ಮದ್ರಸಾಗಳು ಮತ್ತೆ ಚರ್ಚೆಯಾಗುತ್ತಿದೆ. ಅದರ ಸಾಂವಿಧಾನಿಕತೆ, ಅನಿವಾರ್ಯತೆಯ ಸಮರ್ಥನೆಯ ನೆಪದಲ್ಲಿ ಮತ್ತೆ ಕಟಕಟೆಯಲ್ಲಿ ನಿಲ್ಲಬೇಕಾಗಿ ಬಂದಿದೆ. ಈ ಬೆಳವಣಿಗೆಯನ್ನು ಕೇವಲ ಒಂದು ಮುಸ್ಲಿಂ ಸಮಸ್ಯೆಯಾಗಿ ಕಾಣದೆ ಇಲ್ಲಿನ ಜಾತ್ಯಾತೀತತೆಯ ಮೇಲಿನ ಬೆದರಿಕೆಯಾಗಿ ಕಾಣಬೇಕು.
ಭಾರತೀಯ ಪ್ರದೇಶಗಳು ಹೊಂದಿರುವ ಶ್ರೀಮಂತ ಬಹುತ್ವವನ್ನು ಗೌರವಿಸಿ ದೇಶದ ಶಿಲ್ಪಿಗಳು ಸಂವಿಧಾನವನ್ನು ರಚಿಸಿದರು. ಒಂದೊಮ್ಮೆ ಸವಾಲಾಗಬಹುದಾದ ಸಂದಿಗ್ಧತೆಯನ್ನು ಮುಂದೆ ಕಾಣುತ್ತಲೇ ಅವರು ರಚಿಸಿದ್ದರು. ಸಂವಿಧಾನದ 25-30 ಅನುಚ್ಛೇದಗಳು ದೇಶದ ಧಾರ್ಮಿಕ ಬಹುತ್ವವನ್ನು ಎತ್ತಿ ಹಿಡಿಯುತ್ತದೆ. ಧಾರ್ಮಿಕ ನಂಬಿಕೆ, ಆಚರಣೆ ಮಾತ್ರವಲ್ಲದೆ ಅದರ ಪ್ರಚಾರಕ್ಕೂ ಅವಕಾಶವನ್ನು ಕಲ್ಪಿಸಿದ ಏಕಮಾತ್ರ ದೇಶವಾಗಿದೆ ಭಾರತ. 29, 30 ಅನುಚ್ಛೇದಗಳು ಭಾರತೀಯ ಅಲ್ಪಸಂಖ್ಯಾತರ ಸಾಂಸ್ಕೃತಿಕ ಸಂರಕ್ಷಣೆಗೆ ಒತ್ತು ನೀಡಿ, ಧಾರ್ಮಿಕ ಸಮುದಾಯಗಳಿಗೆ ಅಥವಾ ಅದರ ಅಂಗವಾಗಿ ಕಾರ್ಯಾಚರಿಸುವ ಯಾವುದೇ ವಿಭಾಗಕ್ಕೆ ಧಾರ್ಮಿಕ, ಶೈಕ್ಷಣಿಕದ ಜೊತೆಗೆ ಚಾರಿಟೇಬಲ್ ಸಂಸ್ಥೆಗಳನ್ನು ನಡೆಸಲೂ ಅವಕಾಶ ನೀಡುತ್ತದೆ. ಧಾರ್ಮಿಕ ನಂಬಿಕೆ, ಆಚರಣೆ, ಪ್ರಚಾರಕ್ಕೆ 25 ನೆಯ ಅನುಚ್ಛೇದ ಅನುಮತಿಸುವಾಗ, 26 ನೆಯ ಅನುಚ್ಛೇದ ಇಲ್ಲಿನ ಅಲ್ಪಸಂಖ್ಯಾತ, ಬಹುಸಂಖ್ಯಾತರಾಗಿರಲಿ ಅವರ ಧಾರ್ಮಿಕ, ಸಾಂಸ್ಕೃತಿಕ ಕೇಂದ್ರಗಳ ನಿರ್ಮಾಣ ಹಾಗೂ ಅದರ ಪರಿಪೋಷಣೆಯ ಹಕ್ಕನ್ನು ಕಲ್ಪಿಸುತ್ತದೆ. ನಮ್ಮದು ಬಹುತ್ವದ ದೇಶವಾದ ಕಾರಣದಿಂದಲೇ ಇಲ್ಲಿನ ಪ್ರಜೆಗಳಿಂದ ಧಾರ್ಮಿಕ ವಿಚಾರಗಳಿಗೆ ತೆರಿಗೆ ವಸೂಲಿಯನ್ನು 27 ನೆಯ ಅನುಚ್ಛೇದ ನಿರಾಕರಿಸುತ್ತದೆ. 