top of page
Writer's pictureAshraf Navoor

ಕಶ್ಫುಲ್ ಮಹ್ಜೂಬ್: ಸೂಫಿ ಸಿದ್ಧಾಂತ ದರ್ಶನ



ಸೂಫಿಸಂ ಬಗ್ಗೆ ಹಲವು ಕೃತಿಗಳು ಬಂದಿವೆ. ಹಿಜರಿ ಶಕೆ ಐದನೇ ಶತಮಾನದಲ್ಲಿ ಶೈಖ್ ಅಲಿಯ್ಯುಲ್ ಹುಜ್‌ವೀರಿ ಬರೆದ ಕಶ್ಫುಲ್ ಮಹ್ಜೂಬ್ ಅವುಗಳ ಪೈಕಿ ಗಮನ ಸೆಳೆಯುವ ಕೃತಿ. ಇದಕ್ಕೂ ಮುನ್ನ ಅರಬಿ ಭಾಷೆಯಲ್ಲಿ ಹಲವು ಗ್ರಂಥಗಳು ಬಂದಿದ್ದವು. ಅಬೂ ನಸ್ವ್‌ರ್ ತ್ವೂಸಿಯ (ಹಿ. 378) 'ಅಲ್ಲುಮ‌ಅ್', ಕಲಾಬಾದಿ (ಹಿ.380) ಅವರ 'ಅತ್ತ ಅರ್ರುಫ್ ಲಿ ಮದ್‌ಹಬಿ ಅಹ್ಲಿತ್ತಸವ್ವುಫ್', ಅಬೂ ತ್ವಾಲಿಬಿಲ್ ಮಕ್ಕಿಯ್ಯ್ (ಹಿ.386) ಅವರ 'ಖೂತುಲ್ ಖುಲೂಬ್' ಅವುಗಳಲ್ಲಿ ಕೆಲವು. ಆದರೆ ಒಂದು ಕ್ರೋಢೀಕೃತ ಗ್ರಂಥವಾಗಿ ಅಥವಾ ಅಧಿಕೃತವಾಗಿ ಈ ಜ್ಞಾನ ಶಾಖೆಯನ್ನು ಸಾದರಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಗ್ರಂಥಗಳು ಇಮಾಂ ಖುಶೈರೀ ಅವರ ಅರಬಿ ಭಾಷೆಯಲ್ಲಿರುವ 'ರಿಸಾಲತುಲ್ ಖುಶೈರಿಯಾ' ಹಾಗೂ ಶೈಖ್ ಹುಜ್‌ವೀರಿ ಅವರ ಪರ್ಶಿಯನ್ ಭಾಷೆಯಲ್ಲಿರುವ 'ಕಶ್ಫುಲ್ ಮಹ್ಜೂಬ್'. ಇವೆರಡೂ ಸರಿಸುಮಾರು ಒಂದೇ ಕಾಲದಲ್ಲಿ ರಚಿತವಾದ ಸೂಫಿ ಗ್ರಂಥಗಳು. ಇವು ಪರಸ್ಪರ ಕೆಲವು ವಿಷಯಗಳಲ್ಲಿ ಸಾಮ್ಯತೆಯನ್ನೂ ಹೊಂದಿವೆ. ಕೆಲವು ಅನರ್ಹ ವ್ಯಕ್ತಿಗಳು ಸೂಫೀ ಅನುಭಾವದ ಬಗ್ಗೆ ಜನರಿಗೆ ಪ್ರಸ್ತುತಪಡಿಸಲು ಯತ್ನಿಸಿ ಹಲವು ಭಿನ್ನಾಭಿಪ್ರಾಯ, ಟೀಕೆಗಳಿಗೆ ಗುರಿಯಾದರು. ಇಂತಹ ವ್ಯಕ್ತಿಗಳಿಂದ ಅಪಾರ್ಥಕ್ಕೊಳಗಾದ ನೈಜ ಸೂಫಿಸಂ ಆಶಯವನ್ನು ಜನರಿಗೆ ತಲುಪಿಸಬೇಕು ಎಂಬ ಮಹಾ ದೌತ್ಯಕ್ಕಾಗಿ ಈ ಎರಡು ಗ್ರಂಥಗಳು ರಚಿತವಾದವು.


