ತಂದೆಯ ವಿಯೋಗದ ಬಳಿಕ ಮುಹಮ್ಮದ್ ಅಲಿ ಜೌಹರ್ ಹಾಗು ಶೌಖತ್ ಅಲಿಯನ್ನು ಬೆಳೆಸಿದವಳು ಮಹಾತಾಯಿ ಬೇಗಂ. ಮಹಾ ವಿದುಷಿಯಾದ ತಾಯಿ ಬಾಲ್ಯದಲ್ಲೇ ಮಕ್ಕಳಿಗೆ ಪವಿತ್ರ ಖುರ್‌ಆನ್ ಕಲಿಸಿದರು. ಧಾರ್ಮಿಕ ಅನುಭೂತಿ ಪ್ರಾಪ್ತಿಯಾದ ಬಳಿಕ ಬೌದ್ಧಿಕ ಅಧ್ಯಯನದ ಕನಸು ಕಂಡು ತಾಯಿ ಖುದ್ದಾಗಿ ಜೌಹರನ್ನು ಉನ್ನತ ಮಟ್ಟದ ಶಿಕ್ಷಣ ಪಡೆಯಬೇಕೆಂದು ಪ್ರೋತ್ಸಾಹಿಸಿ ಲಂಡನ್ನಿಗೆ ಕಳುಹಿಸಿ ಕೊಟ್ಟಳು.
ಪತ್ರಕರ್ತ, ಕವಿ ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರಾದ ಮೌಲಾನಾ ಮುಹಮ್ಮದ್ ಅಲಿ ಜೌಹರ್ ಉತ್ತರ ಪ್ರದೇಶದ ರಾಂಪುರದ ರಾಜ್ಯದ ನೈಜಾಬಾದ್‌ನಲ್ಲಿ ಡಿಸೆಂಬರ್ 10, 1878 ರಲ್ಲಿ ಜನಿಸಿದರು. ತಂದೆ ಶೈಖ್ ಅಬ್ದುಲ್ ಅಲಿ ಖಾನ್ ಐದು ವರ್ಷದ ಮಗು ಜೌಹರನ್ನು ಬಿಟ್ಟು ಇಹಲೋಕ ತ್ಯಜಿಸುತ್ತಾರೆ. ತಾಯಿ ಆಬಿದಾ ಬಾನು ಬೇಗಂ ಪ್ರೀತಿಯಿಂದ 'ಬೀ ಅಮ್ಮನ್' ಎಂದು ಕರೆಯುತ್ತಾರೆ. ಜೌಹರರ ಪಾಲಿಗೆ ತಂದೆಯ ಕರ್ತವ್ಯವನ್ನು ಇದೇ ಮಹಾತಾಯಿ ನೆರವೇರಿಸಿದಳು. ಸಹೋದರ ಶೌಕತ್ ಖಿಲಾಫತ್ ಚಳವಳಿಯ ನಾಯಕ. ಮನೆಯಲ್ಲಿ ಪ್ರಾಥಮಿಕ ಶಿಕ್ಷಣ, ಬಳಿಕ ಬರೇಲ್ವಿ ಪ್ರೌಢ ಶಾಲೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ. ಅಲ್ಲಿಂದ ಅಲಹಾಬಾದ್ ಯುನಿವರ್ಸಿಟಿಯಲ್ಲಿ ಉನ್ನತ ಶಿಕ್ಷಣವ ಮಾಡಿದರು.
