ಜಾಗತಿಕ ಮುಸಲ್ಮಾನರು ಬಹಳ ವಿಜೃಂಭಣೆಯಿಂದ ಆಚರಿಸುವ ಮೌಲಿದ್ ಅಥವಾ ಪೈಗಂಬರ್ ﷺ ರ ಜನ್ಮದಿನಾಚರಣೆಗಳನ್ನು ಸಮಗ್ರ ಅಧ್ಯಯನಕ್ಕೊಳಪಡಿಸಿದ ಜರ್ಮನ್ ಓರಿಯೆಂಟಲಿಸ್ಟ್ ಆನ್ ಮೇರಿ ಶಿಮ್ಮಲ್ ಅವರ ಪ್ರಮುಖ ಕೃತಿ 'ಆಂಡ್ ಮುಹಮ್ಮದ್ ಈಸ್ ಹಿಸ್ ಮೆಸೆಂಜರ್'. ಜಾಗತಿಕವಾಗಿ ವಿವಿಧ ಸಾಂಸ್ಕೃತಿಕ ಹಿನ್ನೆಲೆಯಿರುವ ಮುಸ್ಲಿಮ್ ಸಮುದಾಯಗಳ ಮಧ್ಯೆ ನಡೆಯುವ ಪ್ರವಾದೀ ಜನ್ಮದಿನಾಚರಣೆಗಳು ಮತ್ತು ಮೌಲಿದ್ ವೈವಿಧ್ಯತೆಗಳ ಮೇಲೆ ನಡೆಸಿದ ಅವರ ಆಳವಾದ ಅಧ್ಯಯನ ಕೃತಿ 1984 ರಲ್ಲಿ ಪ್ರಕಟಿಸಲ್ಪಟ್ಟಿತು.
1922 ರಲ್ಲಿ ಜರ್ಮನಿಯ ಎರ್ಫರ್ಟ್ನಲ್ಲಿ ಶಿಮ್ಮಲ್ ಜನಿಸಿದರು. ಬಾಲ್ಯದಿಂದಲೇ ಅರೇಬಿಕ್ ಸಾಹಿತ್ಯ ಮತ್ತು ಕವಿತೆಗಳೊಂದಿಗಿನ ಅವರ ಅತೀವ ಆಸಕ್ತಿ ಇಸ್ಲಾಮಿಕ್ ಅಧ್ಯಯನ ಕ್ಷೇತ್ರದಲ್ಲಿ ಅವರ ಅಪಾರ ಕೊಡುಗೆಗಳಿಗೆ ಹೇತುವಾಯಿತು. ಅವರು 'ಮಧ್ಯಕಾಲೀನ ಇಸ್ಲಾಮಿಕ್ ಈಜಿಪ್ಟ್'ನ ಕುರಿತು ಮಂಡಿಸಿದ ಪ್ರಬಂಧಕ್ಕೆ ಡಾಕ್ಟರೇಟು ಪದವಿ ಪಡೆದುಕೊಂಡರು. ಅಂಕಾರಾ ಮತ್ತು ಹಾರ್ವರ್ಡ್ ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಶಿಕ್ಷಣ ಪಡೆದುಕೊಂಡ ಶಿಮ್ಮಲ್ ಇಸ್ಲಾಮಿಕ್ ಸಂಸ್ಕೃತಿಯ ಮೇಲೆ ಆಳ ಅಧ್ಯಯನ ನಡೆಸಿದರು.