ಗ್ರಂಥ ಕರ್ತೃ:

ಅಬುಲ್ ಹಸನ್ ಅಲೀ ಬಿನ್ ಉಸ್ಮಾನ್ ಬಿನ್ ಅಬೀ ಅಲೀ ಅಲ್ ಜುಲ್ಲಾಬಿ ಅಲ್ ಹುಜ್‌ವೀರಿ ಎಂಬ ಹೆಸರಿನ ಹುಜ್‌ವೀರಿ ಅವರು ಸಾಮಾನ್ಯರ ನಡುವೆ 'ದಾತಾ ಗಂಜ್ ಭಕ್ಷ್' ಎಂಬ ನಾಮದಲ್ಲಿ ಸುಪ್ರಸಿದ್ಧರು. ಇಂದಿನ ಅಪ್ಘಾನಿಸ್ತಾನದ ಘಜ್ನಿಯಲ್ಲಿ ಇರುವ ಎರಡು ಪ್ರದೇಶ ಜುಲ್ಲಾಹ್ ಮತ್ತು ಹುಜ್‌ವೀರಿ. ಹುಜ್‌ವೀರಿಯಲ್ಲಿ ಶೈಖ್ ಅಲಿಯ್ಯ್ ರವರ ಜನನವಾಯಿತು. ಮುಂದೆ ಲಾಹೋರಿಗೆ ಸ್ಥಳಾಂತರಗೊಂಡು ಅಲ್ಲೇ ಕೊನೆಯುಸಿರೆಳೆದರು. ‘ದಾತಾ ಗಂಜ್ ಭಕ್ಷ್ ಲಾಹೋರಿ’ ಎಂದು ಪ್ರಸಿದ್ಧಿ ಪಡೆದದ್ದು ಹಾಗೆ. ಜನನ ವರ್ಷ ನಿಖರವಾಗಿ ದಾಖಲಾಗಿಲ್ಲ. ಹಿಜ್ ರ ನಾಲ್ಕನೇ ಶತಮಾನದ ಕೊನೆಯ ಭಾಗ ಎಂದು ಇತಿಹಾಸಕಾರರು ಊಹಿಸುತ್ತಾರೆ. ಹಿ. ಐದನೇ ಶತಮಾನದ ಮೊದಲಾರ್ಧ ಭಾಗದಲ್ಲಿ ಜೀವಿಸಿ ಹಿ. 465 ರಲ್ಲಿ ನಿಧನರಾದರು ಎಂದು ಒಂದು ವರದಿ ಹೇಳುತ್ತದೆ.


ಶೈಖ್ ಅಲೀ ಹುಜ್ ವೀರಿ ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಬಳಿಕ ಆಧ್ಯಾತ್ಮಿಕ ಜ್ಞಾನವನ್ನರಸಿ ಪ್ರಪಂಚ ಪರ್ಯಟನೆ ನಡೆಸಿದರು. ಇರಾಖ್, ಇರಾನ್, ಕಝಕಿಸ್ತಾನ್, ಆಝರ್ ಬೈಜಾನ್, ಜುರ್ಜಾನ್, ಖುರಾಸಾನ್, ತುರ್ಕಿ, ಟ್ರಾನ್ಸ್, ಭಾರತದ ಹಲವೆಡೆಗಳಲ್ಲಿ ಸಂಚರಿಸಿದರು. ಇದು ಅವರ ಪ್ರವಾಸ ಕಥನಗಳಿಗೆ, ಗುರುವರ್ಯ (ಮಶಾ‌ಇಖ್‌) ರೊಂದಿಗೆ ಸಂಬಂಧ ಬೆಳೆಸಲು ಪ್ರಮುಖ ಹೇತುವಾಯಿತು. ಶೈಖ್ ಅಬುಲ್ ಫಳ್‌ಲ್ ಮುಹಮ್ಮದ್ ಬಿನ್ ಅಲ್ ಹಸನ್ ಅಲ್ ಖತಲಿಯಾನ್ ಅವರ ಪ್ರಮುಖ ಗುರು. ಅವರೊಂದಿಗೆ ಹುಜ್‌ವೀರಿ ಅಧ್ಯಾತ್ಮ ಲೋಕಕ್ಕೆ ಕಾಲಿಡುತ್ತಾರೆ.

‘ಅದ್ದುನ್ಯಾ ಯೌಮುನ್, ಅವ್ವಲನಾ ಫೀಹಾ ಸ್ವಾಇಮುನ್’ (ಪ್ರಪಂಚ ಕೇವಲ ಒಂದು ದಿನ, ಆ ದಿನ ನಮಗೆಲ್ಲ ವ್ರತ) ಎಂಬ ಉಪದೇಶ ಪ್ರಾಪ್ತಿಯಾದದ್ದು ಹುಜವೀರಿಯವರ ಈ ಗುರುವರ್ಯರಿಂದಲೇ.

ಇವರ ಹೊರತಾಗಿ ಶೈಖ್ ಅಬುಲ್ ಖಾಸಿಂ ಅಲ್ ಜುರ್ಜಾನೀ, ಖಾಜಾ ಅಹ್ಮದ್ ಅಲ್ ಮುಳಫ್ಫರ್ ಮುಂತಾದವರಿಂದ ಹುಜ್‌ವೀರಿ ಜ್ಞಾನದ ಮಧುವನ್ನು ಹೀರಿದ್ದಾರೆ.