ಅನಾಥವಾಗಿ ಬೆಳೆದ ಮಗನನ್ನು 1890 ರಲ್ಲಿ ಆಧುನಿಕ ಇತಿಹಾಸದ ಅಧ್ಯಯನಕ್ಕಾಗಿ ಆಕ್ಸ್‌ಫರ್ಡ್‌ಗೆ ಕಳುಹಿಸುವಾಗ ಬೇಗಮ್‌ರ ಕಣ್ಣು ತುಂಬಿದವು. ಮಗನಿಗಾಗಿ ದಿನಾಲೂ ತಹಜ್ಜುದ್ ನಮಾಝ್¹ ಮಾಡಿ ಕಣ್ಣೀರಿಳಿಸುತ್ತಿದ್ದರು. ತಾಯಿಯ ಆರ್ದ್ರತೆ ಮುಗಿಲು ಮುಟ್ಟಿತು. ಮಗನನ್ನು ಎದೆಗಪ್ಪಿದಾಗ ಬಾಷ್ಪ ಹನಿ ಜಿನುಗಿದವು. ಕವಯತ್ರಿಯಾದ ತಾಯಿ 'ನಿಮ್ಮನ್ನು ಕನವರಿಸಿ ಸುರಿಸಿದ ಕಣ್ಣೀರಾಗಿದೆ ಈ ವಸ್ತ್ರದ ತುಂಡು. ಮಗಾ, ನೀನು ಹಿಡಿದಿಟ್ಟುಕೋ! ತಾಯಿ ನೆನಪಾದಾಗ ಮೂಗಿನ ಬಳಿ ಹಿಡಿದರಾಯ್ತು. ತಾಯಿಯ ಕಣ್ಣೀರ ಗಂಧ ನಿನಗರಿಯುತ್ತದೆ..!' ಎಂದು ಹೇಳಿ ಎರಡು ಉಪದೇಶ ನೀಡುತ್ತಾರೆ. "ನೀನು ಕಲಿತು, ಸಂಪಾದಿಸಿ ಮನೆಯ ಅರಮನೆಯನ್ನಾಗಿಸಲೋ, ದೊಡ್ಡ ವ್ಯಕ್ತಿಯಾಗಬೇಕೆಂಬ ಆಸೆ ನನ್ನದಲ್ಲ. ನನ್ನ ಭಾರತಕ್ಕೆ ಸ್ವಾತಂತ್ರ್ಯ ಸಿಗಬೇಕು. ಅದು ನಿನ್ನ ಮೂಲಕವಾಗಬೇಕು..!
ಅಲ್ಲದೆ, ಲಂಡನಿನ ಶೈತ್ಯ ಕಾಲದಲ್ಲಿ ಭಾರೀ ಚಳಿ ಎಂದು ತಿಳಿದಿರುವೆ. ಆದರೆ ನೀನು ಒಂದು ದಿವಸ ಕೂಡಾ ತಹಜ್ಜುದ್ ನಮಾಝ್ ಉಪೇಕ್ಷಿಸುವವನಾಗಕೂಡದು. ನೀನು ಖುರ್‌ಆನ್ ಕಲಿತವನು..!"
ಸ್ನೇಹಿತ ಕಮರುದ್ದೀನ್ ಗೆಳೆಯನ ಕುರಿತು; 'ಹಲವು ವರ್ಷಗಳ ಕಾಲ ನಾವು ಒಂದೇ ರೂಮಿನಲ್ಲಿ ವಾಸಿಸುತ್ತಿದ್ದೆವು. ಮೌಲಾನಾ ಮುಹಮ್ಮದ್ ಅಲಿ ಜೌಹರರ ನಡುರಾತ್ರಿಯ ರೋಧನೆಯಿಂದಾಗಿ ನಮಗೆ ಎಚ್ಚರವಾಗುತ್ತಿದ್ದವು..' ಎಂದು ನೆನಪಿಸುತ್ತಾರೆ.
ಆಕ್ಸ್‌ಫರ್ಡ್‌ನಲ್ಲಿ ಜೌಹರ್ ಪ್ರತಿಭಾವಂತ ವಿದ್ಯಾರ್ಥಿ. ಸರಳ ವ್ಯಕ್ತಿತ್ವ ಮೈಗೂಡಿಸಿಕೊಂಡು ಸರ್ವರಿಗೂ ಮಾಡೆಲ್ ಆಗಿದ್ದರು. ತುರ್ಕಿ ಟೋಪಿ ಹಾಗೂ ಗಡ್ಡ ಬೆಳೆಸಿದ ವಿದ್ಯಾರ್ಥಿಯು ಸಹಪಾಠಿಗಳಿಗೆ ನಾಯಕನಾಗಿದ್ದ. ಒಟ್ಟಿನಲ್ಲಿ 'ಕ್ಯಾಂಪಸ್ಸಿನ ಮೇರು ವ್ಯಕ್ತಿ..' ಹೀಗಿರುವಾಗ ಆಧುನಿಕ ಕಮ್ಯುನಿಕೇಶನ್ ಇಲ್ಲದ ಆ ಕಾಲದಲ್ಲಿ ಪ್ರಿಯ ಸ್ನೇಹಿತ ಅಲ್ಲಾಮ ಇಕ್ಬಾಲರ ಪತ್ರ ತಲುಪುತ್ತದೆ-
'ಘರ್ಜಿಸುವ ಸಿಂಹವೇ ಬಂದರೂ
ಇಲ್ಲಿ ಅರಚಾಡಲು ಸಾಕಷ್ಟು ನರಿಗಳಿವೆ,
ಓಡಲು ತೋಳ ಸಂಘಗಗಳಿವೆ.
