ಓರ್ವ ಕ್ಯಾಥೋಲಿಕ್ ಮಹಿಳೆ ನಿರಂತರ ಇಸ್ಲಾಂ ಮತ್ತು ಪೈಗಂಬರರ ಬಗ್ಗೆ ನಡೆಸಿದ ಅಧ್ಯಯನದ ಫಲವಾಗಿ 'ಮುಹಮ್ಮದ್: ಎ ಬಯೋಗ್ರಫಿ ಆಫ್ ದಿ ಪ್ರೊಫೆಟ್' ಮತ್ತು 'ಇಸ್ಲಾಂ : ಎ ಶಾರ್ಟ್ ಹಿಸ್ಟರಿ' ಎಂಬ ಎರಡು ಕೃತಿಗಳು ಹುಟ್ಟಿಕೊಂಡಿತು. ಹೊಸತನದ ಹುಡುಕಾಟದ ವೇಳೆ ತನ್ನನ್ನಾವರಿಸಿದ ಅತೀವ ಕುತೂಹಲವು ಧಾರ್ಮಿಕ ತೌಲನಿಕ ಅಧ್ಯಯನದಲ್ಲಿ ವಿದ್ವಾಂಸೆಯಾದ ಬ್ರಿಟಿಷ್ ಮಹಿಳೆ ಪೈಗಂಬರರ ಬಗ್ಗೆ ಆಳ ಅಧ್ಯಯನ ನಡೆಸಲಿಕ್ಕಿರುವ ಪ್ರೇರಣೆ.
ಪೈಗಂಬರರು ತಮ್ಮ ನಲ್ವತ್ತನೆಯ ವಯಸ್ಸಿನಲ್ಲಿ ಪ್ರವಾದಿತ್ವ ಸ್ವೀಕರಿಸುವ ಪ್ರಕ್ರಿಯೆಯನ್ನು, ಜಾಗತಿಕ ಇತಿಹಾಸದಲ್ಲಿ ಒಂದು ಹೊಸ ಪರ್ವವಾಗಿ ಕರಣ್ ಆಂ ಸ್ಟ್ರಾಂಗ್ ಬಣ್ಣಿಸುತ್ತಾರೆ. ಅರಬ್ ಸಮೂಹ ಅಂದು ಎದುರಿಸುತ್ತಿದ್ದ ಹಲವು ಸಮಸ್ಯೆಗಳಿಂದ ಪ್ರವಾದಿವರ್ಯರು ಮುಕ್ತರಾಗಿದ್ದರು. ಸಂಪತ್ತಿನ ಅತಿ ವ್ಯಾಮೋಹ ಅರಬ್ ಬುಡಕಟ್ಟುಗಳ ನಡುವೆ ಪರಸ್ಪರ ಕಂದಕ ತೋಡಿತು. ಈ ಮಧ್ಯೆ ಹಿರಾ ಗುಹೆಯಲ್ಲಿ ಧ್ಯಾನಸ್ಥರಾಗಿದ್ದ ಪ್ರವಾದಿವರ್ಯರನ್ನು ಒಂದು ವಿಶೇಷ ಆಧ್ಯಾತ್ಮಿಕ ಚೈತನ್ಯ ಆವರಿಸಲಾರಂಭಿಸಿತು. ಹಲವು ದಿನಗಳ ಕಾಲ ಏಕಾಂತತೆಯಲ್ಲಿದ್ದ ಪೈಗಂಬರರಿಗೆ ಕ್ರಿ.ಶ 610 ರಂಝಾನ್ 10 ರಂದು ಅವತೀರ್ಣಗೊಂಡ ಖುರ್ಆನ್ ಸೂಕ್ತಗಳು ಜಗತ್ತಿನಲ್ಲಿ ಉತ್ತಮ ಮಾನವನ ಜೀವನ ಶೈಲಿಗೆ ದಾರಿದೀಪವಾಯಿತು ಎಂದು ಲೇಖಕಿ ಅಭಿಪ್ರಾಯಪಡುತ್ತಾರೆ.