ಕಶ್ಫುಲ್ ಮಹ್ಜೂಬ್ ರಚನಾ ಹಿನ್ನೆಲೆ:

ಒಂದು ಪ್ರಶ್ನೆಗೆ ಉತ್ತರವಾಗಿ ಕಶ್ಫುಲ್ ಮಹ್ಜೂಬ್ ರಚನೆಯಾಗಿದೆ. ನೈಜ ಸೂಫಿ ಅನುಭಾವ, ಸೂಫಿಗಳ ಜೀವನ ಶೈಲಿಯನ್ನು ತಿಳಿಸಿ ಕೊಡಬೇಕು ಎಂಬುದೇ ಆ ಪ್ರಶ್ನೆ. ನೈಜ ಸೂಫಿಸಂ ಭಾಗಶಃ ಅಪಾರ್ಥಕ್ಕೊಳಗಾದ ದುರಿತ ಕಾಲದಲ್ಲಿ, ಸ್ವೇಚ್ಛಾಚಾರದಿಂದ ಬದುಕುತ್ತಿದ್ದ ಜನರಿಗೆ ಹೃಸ್ವ ರೂಪದಲ್ಲಿ ಉತ್ತರ ನೀಡುವುದಕ್ಕೆ ಬದಲಾಗಿ ಬೃಹತ್ ಗ್ರಂಥವೊಂದನ್ನು ರಚಿಸಲು ಶೈಖ್ ಹುಜ್‌ವೀರಿ ತೀರ್ಮಾನಿಸುತ್ತಾರೆ. ತನ್ನ ಕಾಲದ ಅವಸ್ಥೆಯನ್ನು ಅವರು ಹೀಗೆ ವಿವರಿಸುತ್ತಾರೆ; ‘‘ಸ್ವೇಚ್ಛಾಚಾರವನ್ನು ಷರೀಯತ್ತಾಗಿ/ಧರ್ಮ ನಿಯಮವೆಂದು ತಪ್ಪಾಗಿ ಗ್ರಹಿಸಿದ್ದ ಒಂದು ಸಮೂಹ. ಅಧಿಕಾರಮೋಹ ಮತ್ತು ಅಹಂಕಾರವನ್ನು ಅಭಿಮಾನದ ಸಂಕೇತವಾಗಿಯೂ ಪ್ರಚಾರ ಪ್ರಿಯತೆಯನ್ನು ದೇವಭಕ್ತಿಯಾಗಿಯೂ ಕೆಟ್ಟ ಅಭಿರುಚಿಯನ್ನು ಅಧ್ಯಾತ್ಮವಾಗಿಯೂ ಪರಿಗಣಿಸುತ್ತಿದ್ದ ಆ ಕಾಲದಲ್ಲಿ ಅಲ್ಲಾಹು ನಮ್ಮನ್ನು ಸೃಷ್ಟಿಸಿದ. ಈ ವೇಳೆ ನೈಜ ಸೂಫಿಗಳು ಯಾರು, ಅವರ ರೀತಿ ರಿವಾಜುಗಳು ಹೇಗಿರುತ್ತವೆ ಎಂಬುದನ್ನು ಜನರಿಗೆ ತಿಳಿಸುವ ಮಹತ್ಕಾರ್ಯವೇ ನಮ್ಮ ಮುಂದಿದ್ದ ದೊಡ್ಡ ಸವಾಲು.’’ [ಕಶ್ಫುಲ್ ಮಹ್ಜೂಬ್ 199] ತಸವ್ವುಫ್ ಎಂಬ ಈ ಜ್ಞಾನ ಶಾಖೆಗೆ ಸಂಭವಿಸಿದ ಶೋಚನೀಯ ಅವಸ್ಥೆಯನ್ನು ಇಮಾಂ ಖುಶೈರೀ ಅವರು ತಮ್ಮ ರಿಸಾಲದಲ್ಲೂ ಉಲ್ಲೇಖಿಸುತ್ತಾರೆ. ರಿಸಾಲತುಲ್ ಖುಶೈರಿ ಮತ್ತು ಕಶ್ಫುಲ್ ಮಹ್ಜೂಬ್; ಎರಡೂ ಒಂದೇ ಕಾಲದಲ್ಲಿ ಒಂದೇ ರೀತಿಯ ಕೆಲಸವನ್ನು ಮಾಡಿದ್ದು ಗಮನಾರ್ಹ.


