ಸೀರತುನ್ನಬೀ : ಪ್ರಾಮುಖ್ಯತೆ ಹಾಗೂ ವಿವರಣೆ
ಪೈಗಂಬರರಿಗೆ ಸಂಬಂಧಪಟ್ಟ ಎಲ್ಲವೂ ವಿಶ್ವಾಸಿಗಳಿಗೆ ಮಹತ್ವವುಳ್ಳದ್ದಾಗಿದೆ. ಆದ್ದರಿಂದಲೇ ಪೈಗಂಬರರ ಚರಿತ್ರೆ, ಸೌಂದರ್ಯ ಅಧ್ಯಯನಗಳಿಗೆ ಮುಸ್ಲಿಂ ಜಗತ್ತು ಅತಿ ಪ್ರಾಮುಖ್ಯತೆಯನ್ನು ನೀಡಿದೆ. ಪೂರ್ವಜರ ಕಾಲದಿಂದಲೇ ಈ ಕುರಿತು ಉಂಟಾದ ರಚನೆಗಳು ಇದರ ಭಾಗವಾಗಿತ್ತು. ತಾಬೀಈ ಪ್ರಮುಖರಾದ ಇಮಾಮ್ ಮೂಸಬಿನ್ ಉಕ್ಬಾ (ರ) (ವಫಾತ್: ಹಿ.141) ಇನ್ನೋರ್ವ ತಾಬಿಈ ಪ್ರಮುಖರಾದ ಇಮಾಮ್ ಮುಹಮ್ಮದ್ ಬಿನ್ ಇಸ್ಹಾಕ್ (ಹಿ.151) ಇವರು ಸ್ವಹಾಬಿಯಾದ ಅನಸ್ ಬಿನ್ ಮಾಲೀಕರನ್ನು ಭೇಟಿಯಾಗಿದ್ದಾರೆ. ಇಮಾಮ್ ಮುಹಮ್ಮದ್ ಬಿನ್ ಉಮರ್ ವಾಖಿದೀ (ಹಿ.207), ಇಮಾಮ್ ಮುಹಮ್ಮದ್ ಬಿನ್ ಸಅದ್ ಅಲ್ ಬಗ್ದಾದಿ (ಹಿ.230), ಇಮಾಮ್ ಅಬೂಬಕ್ಕರ್ ಅಬ್ದುಲ್ ರಝಾಕ್ ಸ್ವನ್ಆನಿ (ಹಿ. 211), ಇಮಾಮ್ ಅಬೂ ಉಸ್ಮಾನ್ ಸಈದ್ (ಹಿ.249) ಮೊದಲಾದವರು ಉದಾಹರಣೆ ಮಾತ್ರ. ಇವುಗಳಲ್ಲಿ ಅಧಿಕೃತ ಗ್ರಂಥ ಇಮಾಮ್ ಮೂಸ ಬಿನ್ ಉಕ್ಬಾರಿಂದ ವಿರಚಿತಗೊಂಡ ಗ್ರಂಥ ಎಂದು ಇಮಾಮ್ ಮಾಲಿಕ್ (ರ) ರವರು ಅಂಗೀಕಾರ ನೀಡುತ್ತಿದ್ದಾರೆ. ಸೀರಾ ಗ್ರಂಥಗಳಲ್ಲಿ ಮತ್ತೊಂದು ಪ್ರಮುಖ ರಚನೆಯೆಂದರೆ ಸೀರತು ಇಬ್ನ್ ಹಿಷಾಂ. ಇಮಾಮ್ ಅಬೂ ಮುಹಮ್ಮದ್ ಅಬ್ದುಲ್ ಮಾಲಿಕ್ ಬಿನ್ ಹಿಶಾಂ (ಹಿ.218) ರವರು ಇಮಾಮ್ ಮುಹಮ್ಮದ್ ಬಿನ್ ಇಸ್ಹಾಕ್ (ರ) ರವರ ಗ್ರಂಥವನ್ನು ಕೆಲವೊಂದು ಬದಲಾವಣೆಯೊಂದಿಗೆ ಸೀರತು ಇಬ್ನ್ ಹಿಶಾಮಿಗೆ ರೂಪು ನೀಡಿದರು. ಸೀರತ್ ಇಬ್ನ್ ಹಿಷಾಮ್ ಗ್ರಂಥಕ್ಕೆ ವ್ಯಾಖ್ಯಾನವಾಗಿ ಇಮಾಮ್ ಅಬುಲ್ ಖಾಸಿಂ ಸುಹೈಲಿ (ಹಿ.581) ಈ ಎರಡೂ ಗ್ರಂಥಗಳಿಗೂ ಇಮಾಮ್ ಹಾಫಿಲ್ ಮುಗ್ಲಾತಿಯ (ಹಿ. 762) 'ಅಸ್ಸಹ್ರುಲ್ ಖಾಸಿಂ' ಮೊದಲಾದವು ಸೀರಾ ವಿಭಾಗದ ಪ್ರಮುಖ ಉಲ್ಲೇಖಗಳಾಗಿದೆ.