ಸರಳ ಸಂದೇಶಗಳನ್ನು ಜನರೆಡೆಯಲ್ಲಿ ಅವರು ಪ್ರಚುರಪಡಿಸಿದರು. ಪೈಗಂಬರರು ಅರೇಬಿಯನ್ನರ ಮಧ್ಯೆ ಹೊಸ ದೈವಿಕ ಸಿದ್ಧಾಂತಗಳನ್ನು ಪರಿಚಯಿಸಲಿಲ್ಲ. ಹೊರತಾಗಿ, ಏಕ ದೈವಸಿದ್ಧಾಂತಗಳ ಬಗ್ಗೆ ಅಲ್ಲಿನ ನಿವಾಸಿಗಳಿಗೆ ಮೊದಲೇ ತಿಳಿದಿತ್ತು. ಆ ವೇಳೆ ಪ್ರವಾದಿವರ್ಯರು ಹೊಸ ಧರ್ಮವನ್ನು ಅರಬಿಗಳೆಡೆಯಲ್ಲಿ ಪರಿಚಯಿಸಿದರು ಅನ್ನುವುದಕ್ಕಿಂತ ಕೊಲೆ, ಸುಲಿಗೆ, ಅನ್ಯಾಯಗಳನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ದ ಒಂದು ಸಮೂಹಕ್ಕೆ ಸಹಿಷ್ಣುತಾ ಬಾಳ್ವೆಯನ್ನು ಕಲಿಸಿಕೊಟ್ಟರು ಎಂಬ ನೆಲೆಗಟ್ಟಿನಲ್ಲಿ ಆ ಪ್ರಕ್ರಿಯೆಯನ್ನು ಅಭ್ಯಸಿಸುವುದು ಸೂಕ್ತ ಎನ್ನುತ್ತಾರೆ ಲೇಖಕಿ. ಹೀಗೆ ಆಂ ಸ್ಟ್ರಾಂಗ್ ಅವರ ಅಧ್ಯಯನಗಳು ನೈಜ ಚಾರಿತ್ರಿಕ ಹಿನ್ನೆಲೆಯನ್ನು ಕೆದಕುತ್ತಾ ಹೋಗುತ್ತದೆ.
ಪೈಗಂಬರರು ಜನರನ್ನು ಸತ್ಪಥದತ್ತ ಆಹ್ವಾನಿಸಲು ಪ್ರಾರಂಭಿಸಿದ ವೇಳೆ ಪವಿತ್ರ ಖುರ್ಆನ್ ವಹಿಸಿದ ಪಾತ್ರ ಅಪಾರವಾದುದು. ಖುರ್ಆನ್ ಅಧ್ಯಾಯಗಳು ಆರಂಭಿಕ ವೇಳೆಯಲ್ಲಿ ಅರೇಬಿಯಾದಲ್ಲಿ ಇಸ್ಲಾಮ್ ಬೆಳೆಯಲು ಕಾರಣವಾಯಿತು ಎಂದು ಆಂ ಸ್ಟ್ರಾಂಗ್ ದಾಖಲಿಸುತ್ತಾರೆ. ಹಲವು ಖುರೈಶಿಗಳು ಖುರ್ಆನಿನ ಉತ್ಕೃಷ್ಟ ಸಾಹಿತ್ಯ ಸಮೃದ್ಧಿ ಅರಿತು ಇಸ್ಲಾಂ ಸ್ವೀಕರಿಸಿದರು. ಖಲೀಫಾ ಉಮರ್'ಬಿನ್ ಖತ್ತಾಬರ ಘಟನೆಯನ್ನು ಉಲ್ಲೇಖಿಸಿ ತಮ್ಮ ಈ ಅಧ್ಯಯನವನ್ನು ಲೇಖಕಿ ದೃಢೀಕರಿಸುತ್ತಾರೆ.
ಪ್ರವಾದಿವರ್ಯರ ಹೊಸ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬೋಧನೆಗಳು ಇಸ್ಲಾಮ್ ಎಂದು ಕರೆಯಲ್ಪಟ್ಟಿತು. ತಾನು ಎಂಬ ಅಹಂ-ಗುಂಗಿನಲ್ಲಿ ತೇಲುತ್ತಿದ್ದ ಮಾನವನಿಗಿರುವ ಆಧ್ಯಾತ್ಮಿಕ ಚಿಕಿತ್ಸೆ ಎಂಬ ನಿಟ್ಟಿನಲ್ಲಾಗಿತ್ತು ಪೈಗಂಬರರು ಸಾಷ್ಟಾಂಗ ಪ್ರಣಾಮಗಳಿಗೆ ಹೆಚ್ಚು ಒತ್ತು ನೀಡಿದ್ದು ಎಂದು ಆಮ್ ಸ್ಟ್ರಾಂಗ್ ಅಭಿಪ್ರಾಯಪಡುತ್ತಾರೆ. ಕುಟುಂಬ ಮಹಿಮೆಯ ಆಧಾರದಲ್ಲಿ ತಾರತಮ್ಯ ವ್ಯಾಪಕವಾಗಿದ್ದ ವೇಳೆ ಇಸ್ಲಾಂ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿತು.