ಸುದೀರ್ಘ ಯಾತ್ರೆಯ ಅನುಭವಗಳೇ ಪ್ರಸ್ತುತ ಗ್ರಂಥದ ಪ್ರಮುಖ ಆಧಾರ. ಇನ್ನು ಗುರುವರ್ಯರಿಂದ ಕೇಳಿದ ಉಪದೇಶಗಳು, ಹಲವರೊಂದಿಗೆ ನಡೆಸಿದ ಸಂವಾದ, ಚರ್ಚೆಗಳು ಎಲ್ಲವನ್ನೂ ಈ ಗ್ರಂಥದಲ್ಲಿ ಪರಾಮರ್ಶೆ ಮಾಡಲಾಗುತ್ತದೆ. ಅಂದಿನ ಇಸ್ಲಾಮಿಕ್ ಯುಗದಲ್ಲಿ ನೆಲೆ ನಿಂತಿದ್ದ ಪ್ರಮುಖ ವಿಚಾರಧಾರೆಗಳ ಜೊತೆಗೆ ಆ ಕಾಲದ ಪ್ರಮುಖರ ಗ್ರಂಥಗಳನ್ನು ಹುಜ್‌ವೀರಿ ಅವರು ತಮ್ಮ ಕೃತಿಯಲ್ಲಿ ಅವಲಂಬಿಸಿದ್ದಾರೆ. ಹಿ. 297 ರಲ್ಲಿ ನಿಧನರಾದ ಅಮ್ರ್ ಬಿನ್ ಉಸ್ಮಾನ್ ಅಲ್ ಮಕ್ಕಿಯ್ಯ್ ಅವರ ‘ಕಿತಾಬುಲ್ ಮಹಬ್ಬ’, ಹಿ. 378 ರಲ್ಲಿ ನಿಧನರಾದ ಅಬೂ ನಸ್ವ್‌ರ್ ತ್ವೂಸಿಯ ‘ಕಿತಾಬುಲ್ಲಮ‌ಅ್’, ಹಿ. 412 ರಲ್ಲಿ ನಿಧನರಾದ ಅಬೂ ಅಬ್ದುರ್ರಹ್ಮಾನ್ ಅಸ್ಸುಲಮೀ ಅವರ ‘ತಾರೀಖು ಅಹ್ಲುಸ್ಸುಪ್ಫ, ತ್ವಬಕಾತ್ತುಸ್ಸೂಫಿಯ್ಯ, ಕಿತಾಬುಸ್ಸಮಾಅ’, ಹಿ. 285 ರಲ್ಲಿ ನಿಧನರಾದ ಮುಹಮ್ಮದ್ ಅಲಿ ತಿರ್ಮುದಿ ಅವರ ‘ತಾರೀಖುಲ್ ಮಶಾ‌ಇಖ್’, ಹಿ.465 ರಲ್ಲಿ ನಿಧನರಾದ ಇಮಾಂ ಖುಶೈರೀ ಅವರ ‘ರಿಸಾಲತುಲ್ ಖುಶೈರಿಯ್ಯ’ ಇವುಗಳಲ್ಲದೆ ಹಿ.309 ರಲ್ಲಿ ನಿಧನರಾದ ಹುಸೈನ್ ಬಿನ್ ಮನ್ಸೂರ್ ಅಲ್ ಹಲ್ಲಾಜ್, ಅಬೂ ಜ‌ಅಫರ್ ಬಿನ್ ಮಿಸ್‌ಬಾಹ್ ಅಸ್ಸೈದಲವೀ, ಹಾಕಿಮು ತ್ತಿರ್ಮುದೀ ಅವರ ಗ್ರಂಥಗಳನ್ನೂ ಅವಲಂಬನೆ ಮಾಡಿದ್ದಾರೆ.


ಒಳಗೇನಿದೆ ?

ಕಶ್ಫುಲ್ ಮಹ್ಜೂಬ್ ಅಂದರೆ 'ಪರದೆಯ ಅನಾವರಣ' ಎಂದು ಅರ್ಥ. ಅಲ್ಲಾಹು ಹಾಗೂ ಮನುಷ್ಯನ ನಡುವೆ ಇರುವ ಪರದೆಯನ್ನು ನೀಗಿಸಿ ಮನುಷ್ಯನನ್ನು ಅಧ್ಯಾತ್ಮದ ಉಚ್ಪ್ರಾಯ ಸ್ಥಿತಿಗೆ ತಲುಪಿಸುವ ಮಹತ್ವದ ಕಾರ್ಯವನ್ನು ಹುಜ್‌ವೀರಿ ಅವರು ತಮ್ಮ ಈ ಗ್ರಂಥದ ಮೂಲಕ ಸಮರ್ಥವಾಗಿ ನಿರ್ವಹಿಸುತ್ತಾರೆ. ಪರದೆ ಎರಡು ವಿಧ. ಒಂದು ಹಿಜಾಬ್ ರೈನಿಯ್ಯ್ (ಪ್ರಾಕೃತಿಕ ಪರದೆ). ಇನ್ನೊಂದು ಹಿಜಾಬ್ ಗೈನಿಯ್ಯ್ (ಜನನದ ಬಳಿಕ ಸೇರುವ ಪರದೆ).