ಆದರೆ, ಘರ್ಜಿಸಲು ಸಿಂಹದ ಅಗತ್ಯವಿದೆ. ಘರ್ಜಿಸುವ ಸಿಂಹವೇ ಬಂದರೂ...!'
ಹಾಗೆ ಜೌಹರ್ 1928-29ರ ಇಸವಿಯ ಸಮಯದಲ್ಲಿ ಗಾಂಧೀಜಿ ಸೇರಿ ಹಲವು ಘಟಾನುಘಟಿಗಳು ಸೆರೆ ಮನೆಯಲ್ಲಿದ್ದರು. ನಾಯಕರನ್ನು ಬಿಡುಗಡೆಗೊಳಿಸಲು ಕೋರ್ಟಿನ ಮೆಟ್ಟಿಲೇರಿದರು. ಬ್ರಿಟಿಷರ ಬೇರು ಸಮೇತ ಕಿತ್ತೆಸೆಯಲು ಜೌಹರ್ ಸಾಕಷ್ಟು ಪ್ರಯತ್ನ ಪಟ್ಟರು. ಎರಡು ಬಾರಿ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದ ಜೌಹರ್ ಮೂರನೇ ಬಾರಿ ಹೋದದ್ದು ಲಂಡನ್ನಿಗೆ. ಇಂಡಿಯಾದ ಪ್ರತಿನಿಧಿಯಾಗಿ 80 ರಾಷ್ಟ್ರವನ್ನು ಆಳ್ವಿಕೆ ಮಾಡುವ ಚಕ್ರವರ್ತಿಯೊಂದಿಗೆ ಮಾತನಾಡಲು (Round Table Confrence) ಯಾರನ್ನು ಕಳುಹಿಸಿದು ಎಂಬ ಪ್ರಶ್ನೆ ಬಂದಾಗ ಗಾಂಧೀಜಿ ಸೂಚಿಸಿದ್ದು ಇದೇ ಜೌಹರನ್ನು. ದೇಶದಲ್ಲಿ ಹಲವರು ಅಸಮಾಧಾನ ವ್ಯಕ್ತಪಡಿಸಿದಾಗ 'ಬ್ರಿಟಿಷರ ಮುಂದೆ ಯುಕ್ತಿಪೂರ್ಣ ಮಾತನ್ನಾಡಿ ಅವರನ್ನು ಅಲುಗಾಡಿಸಲು ಆ ವ್ಯಕ್ತಿಗೆ ಸಾಧ್ಯವಿದೆ..!' ಎಂದಾಗಿತ್ತು ಗಾಂಧೀಜಿಯ ಗಟ್ಟಿ ಉತ್ತರ. ಜೌಹರ್, ಮಾತಿನ ಚಾಕಚಕ್ಯತೆಯಲ್ಲಿ ಎತ್ತಿದ ಕೈ.
ಮುಂಬೈನಿಂದ ಹಡಗಿನ ಮೂಲಕ ಸಂಚರಿಸುವಾಗ ನೇತಾರರು ಕೇಳಿದರು 'ನೀವು ಸಭೆಯಲ್ಲಿ ಹೇಳುವ ಮ್ಯಾನಿಫೆಸ್ಟೋ ಅಥವಾ ಪ್ರಸ್ತಾಪಿಸುವ ವಿಷಯ ಏನು..!?' ತನ್ನ ಶರ್ವಾನೀ ಜೇಬಿನಿಂದ ಸಣ್ಣ ಗಾತ್ರದ ಖುರ್‌ಆನ್ (ಸದಾ ಅದು ಜೇಬಲ್ಲಿರುತ್ತಿದ್ದವು) ಎತ್ತಿ ಹಿಡಿದು ''ಇದಾಗಿದೆ ನನ್ನ ಮ್ಯಾನಿಫೆಸ್ಟೋ, ಸರ್ವ ವಿಷಯವೂ ಅಡಕವಾಗಿದೆ..' ಎಂದು ಮರುತ್ತರಿಸಿದರು. ಹಾಗೇ ಲಂಡನ್ನಿನ ದುಂಡು ಮೇಜಿನ ಸಭೆಗೆ ಹಾಜರಾಗುತ್ತಾರೆ. ಸಭಾಪತಿ ಪ್ರಸ್ತಾಪಿಸಲು ಐದು ನಿಮಿಷ ಸಮಯ ನೀಡುತ್ತಾರೆ.