ಅರೇಬಿಕ್, ಫಾರ್ಸಿ, ಉರ್ದು, ಟರ್ಕೀಶ್ ಮುಂತಾದ ಭಾಷೆಗಳಲ್ಲಿ ಅವರ ಪ್ರಾವೀಣ್ಯತೆ ಇಸ್ಲಾಮಿಕ್ ಗ್ರಂಥಗಳ ಆಧಾರದಲ್ಲಿ ವಸ್ತುನಿಷ್ಠ ಅಧ್ಯಯನ ನಡೆಸಲು ಸಹಾಯಕವಾಯಿತು. ಜೊತೆಗೆ, ಹಾರ್ವರ್ಡ್ ವಿಶ್ವವಿದ್ಯಾನಿಲಯದ ಇಂಡೋ-ಮುಸ್ಲಿಂ ಸಂಸ್ಕೃತಿ ಕ್ಷೇತ್ರದ ಹೊಣೆಗಾರಿಕೆ, ಮೆಟ್ರೋಪೊಳಿಟನ್ ಮ್ಯೂಸಿಯಂ ಆಫ್ ಆರ್ಟ್ ಸದಸ್ಯತ್ವ ಮುಂತಾದ ಅಕಾಡೆಮಿಕ್ ವಲಯದೊಂದಿಗಿನ ನಂಟು ಅವರ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿತು.
ತಮ್ಮ ಕೃತಿಯಲ್ಲಿ ಮೌಲಿದ್ ಆಚರಣೆಯನ್ನು ವಿಶ್ಲೇಷಿಸುವಲ್ಲಿ ಮಾನವಶಾಸ್ತ್ರ, ಸಮಾಜಶಾಸ್ತ್ರ ಮತ್ತು ಇತಿಹಾಸ ಈ ರೀತಿ ಬಹುಶಿಸ್ತೀಯ ವಿಧಾನವನ್ನು ಶಿಮ್ಮಲ್ ಅಳವಡಿಸಿಕೊಂಡಿದ್ದಾರೆ. ಇಸ್ಲಾಮಿಕ್ ಆಚರಣೆಗಳನ್ನು ಕೇವಲ ವಿಮರ್ಶಾತ್ಮಕವಾಗಿ ಮಾತ್ರ ಚಿತ್ರೀಕರಿಸುತ್ತಿದ್ದ ಪಾಶ್ಚಿಮಾತ್ಯ-ಓರಿಯಂಟಲಿಷ್ಟ್'ಗಳಿಗೆ ವಿರುದ್ಧವಾಗಿ ಶಿಮ್ಮಲ್ ಈ ಅಧ್ಯಯನವನ್ನು ಕೈಗೊಳ್ಳುತ್ತಾರೆ. ಮೌಲಿದ್ ಕುರಿತಾದ ಅವರ ಅಧ್ಯಯನ ಸಮಗ್ರ ಮತ್ತು ವೈವಿಧ್ಯಪೂರ್ಣವಾದುದು. ಮೌಲಿದ್ ಆಚರಣೆಗಳ ಪ್ರಮುಖ ವೈಶಿಷ್ಟ್ಯತೆಗಳಾದ ಕವಿತೆ ಮತ್ತು ಹಾಡುಗಳನ್ನು ಅವರು ತಮ್ಮ ಅವಲೋಕನಗಳಲ್ಲಿ ಒಳಪಡಿಸುವುದರೊಂದಿಗೆ, ಆ ಮೂಲಕ ಮುಸಲ್ಮಾನರು ಪ್ರವಾದಿ (ﷺ) ರೊಂದಿಗೆ ತೋರುವ ಅಗಾಧ ಪ್ರೇಮವನ್ನು ಬಣ್ಣಿಸುತ್ತಾರೆ. ಆಧ್ಯಾತ್ಮಿಕ ಮತ್ತು ಸಾಮಾಜಿಕ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಇದರ ಪಾತ್ರ ಹಿರಿದು. ಆಳ ಅಧ್ಯಯನಗಳ ಮೂಲಕ ಇಂತಹಾ ಇಸ್ಲಾಮಿಕ್ ಸಮೃದ್ಧ ಸಂಸ್ಕೃತಿಯನ್ನು ಓದುಗರಿಗೆ ಮುಟ್ಟಿಸುವಲ್ಲಿ ಶಿಮ್ಮಲ್ ಸಾಫಲ್ಯತೆಯ ಗಡಿ ತಲುಪುತ್ತಾರೆ.