ಇದರಲ್ಲಿ ಮೊದಲನೇ ಪರದೆ ನೀಗಿಸಲು ಅಸಾಧ್ಯ. ಕಲ್ಲು ಕನ್ನಡಿಯನ್ನು ಉದಾಹರಣೆಗೆ ಇಟ್ಟುಕೊಳ್ಳೋಣ. ಕಲ್ಲಿಗೆ, ಕಲ್ಲು ಎಂಬ ಸ್ಥಿತಿ ನೀಗಿ ಕನ್ನಡಿಯಾಗಲು ಸಾಧ್ಯವಿಲ್ಲ. ಇದು ಹಿಜಾಬ್ ರೈನಿಯ್ಯ್. ಆದರೆ ಧೂಳಿನಿಂದಾವೃತವಾದ ಕನ್ನಡಿಯಾದರೆ ಅದರ ಕೊಳೆಯನ್ನು ನೀಗಿಸಲು ಸಾಧ್ಯವಿದೆ. ಅದನ್ನು ಶುಚಿಗೊಳಿಸಿದರೆ ಸಾಕು ಅಷ್ಟೇ. ಇಲ್ಲಿ ಧೂಳಿನ ಕನ್ನಡಿ ಹಾಗೂ ನೈಜ ಕನ್ನಡಿಯ ನಡುವಿನ ಪರದೆ ಹಿಜಾಬ್ ಗೈನಿಯ್ಯ್ (ತಾತ್ಕಾಲಿಕ) ಆಗಿದೆ. ಸೃಷ್ಟಿಕರ್ತ ಹಾಗೂ ಸೃಷ್ಟಿಗಳ ನಡುವೆ ಇರುವ ಇಂತಹ ಮರೆಗಳನ್ನು ಕುರಿತು ಕಶ್ಫುಲ್ ಮಹ್ಜೂಬ್ ಚರ್ಚೆ ಮಾಡುತ್ತದೆ.


ಮುನ್ನುಡಿಯ ಬಳಿಕ ಜ್ಞಾನದ ಮಹತ್ವವನ್ನು ಹೇಳುವುದರೊಂದಿಗೆ ಕೃತಿಯನ್ನು ಪ್ರಾರಂಭಿಸುತ್ತಾರೆ. ಸೃಷ್ಟಿಕರ್ತನ ಜ್ಞಾನವನ್ನು ನೋಡುವುದಾದರೆ ಸೃಷ್ಟಿಗಳ ಜ್ಞಾನ ಅಜ್ಞಾನಕ್ಕೆ ಸಮಾನ. ಹೆಚ್ಚು ಹೆಚ್ಚು ಅಂಶಗಳ ಬಗ್ಗೆ ತಿಳಿಯುತ್ತ ಹೋದಂತೆ ನನಗೇನೂ ತಿಳಿದಿಲ್ಲ ಎಂಬ ವಾಸ್ತವಾಂಶವು ವೇದ್ಯವಾಗುತ್ತದೆ. ಆಗ ಜ್ಞಾನವು ಪೂರ್ಣತೆಯತ್ತ ಸಾಗುತ್ತದೆ.