ಇಮಾಮ್ ಅಬೂ ಈಸಾ ತಿರ್ಮುದಿಯವರ (ಹಿ.279) 'ಶಮಾಇಲುಲ್ ಮುಹಮ್ಮದಿಯಾ', ಇಮಾಮ್ ಮುಹಮ್ಮದ್ ಕಫಾಲ್ ಶಾಶಿ (ಹಿ.365) ರವರು ರಚಿಸಿದ 'ಶಮಾಇಲುನ್ನುಬುವ್ವತ್', ಇಮಾಮ್ ಅಬೂ ಸಈದರ (ಹಿ.406) 'ಶರಫುಲ್ ಮುಸ್ತಾಫಾ', ಇಮಾಮ್ ಖಾಳೀ ಇಯಾಳರ 'ಅಶ್ಶಿಫಾ' ಮೊದಲಾದವು ನಬಿಯವರ ವಿಶೇಷತೆಗಳನ್ನು ಹೆಚ್ಚಾಗಿ ಚರ್ಚಿಸಿದ ಗ್ರಂಥಗಳು.
ಇದೆಲ್ಲವೂ ಗದ್ಯ ರೂಪದ ರಚನೆಗಳಾಗಿವೆ. ಇನ್ನು ಪದ್ಯ, ಕಾವ್ಯ ರೂಪದಲ್ಲಿರುವ ಇಮಾಮ್ ಫತ್ಹ್ ಬಿನ್ ಮಿಸ್ಮಾರ್ (ಹಿ.636), ಇಮಾಮ್ ಶಿಹಾಬ್ ಬಿನ್ ಇಮಾದ್ (ಹಿ. 808), ಇಮಾಮ್ ಇಬ್ರಾಹಿಂ ಬಿನ್ ಉಮರ್ ಅಲ್ ಬಖಾಈ (ಹಿ. 885), ಹಾಗೂ ಹತ್ತು ಸಾವಿರಕ್ಕೂ ಮಿಕ್ಕ ಗೆರೆಗಳಿರುವ ಇಮಾಮ್ ಫತ್ಹುದ್ದೀನ್ ಬಿನ್ ಶಹೀದ್ ರವರ ರಚನೆ, ಇಮಾಮ್ ಝೈನುಲ್ ಇರಾಖಿಯುವರ (ಹಿ. 806) ಅಲ್ಫಿಯಾ, ಮುಂತಾದ ಗ್ರಂಥಗಳು ಪದ್ಯ ರೂಪದಲ್ಲಿರುವ ಗ್ರಂಥಗಳಾಗಿದೆ. ಅಲ್ಲದೇ ಪುಣ್ಯ ಪ್ರವಾದಿಯವರ ಜನನ ಮತ್ತು ಜನನಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಮಾತ್ರ ಒಳಗೊಂಡ ರಚನೆಗಳಿವೆ. ಇಮಾಮ್ ಇಬ್ರಾಹಿಂ ಬಿನ್ ಅಹ್ಮದ್ (ಹಿ. 870), ರವರ "ಅದ್ದುರ್ರುಲ್ ಮುನಲ್ಲಂ ಫೀ ಮೌಲಿದಿಲ್ ಮುಅಲ್ಲಂ" ಅದಕ್ಕೊಂದು ಉದಾಹರಣೆ ಮಾತ್ರ.
ಅಲ್ಲದೇ ಇಮಾಮ್ ಝೈನುಲ್ ಇರಾಖಿ, ಇಮಾಮ್ ಇಬ್ನುಲ್ ಜಝ್ರೀ (ಹಿ. 833), ಇಮಾಮ್ ಮುಹಮ್ಮದ್ ಇಬ್ನು ನಾಸಿರುದ್ದೀನ್ (ಹಿ. 842), ಮೊದಲಾದವರು ಈ ವಿಷಯದಲ್ಲಿ ಗ್ರಂಥಗಳನ್ನು ರಚಿಸಿದ್ದಾರೆ. ನಬಿಯವರ ಮುಂಜಿ ಕರ್ಮದ ಕುರಿತು ಇಮಾಮ್ ಮುಹಮ್ಮದ್ ಬಿನ್ ತ್ವಲ್ಹಾರವರ (ಹಿ. 652) ಇಮಾಮ್ ಕಮಾಲ್ ಅಬುಲ್ ಕಸಂ (ಹಿ. 660) ರವರ ಪ್ರತ್ಯೇಕ ಬರಹಗಳು ಗಮನಾರ್ಹವಾಗಿದೆ.
