ಇಸ್ಲಾಂ ಪರಿಚಯಿಸುವ ಕನಿಷ್ಠ ಆರ್ಥಿಕ ನೀತಿ ಅತ್ಯಂತ ಸ್ವಾಗತಾರ್ಹ. ಇದು ಖಲೀಫಾ (Trusteeship) ಎಂಬ ಪರಿಕಲ್ಪನೆಯನ್ನು ಆಧರಿಸಿದೆ. ಸಂಪನ್ಮೂಲಗಳು ಈ ಪರಿಸರದ ಸಕಲ ಜೀವಚರಾಚರಗಳ ಹಕ್ಕು ಎಂಬುದು ಇಸ್ಲಾಮಿನ ಪ್ರಾಥಮಿಕ ದೃಷ್ಟಿಕೋನ.
ಇಸ್ಲಾಮಿಕ್ ಆರ್ಥಿಕ ನೀತಿಯ ಮೂಲವೆಂದರೆ ಮದೀನಾದ ಆರ್ಥಿಕ ಸುಧಾರಾಣೆಗಳಾಗಿವೆ. ಪೈಗಂಬರರು ಮದೀನಾ ನಗರ ನಿರ್ಮಾಣದಲ್ಲಿ ಅಳವಡಿಸಿದ ಆರ್ಥಿಕ ನೀತಿಗಳು ಕಾಲಾಂತರಗಳಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿದೆ. ಮನುಷ್ಯನ ಉಪಜೀವನ ಮಾರ್ಗವಾಗಿ ಸಂಪತ್ತನ್ನು ಸಮೀಪಿಸುವ ಪ್ರವಾದೀ ದೃಷ್ಟಿಕೋನ, ಅನಗತ್ಯವಾಗಿ ಪೋಲುಮಾಡುವ ಸಾಧ್ಯತೆಗಳನ್ನು ಇಲ್ಲವಾಗಿಸುತ್ತದೆ. ಒಬ್ಬ ವಿಶ್ವಾಸಿಯ ಆ
ರ್ಥಿಕ ಕೊಡು-ಕೊಳ್ಳುವಿಕೆಗಳು ಧಾರ್ಮಿಕ ಚೌಕಟ್ಟಿನಲ್ಲಿರಬೇಕೆಂದು ಈ ಮೂಲಕ ಮನದಟ್ಟು ಮಾಡದಬಹುದು.
ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ನೀಡುವ ಪದ್ಧತಿ ಮದೀನಾದಲ್ಲಿ ಬಹಳ ಸಾಮಾನ್ಯವಾಗಿತ್ತು. ಬಹುತೇಕರು ಕೃಷಿಕರಾದ ಕಾರಣ ಮದೀನಾ ನಿವಾಸಿಗಳನ್ನು ಇದು ಇನ್ನೂ ಸಂಕಷ್ಟಕ್ಕೆ ಒಳಪಡಿಸಿತು. ಆ ವೇಳೆ ಪೈಗಂಬರ್ (ಸ.ಅ) ಬಡ್ಡಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಷೇಧಿಸಿದರು. ಆ ಮೂಲಕ ಬಡ್ಡಿ ಸಂಬಂಧಿತವಾಗಿ ನಡೆಯುತ್ತಿದ್ದ ಅಕ್ರಮಗಳು ಯಥೇಚ್ಛ ಕಡಿಮೆಯಾಯಿತು. ಕಾಯಕವೂ ಸೃಷ್ಟಿಕರ್ತನೊಂದಿಗಿನ ಆರಾಧನೆಯ ಭಾಗ ಎಂಬ ಪ್ರವಾದೀ ಮಾತುಗಳು ಮದೀನಾ ನಿವಾಸಿಗಳನ್ನು ಬಡ್ಡಿಯ ಬದಲಿಗೆ ದುಡಿದು ತಿನ್ನಲು ಪ್ರೇರೇರಿಪಿಸಿತು. ಸ್ವತಃ ಕಷ್ಟಪಟ್ಟು ಮಾಡುವ ಕೃಷಿಯು ಉತ್ತಮವಾದ ಕಾಯಕ ಎಂದು