ಬಳಿಕ ಫಖ್‌ರ್ - ಘಿನಾ (ಬಡತನ - ಸಿರಿತನ) ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಎರಡು ಅವಸ್ಥೆಯಲ್ಲಿ ಯಾವುದು ಉತ್ತಮ ಎಂಬುದರಲ್ಲಿ ಭಿನ್ನಾಭಿಪ್ರಾಯಗಳಿವೆ. ಆದರೆ, ಎರಡೂ ಘಟ್ಟಗಳಲ್ಲೂ ಅಲ್ಲಾಹು ಯಾವುದನ್ನು ನೀಡುತ್ತಾನೋ ಅದು ಅಲ್ಲಾಹನ ಇಷ್ಟ. ಅದೇ ಆಗಿರಬೇಕು ಮನುಷ್ಯನ ಇಷ್ಟ. ಧನಿಕನಾದಾಗ ಅಲ್ಲಾಹನನ್ನು ಮರೆತು ದರಿದ್ರನಾಗುವಾಗ ಅವನನ್ನು ದೂರುವುದು ಸರಿಯಲ್ಲ. ಹಝ್ರತ್ ಅಯ್ಯೂಬ್ ಅಲೈಹಿಸ್ಸಲಾಮ್ ಹಾಗೂ ಹಝ್ರತ್ ಸುಲೈಮಾನ್ ಅಲೈಹಿಸ್ಸಲಾಮ್ ಅವರ ಉದಾಹರಣೆಯನ್ನು ತೆಗೆದುಕೊಳ್ಳೋಣ. ಅಲ್ಲಾಹನು ಹಝ್ರತ್ ಅಯ್ಯೂಬ್ ರಿಗೆ ಸಾಕಷ್ಟು ಕಷ್ಟಗಳನ್ನು ನೀಡಿದ. ಆದರೆ ಅಲ್ಲಾಹನ ಇಚ್ಛೆಯಂತೆ ಕಷ್ಟಗಳೆಲ್ಲವೂ ಹಝ್ರತ್ ಅಯ್ಯೂಬ್ ರಿಗೆ ಇಷ್ಟವಾದವು. ಕೊನೆಗೆ ಅಲ್ಲಾಹನು ಹಝ್ರತ್ ಅಯ್ಯೂಬ್ ರನ್ನು 'ಶ್ರೇಷ್ಠ ದಾಸ' ಎಂಬ ಪದವಿಯನ್ನು ನೀಡಿ ಗೌರವಿಸುತ್ತಾನೆ. ರಾಜಾಧಿಪತ್ಯದಲ್ಲಿ ಜೀವನ ಸಾಗಿಸಿದ ಹಝ್ರತ್ ಸುಲೈಮಾನ್ ಅಲೈಹಿಸ್ಸಲಾಮ್ ಅವರು ಅಲ್ಲಾಹನನ್ನು ಮರೆಯಲಿಲ್ಲ. ಬಲ್ಖೀಸ್ ರಾಣಿಯ ಸಿಂಹಾಸನವನ್ನು ಕ್ಷಣಮಾತ್ರದಲ್ಲಿ ಅವರ ಎದುರು ಪ್ರತ್ಯಕ್ಷಗೊಳಿಸಿದಾಗಲೂ ಅಹಂಕಾರ ತೋರಿಸುವ ಬದಲು ‘ಇದು ನನ್ನ ಪ್ರಭುವಿನ ಔದಾರ್ಯ’ ಎಂಬ ವಿನಯದ ಮಾತನ್ನು ಅವರು ಆಡಿದರು. ಅವರಿಗೂ ಅಲ್ಲಾಹನು ‘ಶ್ರೇಷ್ಠ ದಾಸ’ ಎಂಬ ಪದವಿಯನ್ನು ನೀಡಿದನು.


ಬಳಿಕ ಸ್ವಹಾಬಿಗಳು, ತಾಬಿಉಗಳು ಹಾಗೂ ಅವರ ಬಳಿಕ ಬಂದ ನೂರಕ್ಕೂ ಮಿಕ್ಕ ಸೂಫಿ ಅನುಭಾವಿಗಳ ಕಥೆಗಳನ್ನು ಶೈಖ್ ಹುಜ್‌ವೀರಿ ಅವರು ಹೇಳುತ್ತಾರೆ. ಆ ಮೂಲಕ ಅವರು ಸೂಫಿಸಂನ ಪ್ರಾಯೋಗಿಕ ಜೀವನ ವಿಧಾನವನ್ನು ತೆರೆದು ತೋರಿಸುವ ಗಮನಾರ್ಹ ಕೆಲಸವನ್ನು ಮಾಡಿದ್ದಾರೆ. ಈ ಗ್ರಂಥದ ಬಹುತೇಕ ಭಾಗವೂ ಸೂಫಿ ಲೋಕದ ವಿವಿಧ ವಿಭಾಗಗಳ ಚರ್ಚೆಗಳಿಂದಲೇ ತುಂಬಿಹೋಗಿದೆ. ಸೂಫಿಗಳ ಹನ್ನೆರಡು ವಿಭಾಗದ ಬಗ್ಗೆ ಚರ್ಚೆಯನ್ನೂ ಮಾಡಿದ್ದಾರೆ. ಮುಹಾಸಬಿಯ್ಯ, ಖಸ್ರಾರಿಯ್ಯ, ತ್ವೈಫೂರಿಯ್ಯ, ಜುನೈದಿಯ್ಯ, ನೂರಿಯ್ಯ, ಸಹ್‌ಲಿಯ್ಯ, ಹಕೀಮಿಯ್ಯ, ಖರ್ರಾಸಿಯ್ಯ, ಖಫೀಫಿಯ್ಯ, ಸಯ್ಯಾರಿಯ್ಯ, ಹುಲೂಲಿಯ್ಯ. ಇದರಲ್ಲಿ ಕೊನೆಯದಾಗಿ ಹೇಳಿದ ಹುಲೂಲಿಯ್ಯ ವಿಭಾಗವೆಂದರೆ ‘ಅಲ್ಲಾಹನು ಉತ್ತಮ ಮನುಷ್ಯನಲ್ಲಿ ಕಾಣುತ್ತಾನೆ’ ಎಂಬ ದುರ್ಬಲವಾದ ಸಿದ್ಧಾಂತವನ್ನು ನಂಬುವ ಅಬೂ ಹಿಲ್ಮಾನ್ ಅದ್ದಿಮಶ್‌ಖಿಯವರ ಅನುಯಾಯಿಗಳು. ಪ್ರತೀ ವಿಭಾಗವೂ ಅವರವರ ಇಮಾಮರ ಹೆಸರಿಗೆ ಸೇರಿಸಿ ಪ್ರಸಿದ್ಧಿಯನ್ನು ಪಡೆದಿದೆ. ಉದಾಹರಣೆಗೆ, ಜುನೈದಿಯ್ಯ ಎಂದರೆ ಹಝ್ರತ್ ಜುನೈದುಲ್ ಬಗ್ದಾದಿಯವರ ಅನುಯಾಯಿಗಳು. ತ್ವೈಫೂರಿಯ್ಯ ಎಂದರೆ ಅಬೂ ಯಝೀದುಲ್ ಬಿಸ್ತಾಮಿ ಎಂಬ ನಾಮದಲ್ಲಿ ಸುಪ್ರಸಿದ್ಧರಾದ ತ್ವೈಫೂರ್ ಬಿನ್ ಈಸಲ್ ಬಿಸ್ತಾಮಿಯವರ ಅನುಯಾಯಿಗಳು.