ಪುಣ್ಯ ಪ್ರವಾದಿಯ ಪವಿತ್ರ ಹೆಸರುಗಳನ್ನು ಮಾತ್ರ ಗುರಿಯಾಗಿಟ್ಟು ಕೊಂಡು ರಚಿಸಿದ ಅಬುಲ್ ಕಿತಾಬ್ ಬಿನ್ ದಿಹ್ಯಾ (ಹಿ.633), ಹಾಗೂ ಇಮಾಮ್ ಖುರ್ತುಬಿ (ರ) ಯವರಿಗೂ, ಗದ್ಯ ಹಾಗೂ ಪದ್ಯ ರೂಪದಲ್ಲಿ 500 ರಷ್ಟು ಗೆರೆಗಳಿರುವ ಬೇರೆ ಗ್ರಂಥಗಳೂ ಕೂಡ ಇದೆ.
ಪೈಗಂಬರರ ಅಸಾಧಾರಣ ಘಟನೆಗಳು, ಪ್ರಬೋಧನೆಗಳು, ಪುಣ್ಯ ಪರಂಪರೆ, ಪವಿತ್ರ ಪಾದರಕ್ಷೆ, ನಬಿಯವರ ವಿಶೇಷತೆಗಳು ಮೊದಲಾದ ವಿಷಯಗಳನ್ನು ಆಧಾರವಾಗಿಟ್ಟುಕೊಂಡು ರಚಿಸಿದ ಗ್ರಂಥಗಳನ್ನು ನೋಡಿದರೆ 20 ಕ್ಕಿಂತಲೂ ಮಿಕ್ಕ ಭಾಗಗಳಿರುವ ಗ್ರಂಥವಾಗಿ ಜೋಡಿಸಬಹುದು.
ಇಮಾಮ್ ಹಾಫಿಲ್ ಸಖಾವಿ (ರ)ರವರ "ಅಲ್ ಇಅಲಾನು ಬೀ ತೌಬೀಖ್ ಲಿಮನ್ ದ್ಸಮ್ಮ ಅಹ್ಲ ತಾರೀಖ್" ಎಂಬ ಗ್ರಂಥದ ಕೆಲವೊಂದು ಭಾಗಗಳನ್ನಾಗಿದೆ ಮೇಲೆ ನೀಡಿರುವುದು. ಇಮಾಮ್ ಸಖಾವಿ (ರ) ರವರ ಕಾಲ ಅಥವಾ ಹತ್ತನೇ ಶತಮಾನದ ವರೆಗಿನ ಸೀರಾ ಗ್ರಂಥಗಳ ಎಣಿಕೆಯಾದರೆ, ಅದರೊಂದಿಗೆ ವರ್ತಮಾನ ಕಾಲದವರೆಗಿನ ಗ್ರಂಥಗಳನ್ನು ಕೂಡ ಸೇರಿಸಿ ಓದುವುದಾದರೆ, ಇಷ್ಟರ ಮಟ್ಟಿಗೆ ಚರ್ಚಿಸಲ್ಪಟ್ಟ ಒಂದು ವ್ಯಕ್ತಿಯನ್ನು ಇತಿಹಾಸದಲ್ಲಿ ಕಾಣಲು ಅಸಾಧ್ಯ.
ಪುಣ್ಯ ನಬಿಯವರ ಸೌಂದರ್ಯ, ಸ್ವಭಾವ, ಜೀವನಶೈಲಿ, ಸಾಮೂಹಿಕ ಬದುಕು ಮೊದಲಾದವುಗಳಾಗಿದೆ ’ಶಮಾಇಲುನ್ನಬೀ’ ಎಂಬ ವಿಜ್ಞಾನ ಶಾಖೆಯ ತಿರುಳು ಎಂದು ಸರಳವಾಗಿ ವ್ಯಾಖ್ಯಾನಿಸಬಹುದು.
~ ಆಸಿಫ್ ಮುಈನಿ ಅಲ್ ಅದನಿ ಆಚಂಗಿ
Comments