ವಹಿಸಿತು. ಮರಣದ ಹಿಂದಿನ ದಿನ ವಿದೇಶ ಯಾತ್ರೆಗೆ ಅಣಿಯಾಗಿದ್ದ ಎ.ಪಿ ಉಸ್ತಾದರನ್ನು ಕರೆದು ಯಾತ್ರೆಯ ದಿನಾಂಕವನ್ನು ಮಹಾನುಭಾವರ ಮರಣ ಸಂಭವಿಸಿದ ನಂತರದ ದಿನಕ್ಕೆ ಬದಲಾಯಿಸುವಂತೆ ಕೇಳಿಕೊಂಡರೆಂದು ಎ ಪಿ ಉಸ್ತಾದ್ ಸ್ಮರಿಸುತ್ತಾರೆ.
ಪೂರ್ಣವಾಗಿ ಆಧ್ಯಾತ್ಮಿಕದ ಒಳ ತಿರುಳನ್ನು ತಲುಪಿದ್ದ ಶ್ರೇಷ್ಠ ಜೀವನವು ಇಂದಿಗೂ ಅಜೀವ ಸ್ಮರಣೆಯಾಗಿ ಜನಮಾನಸಗಳಲ್ಲಿ ಜೀವಂತವಾಗಿದೆ.
ಮೂಲ: ಮಲಯಾಳಂ
ಕನ್ನಡಕ್ಕೆ: ಅಮ್ಮಾರ್ ಮುಈನಿ, ನೀರಕಟ್ಟೆ
Comments