ಕಲಿಸುವುದರೊಂದಿಗೆ, ಅನ್ಯರ ಸಂಪತ್ತನ್ನು ಬಡ್ಡಿ ರೂಪದಲ್ಲಿ ಕೊಳ್ಳೆಹೊಡೆದು ಗಳಿಸಿದ ಸಂಪತ್ತಿನಲ್ಲಿ ಅಭಿವೃದ್ಧಿ ಮತ್ತು ತೃಪ್ತಿ ಅಸಾಧ್ಯ ಎಂದು ತಮ್ಮ ಅನುಚರರಿಗೆ ತಿಳಿಹೇಳಿದರು. ಕೃಷಿಕರನ್ನು ಪ್ರೋತ್ಸಾಹಿಸಲು ಕೃಷಿ ತೆರಿಗೆಯಲ್ಲಿ ವಿನಾಯಿತಿ ಮಾಡಿದರು. ಪಾಳು ಬಿದ್ದಿರುವ ಭೂಮಿಯನ್ನು ಕೃಷಿಮಾಡಿ ಸಂಪನ್ನಗೊಳಿಸಿದರೆ ವಿಶೇಷ ಬಹುಮಾನಗಳ ಭರವಸೆ ನೀಡಿ ಕೃಷಿಕರನ್ನು ಹುರಿದುಂಬಿಸಿದರು. ಈ ರೀತಿ ಕೃಷಿ ಮತ್ತು ವ್ಯಾಪಾರ ವಲಯಗಳನ್ನು ಅಭಿವೃದ್ಧಿಗೊಳಿಸುವುದರೊಂದಿಗೆ, ಪ್ರವಾದಿವರ್ಯರು ಮದೀನಾ ನಿವಾಸಿಗಳನ್ನು ಶ್ರಮಜೀವಿಗಳನ್ನಾಗಿ ಮಾರ್ಪಾಡುಗೊಳಿಸಿದರು.
ಇಸ್ಲಾಂ ವ್ಯಾಪಾರದ ಮೌಲ್ಯ ಸಂರಕ್ಷಣೆಯಲ್ಲಿ ಬಹಳ ಜಾಗರೂಕತೆ ವಹಿಸುತ್ತದೆ. ಮಾರ್ಕೆಟಿಂಗ್ ಉತ್ಕೃಷ್ಟತೆಗೆ ಕಳಂಕ ತರುವ ಸಂಪತ್ತು ಸಂಗ್ರಹಣೆ, ಲೂಟಿಯುತ ಲಾಭ ಮುಂತಾದವುಗಳನ್ನು ನಿಷೇಧಿಸಿದರು. ಮಾರ್ಕೆಟಿಂಗ್ ರಚನೆಯ ಮೇಲೆ ಪರಿಣಾಮ ಬೀರುವ ಇಂತಹಾ ವ್ಯವಸ್ಥೆಗಳು ಮದೀನಾದಲ್ಲಿ ಅಂದು ವ್ಯಾಪಕವಾಗಿತ್ತು. ಅದನ್ನು ತಡೆಯಲು ಪ್ರವಾದಿ (ಸ.ಅ) ರವರು ಮದೀನಾದ ಮಾರುಕಟ್ಟೆಗಳಲ್ಲಿ ಮೇಲ್ವಿಚಾರಕರನ್ನು ನೇಮಿಸಿದ್ದರು. ಕೆಲವು ವೇಳೆಗಳಲ್ಲಿ ಖುದ್ದು ತಾವೇ ತಪಾಸಣೆಗಾಗಿ ಹೊರಟಿದ್ದರು ಎಂದು ದಾಖಲಿಸಲ್ಪಟ್ಟಿವೆ. ವ್ಯಾಪಾರಸ್ಥರು ಮತ್ತು ಗ್ರಾಹಕರ ನಡುವೆ ಉತ್ತಮ ಬಾಂಧವ್ಯವನ್ನು ಬೆಳೆಸಲು ಪ್ರೇರೇಪಣೆ ನೀಡಿದರು. ಬೆವರು ಒಣಗುವ ಮುನ್ನವೇ ಕಾರ್ಮಿಕನ ವೇತನ ನೀಡಬೇಕೆಂದು ಪ್ರತಿಪಾದಿಸುವುದರೊಂದಿಗೆ ಅವರೊಂದಿಗಿನ ನಿಲುವನ್ನು ವ್ಯಕ್ತಗೊಳಿಸಿದರು. ಆ ಮೂಲಕ ಮದೀನಾದ ಆರ್ಥಿಕ ನೀತಿಯು ಜಗತ್ತಿನಾದ್ಯಂತ ಸ್ವೀಕಾರಾರ್ಹ ವ್ಯವಸ್ಥೆಯಾಗಿ ಮಾರ್ಪಾಡುಗೊಂಡಿತು.