28(1) ಅನುಚ್ಛೇದವು ಸರ್ಕಾರದ ಫಂಡ್‌ಗಳನ್ನು ಸಂಪೂರ್ಣವಾಗಿ ಬಳಸಿ ಧಾರ್ಮಿಕ ಶಿಕ್ಷಣ ಸಂಸ್ಥೆಗಳನ್ನು ನಡೆಸುವಂತಿಲ್ಲ. ಆದರೆ 28(2) ಮತ್ತು 28(3) ಅನುಚ್ಛೇದಗಳು ಅದರ ಧಾರ್ಮಿಕ, ಶಿಕ್ಷಣ ಕೇಂದ್ರಗಳಿಗೆ ಸರ್ಕಾರದ ಫಂಡ್‌ಗಳನ್ನು ಪಡೆಯಬಹುದು ಎಂದು ತಿಳಿಸುತ್ತದೆ. ಭಾರತೀಯ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳ ಸಾಂವಿಧಾನಿಕ ಮಾನ್ಯತೆಯ ಬಗ್ಗೆ ಆಳ ಅಧ್ಯಯನ ನಡೆದ ಟಿ.ಎಂ.ಎ ಪೈ ಪ್ರಕರಣದಲ್ಲಿ 13 ಅಂಗದ ನ್ಯಾಯಾಧೀಶರ ತಂಡವು "ಅಲ್ಪಸಂಖ್ಯಾತರ ಧಾರ್ಮಿಕ, ಸಾಂಸ್ಕೃತಿಕತೆಯ ಮೇಲೆ ಯಾವುದೇ ರೀತಿಯಲ್ಲಿ ಸರ್ಕಾರ ಹಸ್ತಕ್ಷೇಪ ನಡೆಸುವಂತಿಲ್ಲ" ಎಂದು ಅಡಿಗೆರೆ ಹಾಕಿ ಸ್ಪಷ್ಟವಾಗಿ ಹೇಳಿದೆ.
ಫ್ಯಾಸಿಸ್ಟ್‌ನ ಸಮಯಸಾಧಕತೆ:
ಕೋಮುವಾದಿ ಮನಸ್ಥಿತಿಗಳು ಮದ್ರಸಾಗಳ ವಿರುದ್ಧ ಷಡ್ಯಂತ್ರ ನಡೆಸುತ್ತಾ ಈವರೆಗೂ ತಲುಪಿದೆ. ಹಾಗಾಗಿ ಆರಂಭದಿಂದಲೇ ಅದರ ಸಾಂವಿಧಾನಿಕ ರಚನೆಯನ್ನು ಪ್ರಸ್ತಾಪಿಸುತ್ತಲೇ ಬಂದಿದೆ. ಮದ್ರಸಾ ಬೋರ್ಡುಗಳ ನಿಷೇಧ, ಮದ್ರಸಾ ಬಂದ್, ಮದ್ರಸಾಗಳಿಗೆ ಸರಕಾರ ನೀಡುತ್ತಿರುವ ಯೋಜನೆಗಳಿಗೆ ತಡೆ ಹಾಕುವಂತೆ ರಾಜ್ಯಗಳಿಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಆದೇಶ ಹೊರಡಿಸಿದೆ. ಇದನ್ನು ನಗಣ್ಯವಾಗಿ ಕಾಣಲು ಸಾಧ್ಯವಿಲ್ಲ. ಫ್ಯಾಸಿಸ್ಟ್ ಶಕ್ತಿಗಳು ನಡೆಸಿಕೊಂಡು ಬಂದ ಮದ್ರಸಾ ವಿರುದ್ಧ ಕುತಂತ್ರದ ಕಟ್ಟಕಡೆಯ ಅಧಿಕೃತ ಪ್ರಯತ್ನ ಎಂದು ನಾವು ಅರ್ಥ ಮಾಡಿಕೊಳ್ಳಬೇಕು.