ನಂತರದ ಅಧ್ಯಾಯಯಗಳು ಕ್ರಮವಾಗಿ ಮ‌ಅ್‌ರಿಫತ್ (ಜ್ಞಾನ), ತೌಹೀದ್ (ಏಕದೇವತತ್ವ), ನಮಾಝ್, ಝಕಾತ್ (ಕಡ್ಡಾಯ ದಾನ), ಉಪವಾಸ, ಹಜ್ಜ್ ಮುಂತಾದ ವಿಷಯಗಳ ಕುರಿತು ಬೆಳಕು ಚೆಲ್ಲುತ್ತದೆ.

ನಮಾಝಿನ ಅಧ್ಯಾಯದಲ್ಲಿ ಹಝ್ರತ್ ಹಾತ್ವಿಮುಲ್ ಅಸ್ವಮ್ಮ್‌ ಎಂಬ ಮಹಾತ್ಮರನ್ನು ಉಲ್ಲೇಖಿಸಿ ಹೇಳುತ್ತಾರೆ: ‘ಒಬ್ಬರು ಹಾತ್ವಿಮರೊಂದಿಗೆ ಕೇಳಿದರು- ನೀವು ಹೇಗೆ ನಮಾಝ್ ಮಾಡುತ್ತೀರಿ? ಅದಕ್ಕುತ್ತರವಾಗಿ ಹಝ್ರತ್ ಹಾತಿಮ್ ಅವರು, ‘ನಮಾಝಿನ ಸಮಯವಾದಾಗ ನಾನು ಬಾಹ್ಯವಾದ ಒಂದು ವುಝೂ (ಅಂಗಸ್ನಾನ) ಹಾಗೂ ಆಂತರಿಕವಾದ ಒಂದು ವುಝೂ ಮಾಡುತ್ತೇನೆ. ಬಾಹ್ಯವಾದ ವುಝೂ ಅನ್ನು ನೀರಿನ ಮುಖಾಂತರ ಮಾಡುತ್ತೇನೆ ಮತ್ತು ಆಂತರಿಕ ವುಝೂ ಅನ್ನು ತೌಬಾ (ಪಶ್ಚಾತ್ತಾಪ) ಮುಖಾಂತರ ಮಾಡುತ್ತೇನೆ. ಬಳಿಕ ಖಿಬ್ಲಾಭಿಮುಖವಾಗಿ ನಿಂತುಕೊಳ್ಳುವಾಗ ಮಸ್ಜಿದುಲ್ ಹರಾಂ, ಮಖಾಮು ಇಬ್ರಾಹೀಂ ಅನ್ನು ಸಂಕಲ್ಪಿಸಿಕೊಳ್ಳುವೆ. ನನ್ನ ಬಲ ಭಾಗದಲ್ಲಿ ಸ್ವರ್ಗ, ಎಡ ಭಾಗದಲ್ಲಿ ನರಕ, ಕಾಲ ಕೆಳಗೆ ಸ್ವಿರಾತ್, ಹಿಂದೆ ಮರಣ ಇದೆ ಎಂದು ಭಾವಿಸುವೆ. ಬಳಿಕ ಅತೀವ ಭಯಭಕ್ತಿಯೊಂದಿಗೆ ತಕ್ಬೀರ್ ಹೇಳಿ ನಮಾಝ್ ಮಾಡುವೆ.”