ಪ್ರವಾದಿಯವರ ಮಿನಿಮಲಿಸ್ಟ್ ಆರ್ಥಿಕ ನೀತಿ :
ಪ್ರವಾದಿವರ್ಯರ ಕನಿಷ್ಠ ಆರ್ಥಿಕ ನೀತಿಯು ತುಂಬಾ ಚರ್ಚೆಗೆ ಒಳಪಟ್ಟಿದೆ. ಸರಳ ಜೀವನ, ಮಿತ ಬಳಕೆ, ಸ್ಪಷ್ಟ ಮುಂದಾಲೋಚನೆಯೊಂದಿಗಿನ ವ್ಯವಹಾರ ಮುಂತಾದವುಗಳು ಈ ಮಿನಿಮಲಿಸ್ಟ್ ಮೂಲಕ ಇರುವ ಉದ್ದೇಶ. ಕನಿಷ್ಠ ಆರ್ಥಿಕ ನೀತಿಯನ್ನು ಹಿಂಬಾಸುವುದರ ಮೂಲಕ ಸಂಪತ್ತಿನ ಮಿತ ಬಳಕೆಯನ್ನು ರೂಢಿಸಿಕೊಂಡು ನೆಮ್ಮದಿಯ ಜೀವನ ಸಾಗಿಸಬಹುದು. "ಸರ್ವ ಜೀವಜಾಲಗಳಿಗೂ ಅದರದ್ದೇ ಆದ ನೈಸರ್ಗಿಕ ಸಂಪನ್ಮೂಲಗಳನ್ನು ನಾವು ಒದಗಿಸಿದ್ದೇವೆ" ಎಂದು ಖುರ್ಆನ್ ಪ್ರತಿಪಾದಿಸುತ್ತದೆ. ನಮ್ಮ ಸಂಪತ್ತಿನ ಬಳಕೆ ಅತಿಯಾದರೆ ಅದು ಪ್ರಕೃತಿಯೊಂದಿಗಿನ ಶೋಷಣೆಯಾಗುತ್ತದೆ. ಮಿನಿಮಲಿಸಂ ವ್ಯವಸ್ಥೆಯನ್ನು ಕಡೆಗಣಿಸುವುದರ ಮೂಲಕ ನಾವು ಹಲವು ವಿಧದ ಆರ್ಥಿಕ ತೊಂದರೆಗಳಿಗೆ ಒಳಪಡಬೇಕಾಗಿ ಬರುತ್ತದೆ. ಸಂಪತ್ತಿನ ಅತಿಯಾದ ಬಳಕೆ ಸಮಾಜದಲ್ಲಿ ಅಸಮಾನತೆ ಉಂಟು ಮಾಡುತ್ತದೆ ಎಂದು ಅಧ್ಯಯನಗಳು ತಿಳಿಸುತ್ತದೆ. ಇಸ್ಲಾಂ ಮಿನಿಮಲಿಸ್ಟ್ ವ್ಯವಸ್ಥೆಯನ್ನು ಸ್ವೀಕರಿಸಿದ ರೀತಿ ಬಹಳ ಉತ್ತಮವಾಗಿದೆ. ಇಸ್ಲಾಂ ಪರಿಚಯಿಸುವ ಖಲೀಫಾ (Trusteeship) ಎಂಬ ಪರಿಕಲ್ಪನೆಯಲ್ಲಿ ಸಂಪತ್ತಿನ ಮಿತ ಬಳಕೆಯ ನೀತಿಯ ಅನುಸಂಧಾನ ಎದ್ದು ಕಾಣುತ್ತದೆ. ನೈಸರ್ಗಿಕ ಸಂಪನ್ಮೂಲಗಳು ಕೇವಲ ಮಾನವನ ಹಕ್ಕಲ್ಲವೆಂದೂ ಜಗತ್ತಿನ ನೈಸರ್ಗಿಕ ವ್ಯವಸ್ಥೆಯ ಭಾಗವಾದ ಸಕಲ ಜೀವಚರಾಚರಗಳಿಗೂ ಸಂಬಂಧಿಸಿದ್ದೆಂದೂ ಆಗಿದೆ ಇಸ್ಲಾಮಿಕ್ ದೃಷ್ಟಿಕೋನ. ಮಿನಿಮಲಿಸಮ್ ಮೂಲಕ ಸಂಪತ್ತಿನ ದುರ್ಬಳಕೆಗೆ ಕಡಿವಾಣ ಹಾಕಲು ಸಾಧ್ಯವಾಯಿತು.