ಸುಮಾರು ಒಂಭತ್ತು ವರ್ಷಗಳಿಂದ ಕಮಿಷನ್ ನಡೆಸಿದ ಅಧ್ಯಯನದ ಫಲವಾಗಿ ಇದನ್ನು ಪ್ರಕಟಿಸಲಾಗಿದೆ. ಹನ್ನೆರಡು ಪುಟಗಳಿರುವ ಈ ವರದಿ 2009ರಲ್ಲಿ ಹೊರಡಿಸಲಾದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆಯ ನಿರ್ಧಾರವನ್ನು ಎಡವಟ್ಟಿನ ಪಟ್ಟಿಯಲ್ಲಿ ನೋಡುತ್ತಿದೆ. ಆ ಕಡ್ಡಾಯ ಶಿಕ್ಷಣ ಕಾಯಿದೆಯು ಮದ್ರಸಾಗಳಲ್ಲಿ ಅಸಾಧ್ಯವೆಂದೂ, ಅದು ತಾರತಮ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದೆ. ಈ ವರದಿಯು ಸ್ಪಷ್ಟವಾಗಿ ಪೂರ್ವಾಗ್ರಹ ಪೀಡಿತವಾಗಿ ಗೋಚರಿಸುತ್ತಿದೆ.
ಕಡ್ಡಾಯ ಶಿಕ್ಷಣ ಸಾಧ್ಯಗೊಳಿಸುವ 2009 ರ ಕಾಯಿದೆ ಬಯಸಿದ ಗುಣಮಟ್ಟದ ಶಿಕ್ಷಣ ಕೆಲವು ಮದ್ರಸಾಗಳಲ್ಲಿ ದೊರೆಯುತ್ತಿಲ್ಲ ಎನ್ನುವುದು ಸರಿಯಾದ ಆರೋಪವಾಗಿರಬಹುದು. ಕಮಿಷನ್ ಅದರ ಕಾರಣವನ್ನೂ ನೀಡಿದೆ. ಪಠ್ಯಕ್ರಮ, ಸಮವಸ್ತ್ರ, ಪ್ರಾಥಮಿಕ ಸೌಕರ್ಯಗಳು, ಬಿಸಿಯೂಟದಂತಹ ತೃಪ್ತ ಯೋಜನೆಗಳ ಕೊರತೆಯತ್ತ ಬೆರಳು ತೋರಿಸಿದೆ. ಹಾಗಾಗಿ ಮದ್ರಸಾಗಳ ಹಾಗೂ ಅದರ ನಿಯಂತ್ರಣ ಮಂಡಳಿಗಳ ನಿಷೇಧಕ್ಕೆ ಆದೇಶಿಸಿದೆ. ಸರ್ಕಾರದ ಯಾವುದೇ ಯೋಜನೆಗಳು ಮುಂದೆ ತಲುಪದಂತೆ ನೋಡಿಕೊಳ್ಳುವ ಉತ್ಸಾಹದಲ್ಲಿದೆ. ಅಷ್ಟೊಂದು ಅಸಡ್ಡೆಯಿಂದ ಕೂಡಿದ ಕಮಿಷನ್‌ನ ಅದೇಶವಿದು. ಇದು ಒಂದು ಸಮುದಾಯದ ಮೇಲಿನ ಪೂರ್ವ ನಿರ್ಧಾರಿತ ದ್ವೇಷವಷ್ಟೇ. ಅದರ ಭಾಗವಾಗಿ ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನದ ಮದ್ರಸಾಗಳ ಮೇಲೆ ನಿಷೇಧ ಹೇರಲಾಯಿತು. ಅಲಹಾಬಾದ್ ಹೈಕೋರ್ಟ್ ಅದನ್ನು ಸಮರ್ಥಿಸಿತು ಕೂಡಾ. ಸುಪ್ರೀಂ ಕೋರ್ಟ್‌ನ ಸಂಧರ್ಭೋಚಿತ ಮಧ್ಯ ಪ್ರದೇಶ ಅಲ್ಲಿನ ಮದ್ರಸಾಗಳಿಗೆ ಉಳಿಗಾಲಕ್ಕೆ ಕಾರಣವಾಯಿತು. ಮದ್ರಸಾಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಮೂಲಭೂತ ಸೌಕರ್ಯದ ಕೊರತೆಯಾಗಿದ್ದರೆ ಅದನ್ನು ಪೂರೈಸಬೇಕು. ಅಲ್ಲದೆ ಬೋರ್ಡ್‌ಗಳ ನಿಷೇಧ ಬುದ್ಧಿಯಲ್ಲ ಎಂದು ಅವರ ಅವಿವೇಕತನಕ್ಕೆ ಪಾಠ ಹೇಳಿತು.