ಹುಸೈನ್ ಬಿನ್ ಮನ್ಸೂರ್ ಅಲ್ ಹಲ್ಲಾಜ್ ಒಂದು ದಿನ 400 ರಕ‌ಅತ್ ನಮಾಝ್ ನಿರ್ವಹಿಸುತ್ತಿದ್ದರು. ಯಾಕಾಗಿ ಈ ರೀತಿ ಕಷ್ಟಪಡುತ್ತಿದ್ದೀರಿ ಎಂಬ ಪ್ರಶ್ನೆಗೆ ‘ನಿಮಗೆ ಅದು ಕಷ್ಟವೆಂದು ತೋರುತ್ತದೆಯಷ್ಟೆ. ಅಲ್ಲಾಹನ ಇಷ್ಟದಲ್ಲಿ ದಾಸರಿಗೆ ಕಷ್ಟವೆಂಬುದು ಇಲ್ಲವೇ ಇಲ್ಲ’ ಎಂದು ಪ್ರತಿಕ್ರಿಯಿಸಿದರು.


ಝಕಾತ್, ಹಜ್ಜ್ ಇದೆಲ್ಲವೂ ಅಧ್ಯಾತ್ಮ ಪಥಗಳೆಂದು ಹೇಳುತ್ತದೆ ಈ ಗ್ರಂಥ. ಅಬೂ ಯಝೀದುಲ್ ಬಿಸ್ತಾಮಿ ಅವರ ಹಜ್ಜ್ ನ ಅನುಭವವನ್ನು ಉಲ್ಲೇಖಿಸಿದ್ದು ಗಮನಾರ್ಹ.

‘‘ನಾನು ಹಜ್ಜ್ ಗೆ ಹೋದೆ. ಕ‌ಅಬಾವನ್ನು ಕಂಡೆ. ಯೋಚಿಸಿದೆ. ಇಂತಹ ಎಷ್ಟೆಷ್ಟು ಭವನಗಳಿವೆ! ಇದನ್ನು ನೋಡಲು ನಾನು ಇಲ್ಲಿಗೆ ಬರಬೇಕೆ. ಆ ವರ್ಷ ಹಜ್ಜ್ ಕರ್ಮ ನಿರ್ವಹಿಸದೆ ಹಿಂದಿರುಗಿದೆ. ನಂತರದ ವರ್ಷ ಹಜ್ಜ್ ಗೆ ಬಂದಾಗ ಕ‌ಅಬಾ ಭವನದ ಜೊತೆಗೆ ಅದರ ಒಡೆಯನಾದ ಅಲ್ಲಾಹನನ್ನು ಕಂಡೆ. ನಾನು ಯೋಚಿಸಿದೆ. ಅಲ್ಲಾಹು! ಕ‌ಅಬಾ! ನಾನು! ಅಲ್ಲಾಹನ ಹೊರತಾಗಿ ನನಗೂ ಕ‌ಅಬಾಕೂ ಅಸ್ತಿತ್ವ ಇದೆಯೆಂಬ ನಂಬಿಕೆ. ಅದು ಶಿರ್ಕ್. ಹಜ್ಜ್ ನಿರ್ವಹಿಸದೆ ಮರಳಿದೆ. ಮುಂದಿನ ವರ್ಷ ಹಜ್ಜ್ ವೇಳೆ ಕ‌ಅಬಾಗೆ ಬದಲಾಗಿ ಅದರ ಪ್ರಭು ಮಾತ್ರ ದರ್ಶನವಾದನು. ಆ ವೇಳೆ ನಾನು ಹಜ್ಜ್ ನಿರ್ವಹಿಸಿದೆ.’’


ಸೂಫಿ ಅನುರಾಗ, ಅನುಭಾವಗಳನ್ನು ವಿಶಾಲವಾದ ವ್ಯಾಪ್ತಿಯಲ್ಲಿ ಕಶ್ಫುಲ್ ಮಹ್ಜೂಬ್ ಚರ್ಚೆ ಮಾಡಿದೆ. ಸೂಫಿಸಂ ಬಗ್ಗೆ ನಿಖರವಾದ ಮಾಹಿತಿಯು ಇದರಿಂದ ಲಭ್ಯ. ಸೂಫಿ ತತ್ವಸಿದ್ಧಾಂತಗಳ ಕಲಿಕೆಯಲ್ಲಿ ಇಂದು ಇದು ಮೇರು ಮಟ್ಟದಲ್ಲಿ ನಿಲ್ಲುತ್ತದೆ. ಮಾತ್ರವಲ್ಲದೆ, ಪರ್ಶಿಯನ್ ಭಾಷೆಯಲ್ಲಿ ರಚಿತವಾದ ಮೊದಲ ಬೃಹತ್ ಗ್ರಂಥವೂ ಹೌದು. ಡಾ. ಇಸ್‌ಆದ್ ಅಬ್ದುಲ್ ಹಾದಿ ಪ್ರಸ್ತುತ ಗ್ರಂಥವನ್ನು ಅರಬಿ ಭಾಷೆಗೆ ತಂದಿದ್ದಾರೆ.


~ ಅಶ್ರಫ್ ನಾವೂರು


101 views0 comments

Comments


bottom of page