ಒಬ್ಬ ಬಡವ ಪ್ರವಾದಿಯವರ ಸನ್ನಿಧಿಗೆ ಬಂದನು. ಆತನ ಬಳಿ ಏನಿದೆಯೆಂದು ತಿಳಿಯಲು ಪ್ರವಾದಿವರ್ಯರು ಸಹಚರರೊಂದಿಗೆ ಅನುಮತಿಸಿದರು. ಬಳಿಕ ಎರಡು ದಿರ್ಹಮ್ ನೀಡಿ ಆತನ ಬಳಿಯಿದ್ದ ಹಾಸಿಗೆ ಮತ್ತು ಹೊದಿಕೆಯನ್ನು ಖರೀದಿಸಿದರು. ನಂತರ ಆ ವ್ಯಕ್ತಿಯೊಂದಿಗೆ "ಒಂದು ದಿರ್ಹಮಿನಲ್ಲಿ ಆಹಾರ ಧಾನ್ಯಗಳನ್ನು ಖರೀದಿಸಿ ಮತ್ತು ಇನ್ನೊಂದು ದಿರ್ಹಮ್ ಉಪಯೋಗಿಸಿ ಕೊಡಲಿ(Axe) ಖರೀದಿಸಿ ಜೀವನ ಮಾರ್ಗವನ್ನು ಕಂಡುಕೊಳ್ಳಿ" ಎಂದರು ಪ್ರವಾದಿವರ್ಯರು. ಸಂಪತ್ತನ್ನು ಅಮಿತ ಬಳಕೆ ಮಾಡಿ ಸ್ವತಃ ತಮ್ಮನ್ನು ಸಂಕಷ್ಟಕ್ಕೊಳಪಡಿಸದೆ ನಿರ್ಧಿಷ್ಟ ರೀತಿಯಲ್ಲಿ ಜೀವನ ಸಾಗಿಸಲು ಕಲ್ಪಿಸುತ್ತಿದ್ದರು. 2020 ರಲ್ಲಿ ಕಾಲಿಫೋರ್ನಿಯ ವಿಶ್ವವಿದ್ಯಾನಿಲಯದ ಅಧೀನದಲ್ಲಿ ನಡೆದ ಒಂದು ಅಧ್ಯಯನದಲ್ಲಿ ಮಿನಿಮಲಿಸಮ್ ಕುರಿತು ಬ್ರೇಕ್ಲೇ ಹೇಳುತ್ತಾರೆ ; "ಮಿನಿಮಲಿಸಮ್ ಕಾರ್ಯಗತಗೊಳಿಸಿದ ಮನೆಗಳಿಂದಾಗಿದೆ ಅತೀ ಹೆಚ್ಚಿನ ಹೂಡಿಕೆಗಳು ಆರ್ಥಿಕ ವ್ಯವಸ್ಥೆಗೆ ದೊರಕುತ್ತಿರುವುದು". ಉತ್ಪನ್ನಗಳು ಅನವಶ್ಯಕವಾಗಿ ನಶಿಸುವುದನ್ನು ಇದು ತಡೆಗಟ್ಟುತ್ತದೆ. ಯು.ಎನ್ ಅಧೀನದ ಆಹಾರ ಮತ್ತು ಕೃಷಿ ಸಂಸ್ಥೆ ಇತ್ತೀಚೆಗೆ ಹೊರತಂದ ಪಟ್ಟಿಯನ್ನು ಜಗತ್ತು ಗಾಬರಿಯಿಂದ ನೋಡಿತು. ಮಾನವನು ಬಳಕೆ ಮಾಡುತ್ತಿರುವ ಪೈಕಿ ಮೂರನೆಯ ಒಂದರಷ್ಟು