ಮದ್ರಸಾ: ಇತಿಹಾಸದ ಬೆಳಕಿನಲ್ಲಿ:
ಇಸ್ಲಾಂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಇಸ್ಲಾಮಿನ ಧಾರ್ಮಿಕ, ಸಾಂಸ್ಕೃತಿಕ ಉಳಿವಿಗೆ ಮದ್ರಸಾ ಶಿಕ್ಷಣ ಹೆಚ್ಚಿನ ಪ್ರಾಶಸ್ತ್ಯ ಕಲ್ಪಿಸುತ್ತದೆ. ಪೈಗಂಬರರ ಕಾಲದಿಂದಲೇ ಜ್ಞಾನ ಪ್ರಸರಣಕ್ಕೆ ಕಾಲೋಚಿತ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇಂದಿನ ಮದ್ರಸಾಗಳು 11 ನೆಯ ಶತಮಾನದ ಸಲ್ಜೂಕ್ ಪ್ರಧಾನ ಮಂತ್ರಿ ನಿಝಾಮುಲ್ ಮುಲ್ಕ್ ತೂಸಿರವರ ಧರ್ಮಶಾಲೆಯ ಅನುಕರಣೆಯಂತಿದೆ. ಇರಾನ್, ಖುರಾಸಾನ್, ಮೆಸಪಟೋಮಿಯ ಪ್ರದೇಶಗಳಲ್ಲಿ ಇವರ ಜ್ಞಾನ ಕ್ರಾಂತಿ ಹರಡಿದರು. ಸಾವಿರದಷ್ಟು ಜ್ಞಾನ ಕೇಂದ್ರಗಳನ್ನು ಸ್ಥಾಪಿಸಿದರು. ಒಟ್ಟೋಮನ್ ಸಾಮ್ರಾಜ್ಯವು ತನ್ನ ಒಡಲಲ್ಲಿ ಹಲವು ಮದ್ರಸಾಗಳನ್ನು ಇಟ್ಟುಕೊಂಡಿತ್ತು. ಇಂತಹ ಕೇಂದ್ರಗಳಿಂದಲೇ ಇಪ್ಪತ್ತೊಂದನೆಯ ಶತಮಾನ ಎತ್ತಿ ನೋಡುತ್ತಿರುವ ಇಬ್ನು ಸೀನಾ, ಅಲ್ ಖವಾರಿಝ್ಮಿ, ಇಬ್ನು ಖಲ್ದೂನರಂತಹ ಶ್ರೇಷ್ಠ ವಿದ್ವಾಂಸರು ಹುಟ್ಟಿಕೊಂಡರು.