"ಇಸ್ಲಾಮಿನ ಯುದ್ಧಗಳೊಂದಿಗಿನ ಅನುಸಂಧಾನ ಮತ್ತು ಪೈಗಂಬರರ ಅಹಿಂಸಾ ತತ್ವಗಳನ್ನು ಕರಣ್ ಆಳವಾಗಿ ಅಧ್ಯಯನಕ್ಕೊಳಪಡಿಸಿದರು. ಇತಿಹಾಸಕಾರರ ಪೈಕಿ ಯಾರೂ ಅಷ್ಟಾಗಿ ತಲುಪದ ಕೆಲವು ಹೊಸ ಚಾರಿತ್ರಿಕ ನೈಜ ಬೆಳಕಿನತ್ತ ಅವರು ತಮ್ಮ ಅಧ್ಯಯನ ಕ್ಷೇತ್ರವನ್ನು ವಿಶಾಲಗೊಳಿಸಿದರು."
ಕ್ರೈಸ್ತ ಧರ್ಮದೊಂದಿಗಿನ ಇಸ್ಲಾಮಿನ ತೌಲನಿಕ ಅಧ್ಯಯನಗಳು ಕರಣ್ ಅವರ ಅವಲೋಕನಗಳಲ್ಲಿ ಎದ್ದು ಕಾಣುತ್ತದೆ. ಮುಹಮ್ಮದರ ಸಂದೇಶಗಳು ಅಬ್ರಹಾಂ, ಮೋಷಾ, ದಾವೂದ್, ಸೋಳೋಮನ್ ಮುಂತಾದ ಸಂದೇಶವಾಹಕರ ಸಂದೇಶಗಳೊಂದಿಗೆ ಸಾಮ್ಯತೆ ಇದೆ ಎಂದೂ, ಅರೇಬಿಯನ್ನರಿಗೆ ತಿಳಿಯದ ಪ್ರವಾದಿಯನ್ನು ಖುರ್ಆನ್ ಪರಿಚಯಿಸಲಿಲ್ಲ ಎಂದೂ ಅವರು ವಿಶ್ಲೇಷಿಸುತ್ತಾರೆ. ಯಹೂದಿಗಳೊಂದಿಗೆ ಉತ್ತಮ ರೀತಿಯಲ್ಲಿ ವ್ಯವಹಾರ ನಡೆಸಲು ನೀಡಿದ ಕರೆಗಳು ಮದೀನಾದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಯಿತು.
ಆಕ್ಸಿಯನ್ ಯುಗ ಅಥವಾ ಬಿ.ಸಿ.ಇ 700 ರಿಂದ 200 ರ ವರೆಗೆ ಜಗತ್ತಿನಲ್ಲಿ ಹಲವಾರು ಧರ್ಮಗಳು ಉದಯಿಸಿತು. ಆದರೆ ಇಸ್ಲಾಮ್ ಜಗತ್ತಿನ ಮುಂದಿಟ್ಟ ವಿಚಾರಧಾರೆಗಳು ವಿಶ್ವವ್ಯಾಪ್ತಿಯಾಯಿತು. ತಮ್ಮ ಬುಡಕಟ್ಟುಗಳ ಮಧ್ಯೆ ಆರಾಧಿಸಲ್ಪಡುತ್ತಿದ್ದ ಮನಾತ್ತ, ಲಾತ, ಉಝಾದಂತಹ ವಿಗ್ರಹಗಳ ಬದಲಾಗಿ ಅಲ್ಲಾಹನನ್ನು ಸಾಮಾನ್ಯ ಜನರ ಮನದಾಳದಲ್ಲಿ ಭದ್ರಗೊಳಿಸುವಲ್ಲಿ ಪೈಗಂಬರರು ಯಶಸ್ವಿಯಾದರು.