ಮೌಲಿದ್ ಆಚರಣೆ
ಪುಣ್ಯ ಪ್ರವಾದಿವರ್ಯರು ಜನಿಸಿದ ರಾತ್ರಿಗೆ ಲೈಲತುಲ್ ಖದ್ರಿನ ರಾತ್ರಿಗಿಂತಲೂ ಅತಿ ಮಹತ್ವ ಇದೆಯೆಂದು ಸಾರುವ ತುರ್ಕಿ ಮೂಲದ ಓರ್ವ ದರ್ವೇಶ್ ಹಾಡಿದ ಸಾಲಿನ ಮೂಲಕ ಶಿಮ್ಮಲ್ ಪ್ರವಾದೀ ಜನ್ಮದಿನಾಚರಣೆಯನ್ನು ವಿವರಿಸಲು ಪ್ರಾರಂಭಿಸುತ್ತಾರೆ. ಇಸ್ಲಾಮಿಕ್ ಭಕ್ತಿ ಮತ್ತು ಸಾಮಾಜಿಕ ಸ್ವಾತಂತ್ರ್ಯದ ಪ್ರಮುಖ ಉದಾಹರಣೆಯಾಗಿ ಈ ಮೌಲಿದ್ ಆಚರಣೆಯನ್ನು ಶಿಮ್ಮಲ್ ತಮ್ಮ ಅಧ್ಯಯನದಲ್ಲಿ ಬಣ್ಣಿಸಲು ಶ್ರಮಿಸುತ್ತಾರೆ. ಮೌಲಿದ್ ಕೇವಲ ಒಂದು ಧಾರ್ಮಿಕ ಆಚರಣೆ ಅಲ್ಲವೆಂದೂ, ಹೊರತಾಗಿ ಪ್ರವಾದಿವರ್ಯರೊಂದಿಗಿನ ಮುಸಲ್ಮಾನರ ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಸಂಬಂಧಗಳನ್ನೊಳಗೊಂಡ ಸಂಪ್ರದಾಯವಾಗಿದೆ ಎಂದೂ ಅವರು ಬಲವಾಗಿ ಅಭಿಪ್ರಾಯಪಡುತ್ತಾರೆ.
"ತುರ್ಕಿ, ಭಾರತೀಯ ಉಪಖಂಡ, ಸಿಂಧ್ ಮುಂತಾದ ವಿವಿಧ ಪ್ರದೇಶಗಳ ಮೌಲಿದ್ ಆಚರಣೆಗಳ ವೈವಿಧ್ಯತೆಯನ್ನು ಶಿಮ್ಮಲ್ ಉಲ್ಲೇಖಿಸುತ್ತಾರೆ. ಸ್ಥಳೀಯ ಪದ್ಧತಿಗಳು ಮತ್ತು ಸಂಸ್ಕೃತಿಗಳು ಮೌಲಿದ್ ಆಚರಣೆಯ ವಿಧಾನದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ಅವರು ವಿಶ್ಲೇಷಿಸುತ್ತಾರೆ. ಉದಾಹರಣೆಗೆ, ತುರ್ಕಿಯಲ್ಲಿ ಪ್ರವಾದಿವರ್ಯರ ಜೀವನದ ಮೇಲೆ ಬೆಳಕು ಚೆಲ್ಲುವ ಅಧ್ಯಾಯಗಳನ್ನು ವ್ಯಾಪಕವಾಗಿ ಓದುವ ಮೂಲಕ ಮೌಲಿದ್ ಆಚರಣೆ ವಿಜೃಂಭಣೆಯಿಂದ ನಡೆಸುತ್ತಾರೆ. ಅದೇ ವೇಳೆ ಭಾರತೀಯ ಉಪ ಭೂಖಂಡ ಪ್ರದೇಶಗಳಲ್ಲಿ ಸ್ಥಳೀಯ ಕಾವ್ಯ-ಸಂಗೀತ ರೂಪಗಳ ಸಂಯೋಜನೆ ಹೆಚ್ಚು ಪರಿಣಾಮ ಬೀರಿದೆ" ಎಂದು ಅವರು ಉಲ್ಲೇಖಿಸುತ್ತಾರೆ. ಜಾಗತಿಕವಾಗಿ ವಿಭಿನ್ನ ಸಂಸ್ಕೃತಿಗಳು ಸೇರಿ ಯಾವ ರೀತಿ ಪ್ರವಾದೀ ಜನ್ಮದಿನಾಚರಣೆಯನ್ನು ಸಂಪನ್ನಗೊಳಿಸುತ್ತದೆ ಎಂಬುದನ್ನು ಶಿಮ್ಮಲಿನ ಅಧ್ಯಯನಗಳು ಬೆಳಕಿಗೆ ತರುತ್ತದೆ.