ಮಧ್ಯಕಾಲದಲ್ಲಿ ಮಧ್ಯಪ್ರಾಚ್ಯದ ಪ್ರಸಿದ್ಧ ನಗರಗಳಾದ ಬುಖಾರಾ, ಸಮರ್ಖಂದ್ ಜಗತ್ತಿಗೆ ಬೆಳಕಾಗಿರುವುದು ಮದ್ರಸಾದ ಉನ್ನತ ಮಾದರಿಯಾಗಿತ್ತು. ಇಂದಿನ ನಿಜಾಮುದ್ದೀನ್‌ನ ಖುವ್ವತುಲ್ ಇಸ್ಲಾಂ ಉತ್ತರ ಭಾರತದ ಪ್ರಥಮ ಮದ್ರಸಾವಾಗಿತ್ತು. ಅದಕ್ಕಿಂತ ಮುಂಚಿತವಾಗಿಯೇ ಅರೇಬಿಯಾದಿಂದ ಕೇರಳಕ್ಕೆ ತಲುಪಿದ ಯಾತ್ರಾಸಂಘ ಚೇರುಮಾನ್ ಪೆರುಮಾಲ್ ಮಸೀದಿಯಲ್ಲಿ ಮದ್ರಸಾ ನಿರ್ಮಿಸಲಾಗಿತ್ತು. ಅದು ಮುಂದುವರೆದು ಮಖ್ದೂಂ ವಿದ್ವಾಂಸರ ನೇತೃತ್ವದ 'ವಿಳಕ್ಕತ್ತಿರಿಕ್ಕಲ್' ಸಂಪ್ರದಾಯಕ್ಕೆ ಬೆಳಕು ನೀಡಿತು. ಆದ್ದರಿಂದಲೇ ಈ ಹೊಸ ಆದೇಶದ ವಿರುದ್ಧ ನಾವು ಸಜ್ಜಾಗಬೇಕಾಗಿದೆ. ಬ್ರಿಟಿಷರ ವಿರುದ್ಧದ ಸೆಟೆದು ನಿಲ್ಲಲು ಇಂತಹ ಮದ್ರಸಾಗಳು ಹಚ್ಚಿದ ಕಿಚ್ಚು ಕಾರಣ ಎಂದು ಕಮಿಷನ್ ಮರೆಯುವಂತಿಲ್ಲ. ಗುಣಮಟ್ಟದ ಕೊರತೆ ಹೊಂದಿರುವ ಮದ್ರಸಾಗಳು ಉತ್ತರ ಭಾರತದಲ್ಲಿದೆ ಎಂಬುದನ್ನು ಒಪ್ಪಿಕೊಳ್ಳಬಹುದು. ಆದರೆ ಅದು ಪರಿಹಾರದ ಕ್ರಮವಲ್ಲ. ಶಿಕ್ಷಕರಿಂದಲೇ ತಾರತಮ್ಯವನ್ನು ಅನುಭವಿಸಬೇಕಾದ ಪ್ರದೇಶದಲ್ಲಿ ಮದ್ರಸಾಗಳು ಜ್ಞಾನ ದಾಹವನ್ನು ನೀಗಿಸುತ್ತಿದೆ. ಹಾಗಾಗಿಯೇ ಇದನ್ನು ಕೇವಲ ಮುಸ್ಲಿಂ ಸಮಸ್ಯೆಯಾಗಿ ಕಾಣುವಂತಿಲ್ಲ. ಪೂರ್ವಾಗ್ರಹ ಪೀಡಿತ ತಾರತಮ್ಯಕ್ಕೆ ಬಳಸಲಾಗುವ ಭಾಷೆ, ಅಸತ್ಯವಾದ ಸಿದ್ಧಾಂತಗಳು ಅದೆಷ್ಟು ಭೀಕರ ಎಂದು ಸ್ಲೋಮೋ ಡಾಂಡ್‌ರವರು ತಮ್ಮ 'ದಿ ಇನ್ವೆಂಶನ್ ಆಫ್ ದಿ ಜೀವಿಷ್ ಪೀಪಲ್' ಎಂಬ ಪುಸ್ತಕದಲ್ಲಿ ಬರೆಯುತ್ತಾರೆ. ಕೋಮುವಾದ ಫ್ಯಾಸಿಸ್ಟ್, ನಾಸಿಸಂನೊಂದಿಗೆ ಮಾತ್ರವಲ್ಲದೆ ಸಯನಿಸಂನ ಜೊತೆಗೂ ಗೆಳೆತನವನ್ನೂ ಬೆಳೆಸಿಕೊಂಡಿದೆ ಎಂಬುದನ್ನು ಮರೆಯಕೂಡದು.
~ ಅನ್ಸೀಫ್ ಮುಈನಿ, ಮಂಚಿ
Opmerkingen