ಪ್ರವಾದಿವರ್ಯರ ಬಹುಪತ್ನಿತ್ವದ ವಿಷಯದಲ್ಲಿ ಪಾಶ್ಚಾತ್ಯ ಜಗತ್ತು ಮಾಡಿದ ವ್ಯಂಗ್ಯಗಳು ಅಪಾರ್ಥವಾದುದು. ಮಕ್ಕಾದಲ್ಲಿ ಬಹುಪತ್ನಿತ್ವ ಸಂಪ್ರದಾಯ ಸಾಮಾನ್ಯವಾಗಿದ್ದರೂ, ಮುಹಮ್ಮದರು ವರಿಸಿದ್ದು ಕೇವಲ ಖದೀಜಾರನ್ನು ಮಾತ್ರ. ಆದರೆ, ಮದೀನಾದಲ್ಲಿ ವಿವಾಹವಾದ ಹಿಂದಿನ ಕಾರಣಗಳು ಅಪಾರ. ಇನ್ನಿತರ ಬುಡಕಟ್ಟುಗಳೊಂದಿಗಿನ ನಂಟು ಬೆಳೆಸುವಿಕೆ, ವಿವಿಧ ವಿವಾಹ ಸಂಬಂಧದ ಅನಿವಾರ್ಯತೆ ಉಂಟುಮಾಡಿತು ಎಂದು ಆಮ್ ಸ್ಟ್ರಾಂಗ್ ದಾಖಲಿಸುತ್ತಾರೆ.
ಇಸ್ಲಾಮಿನ ಯುದ್ಧಗಳೊಂದಿಗಿನ ಅನುಸಂಧಾನ ಮತ್ತು ಪ್ರವಾದಿವರ್ಯರ ಅಹಿಂಸಾ ತತ್ವಗಳನ್ನು ಕರಣ್ ಆಳವಾಗಿ ಅಧ್ಯಯನಕ್ಕೊಳಪಡಿಸಿದರು. ಇತಿಹಾಸಕಾರರ ಪೈಕಿ ಯಾರೂ ಅಷ್ಟಾಗಿ ತಲುಪದ ಕೆಲವು ಹೊಸ ಚಾರಿತ್ರಿಕ ನೈಜ ಬೆಳಕಿನತ್ತ ಅವರು ತಮ್ಮ ಅಧ್ಯಯನ ಕ್ಷೇತ್ರವನ್ನು ವಿಶಾಲಗೊಳಿಸಿದರು. ಪ್ರಸ್ತುತ ಯುದ್ಧ ನೀತಿಗಳ ಆಧಾರದ ಮೇಲೆ ಅಂದಿನ ಕಾಲದ ಯುದ್ಧಗಳನ್ನು ಅಭ್ಯಸಿಸಲು ಸಾಧ್ಯವಿಲ್ಲ. ರಕ್ತದೋಕುಳಿ ಹರಿಸದೆ ಅರೇಬಿಯನ್ ಬುಡಕಟ್ಟುಗಳ ಮಧ್ಯೆ ಪರಸ್ಪರ ಬಾಂಧವ್ಯ ಬೆಸೆಯಲು ಸಾಧ್ಯವಾದದ್ದು ಜಗತ್ತು ಬೆರಗುಗಣ್ಣಿನಿಂದ ನೋಡಬೇಕಾದ ಐತಿಹಾಸಿಕ ವಾಸ್ತವವಾಗಿದೆ. ಕಾಲಾಂತರಗಳಲ್ಲಿ ಜಾಗತಿಕ ಇತಿಹಾಸದಲ್ಲಿ ಉಂಟಾದ ಬದಲಾವಣೆಯ ಮೇಲೆ ಅವರು ಆಳವಾಗಿ ಬೆಳಕು ಚೆಲ್ಲುತ್ತಾರೆ.
ಮುಹಮ್ಮದ್ ಕೆ ಪಾರಕ್ಕಡವ್
ಕ : ಅಬ್ದುಸ್ಸಲಾಮ್ ಮುಈನಿ ಮಿತ್ತರಾಜೆ
Commentaires