ಭಾಗ ಪೋಲಾಗುತ್ತಿದೆ ಎಂದಾಗಿತ್ತು ಅಧ್ಯಯನ. ಅದಕ್ಕಿರುವ ಪ್ರಮುಖ ಮೂರು ಕಾರಣಗಳನ್ನು ಅದು ಈ ರೀತಿ ನೀಡಿತ್ತು. ಅಧಿಕ ಉತ್ಪಾದನೆ, ದಾಸ್ತಾನು ಶೇಖರಣೆಗೆ ಸಮರ್ಥ ಗೋಡಾನುಗಳ ಕೊರತೆ ಹಾಗೂ ಗ್ರಾಹಕರ ವರ್ತನೆ ಮುಂತಾದವುಗಳು. ನಾವು ಆಹಾರ ಪದಾರ್ಥಗಳನ್ನು ಪೋಲು ಮಾಡಬಾರದೆಂದೂ, ಮಿನಿಮಲ್ ಜೀವನ ಶೈಲಿಗೆ ಬದಲಾಗಬೇಕೆಂದೂ, ಭಾರತೀಯ ಮೂಲದ ಅಮೇರಿಕಾದ ಅರ್ಥಶಾಸ್ತ್ರಜ್ಞ ರಾಜ್ ಪಟೇಲ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಮಿನಿಮಲಿಸಮಿನ ಜೊತೆಗೇ ಜಗತ್ತಿನಾದ್ಯಂತ ಬೆಳೆದು ಬಂದ ಆರ್ಥಿಕ ಪರಿಕಲ್ಪನೆಯಾಗಿದೆ 'ಶೇರಿಂಗ್ ಇಕ್ಕಾನಮಿ'. ನೈಸರ್ಗಿಕ ಸಂಪನ್ಮೂಲಗಳಲ್ಲಿ ಸಮಾಜದ ಎಲ್ಲಾ ಜನರೂ ವ್ಯಾಪಾರಿಗಳು ಮತ್ತು ಗ್ರಾಹಕರಾಗುವ ಈ ವ್ಯವಸ್ಥೆಯನ್ನು ಇಸ್ಲಾಂ ಹುರಿದುಂಬಿಸುತ್ತಿದೆ. ಪ್ರವಾದಿ (ಸ.ಅ) ರವರು ಹೇಳುತ್ತಾರೆ : "ನಿಮ್ಮ ಪೈಕಿ ಉತ್ತಮನು ಪರೋಪಕಾರಿಯಾಗಿರುತ್ತಾನೆ". ಮೂಲಭೂತವಾಗಿ ಮಾನವನಿಗೆ ಅನಿವಾರ್ಯವಾದ ಮೂರು ಸೌಲಭ್ಯಗಳ ಕುರಿತು ಪ್ರವಾದಿವರ್ಯರು ವಿವರಿಸುತ್ತಾರೆ. ಮನೆ, ಬಟ್ಟೆ, ಆಹಾರ. ದುಂದು ವೆಚ್ಚ ಮಾಡಬಾರದೆಂದೂ, ಸಮಂಜಸವಾದ ಉದ್ದೇಶಗಳಿಗಾಗಿ ಖರ್ಚು ಮಾಡಬೇಕೆಂದೂ ಮಿನಿಮಲಿಸ್ಟ್ ವ್ಯವಸ್ಥೆಯ ಮೂಲಕ ಪ್ರವಾದಿವರ್ಯರು ಪ್ರತಿಪಾದಿಸಿದರು.