ಮೌಲಿದ್ ಆಚರಣೆಗಳ ಕುರಿತಾದ ವಿವಾದಗಳನ್ನೂ ಅವರು ಉಲ್ಲೇಖಿಸುತ್ತಾರೆ. ಜೊತೆಗೆ, ಇಸ್ಲಾಮಿಕ್ ವಿದ್ವಾಂಸರುಗಳ ನಡುವಿನ ವ್ಯತಿರಿಕ್ತ ಅಭಿಪ್ರಾಯಗಳನ್ನೂ ವಿಶ್ಲೇಷಿಸುತ್ತಾರೆ. ಇಬ್ನ್ ತೈಮಿಯ್ಯಾ ಮುಂತಾದವರು ಅದನ್ನು ನವೀನತೆ (ಬಿದ್ಅತ್) ಯೆಂದು ಬಣ್ಣಿಸಿದರೆ, ಇಬ್ನ್ ಕಸೀರ್, ಇಮಾಮ್ ಸುಯೂತೀ ಮುಂತಾದವರು ಪ್ರಮುಖ ಧಾರ್ಮಿಕ ಆಚರಣೆಯಾಗಿ ಕಂಡರು.
ವಿವಿಧ ರಾಷ್ಟ್ರಗಳ ಮೌಲಿದ್ ಆಚರಣೆಗಳ ಕುರಿತಾದ ಅವರ ಆಳ ಅಧ್ಯಯನ ಮುಸಲ್ಮಾನರೆಡೆಯಲ್ಲಿ ಸಾಮಾಜಿಕ ಸಂಬಂಧ ಗಟ್ಟಿಗೊಳಿಸುವಲ್ಲಿ ಅದು ವಹಿಸಿದ ಪಾತ್ರದ ಕುರಿತು ಮಾಹಿತಿ ನೀಡುತ್ತದೆ. ಪ್ರವಾದೀ ಜನ್ಮದಿನಾಚರಣೆ ಭೌಗೋಳಿಕ ಮತ್ತು ಸಾಂಸ್ಕೃತಿಕ ಗಡಿಗಳಾಚೆಗೆ ಜಾಗತಿಕ ಮುಸಲ್ಮಾನರ ಸಾಮಾಜಿಕ ಒಗ್ಗಟ್ಟನ್ನು ಪ್ರಬಿಂಬಿಸುತ್ತದೆ. ಸುಧೀರ್ಘ ಮುನ್ನುಡಿಯಿಂದ ಪ್ರಾರಂಭಿಸಿ ಹನ್ನೆರಡು ಅಧ್ಯಾಯಗಳ ಮೂಲಕ ಪೈಗಂಬರರ ಜೀವನ ದರ್ಶನ, ಪ್ರವಾದೀ ಅನುರಾಗದ ವ್ಯತಿರಿಕ್ತ ಮೌಲಿದ್ ಆಚರಣೆಗಳ ವಿಶ್ಲೇಷಣೆಯನ್ನು ಶಿಮ್ಮಲ್ ತಮ್ಮ ಅಧ್ಯಯನ ಕೃತಿಯಲ್ಲಿ ನಡೆಸುತ್ತಾರೆ.
ಮುಹಮ್ಮದ್ ಮುಬಶ್ಶಿರ್ ದೇಳಿ
ಕ: ಅಬ್ದುಸ್ಸಲಾಮ್ ಮುಈನಿ ಮಿತ್ತರಾಜೆ
コメント