ಝಕಾತ್ ವ್ಯವಸ್ಥೆ :
ಹಿಜಿರ ಎರಡನೆಯ ವರ್ಷದಲ್ಲಾಗಿತ್ತು ಝಕಾತ್ ವ್ಯವಸ್ಥೆ ಜಾರಿಗೊಳಿಸುವುದು. ಇದಕ್ಕೂ ಮೊದಲು ಐಛ್ಛಿಕ ದೇಣಿಗೆಯಾಗಿತ್ತು ರಾಜ್ಯದ ಉಳಿತಾಯ. ಝಕಾತ್ ಪ್ರೇರಿತ ಸೂಕ್ತಗಳು ಮಕ್ಕಾದಲ್ಲಿಯೇ ಅವತೀರ್ಣಗೊಂಡಿದ್ದರೂ ಕಡ್ಡಾಯ ಸಂಪ್ರದಾಯವಾಗಿ ಘೋಷಿಸಿರಲಿಲ್ಲ. ಹಣ, ಕೃಷಿ, ವ್ಯಾಪಾರ, ಮತ್ತು ಜಾನುವಾರುಗಳ ಮೇಲೆ ಇಸ್ಲಾಂ ಸ್ಥಿರ ಪಾಲು ಝಕಾತ್ ಕಡ್ಡಾಯಗೊಳಿಸಿದೆ. ನೀಡಬೇಕಾದ ಜನರನ್ನು ಖುರ್ಆನ್ ಸೂಕ್ತಗಳ ಮೂಲಕ ಸ್ಪಷ್ಟಗೊಳಿಸಿದೆ. ಝಕಾತ್ ಸಂರಕ್ಷಣೆಗಾಗಿ ಬಿಲಾಲ್ (ರ.ಅ) ರವರ ಮೇಲ್ನೋಟದಲ್ಲಿ ವಿಶೇಷ ಕೊಠಡಿಗಳ ವ್ಯವಸ್ಥೆ ಮಾಡಲಾಗಿತ್ತು.
ವೈಯಕ್ತಿಕ ಮತ್ತು ಸಾಮಾಜಿಕವಾಗಿ ಹಲವಾರು ಗುಣಗಳನ್ನು ಝಕಾತ್ ಮುಂದಿಡುತ್ತದೆ. ಝಕಾತ್ ಎಂಬ ಪದದ ಅರ್ಥವೇ ಸೂಚಿಸುವ ರೀತಿ ಆಂತರಿಕ ಸಂಸ್ಕರಣೆಯಾಗಿದೆ ಪ್ರಾಥಮಿಕ ಉದ್ದೇಶ. ಜಿಪುಣತನ, ಅತಿಯಾದ ಖರ್ಚು ಮುಂತಾದ ಆರ್ಥಿಕ ಸಂಕುಚಿತತೆಯಿಂದ ಶ್ರೀಮಂತನನ್ನು ಪಾರು ಮಾಡುತ್ತದೆ. ರಾಷ್ಟ್ರದ ಅರ್ಥವ್ಯವಸ್ಥೆಯಲ್ಲಿ ಗಣನೀಯ ಕೊಡುಗೆಗಳನ್ನು ಝಕಾತ್ ವ್ಯವಸ್ಥೆ ನೀಡಿದೆ. ಅರ್ಹ ವ್ಯಕ್ತಿಗಳಿಗೆ ಸಂಪತ್ತು ವಿಕೇಂದ್ರೀಕರಣಗೊಳ್ಳುವುದರ ಮೂಲಕ ಆರ್ಥಿಕ ಸ್ಥಿರತೆ ಹೆಚ್ಚುತ್ತಿದೆ.
ಆಧುನಿಕ ತೆರಿಗೆ ವ್ಯವಸ್ಥೆಯೊಂದಿಗೆ ಝಕಾತನ್ನು ಸಂಪೂರ್ಣವಾಗಿ ತುಲನೆಗೊಳಿಸುವುದು ಅಸಾಧ್ಯ. ಆದಾಯ ಆಧಾರಿತವಾಗಿದೆ ಪ್ರಸ್ತುತ ತೆರಿಗೆ ವ್ಯವಸ್ಥೆಗಳು. ಖರ್ಚು ವೆಚ್ಚಗಳ ನಂತರ ಉಳಿತಾಯದ ಸಂಪತ್ತಿಗೆ ಇಸ್ಲಾಂ ತೆರಿಗೆ ಹೇರಿಕೆ ಮಾಡುತ್ತದೆ. ಈ ನಿಟ್ಟಿನಲ್ಲಿ ಮಿನಿಮಲಿಸಮ್ ಇಲ್ಲಿನ ಆರ್ಥಿಕ ವ್ಯವಸ್ಥೆಯ ಅಭಿವೃದ್ಧಿಗೆ ಬಹಳ ಸೂಕ್ತ ಪರಿಹಾರವಾಗಿದೆ.
ಅಲ್- ವಾರಿಸ್ ಮುಶ್ಫಿಕ್
ಕ : ಅಬ್ದುಸ್ಸಲಾಮ್ ಮುಈನಿ, ಮಿತ್ತರಾಜೆ
💜