ಜೌಹರ್ ಇಟ್ಟ ಮೊದಲ ಬೇಡಿಕೆ 'ಸಮಯ ವಿಸ್ತರಿಸಬೇಕು..'. ನಾನು ಮೂವತ್ತೆರಡು ಕೋಟಿ (ಅಂದಿನ ಜನಸಂಖ್ಯೆ) ಜನತೆಯ ಪ್ರತಿನಿಧಿ.' ಎಂಬತ್ತು ರಾಷ್ಟ್ರದ ಪ್ರತಿನಿಧಿಯ ಮಧ್ಯೆ ಜೌಹರ ಮಾತು ನಿಖರವಾಗಿತ್ತು. ಒಂದು ಕೋಟಿ ಜನತೆಗೆ ಒಂದು ನಿಮಿಷದಂತೆ ಮೂವತ್ತೆರಡು ನಿಮಿಷ ನೀಡಿ ಎಂದಾಗ ಜಾರ್ಜ್ ಸಮ್ಮತಿಸಿದರು. ಈತ ಸಾಮಾನ್ಯನಲ್ಲನೆಂದು ಮೆಲ್ಲನೆ ಸರ್ವರಿಗೂ ವೇದ್ಯವಾಯಿತು.
ಮಾತಿನ ಮಧ್ಯೆ ಭಾರತದ ಬಗ್ಗೆ, ಸುಂದರ ಸಂಸ್ಕೃತಿಯ ಬಗ್ಗೆ ಹಾಗೂ ಐದು ಸಾವಿರ ಇತಿಹಾಸವಿರುವ ಭಾರತವನ್ನು ಸ್ಪಷ್ಟವಾಗಿ ಚಿತ್ರಿಸುತ್ತಾರೆ. ಹೃದ್ಯ ಅವತರಣೆ ಜನರ ಮನ ಸೂರೆಯಾಗಲು ನಿಮಿತ್ತವಾದವು. ನಿಮಗೆ ಮಯೂರಾ ಸಿಂಹಾಸನ ಬೇಕೋ ತೆಗೆಯಿರಿ, ವಜ್ರ ವೈಢೂರ್ಯಗಳನ್ನು ಖರೀದಿಸಿ. ಆದರೆ ಸುಂದರ ಭಾರತದ ಸಂಸ್ಕೃತಿಯನ್ನು ಹಾಳುಗೆಡವುದಕ್ಕೆ ನಾವು ಒಪ್ಪುವುದಿಲ್ಲ. ಸ್ವಾತಂತ್ರ್ಯ ನಮ್ಮ ಹಕ್ಕು.
ತನ್ನ ಭಾಷಣದ ಹದಿನೇಳನೇ ನಿಮಿಷದಲ್ಲಿ ಪ್ರೀತಿ ಪಾತ್ರರಾದ ಮುಹಮ್ಮದ್ ಪೈಗಂಬರರ ಕುರಿತು ಪ್ರಸ್ತಾಪಿಸಿದಾಗ
'ಆ ನಾಮವನ್ನು ಇಲ್ಲಿ ಉಚ್ಚರಿಸ ಕೂಡದು..' ಅಂದ ಜಾರ್ಜ್.
ಕುಳಿತುಕೊಂಡು 'ಗೌರವಾನ್ವಿತ ಜಾರ್ಜ್' ಎಂದು ಸಂಬೋಧಿಸಿ ಮಾತಾಡುತ್ತಿದ್ದ ವ್ಯಕ್ತಿ ಥಟ್ಟನೇ ಎದ್ದು ಟೇಬಲಿಗೆ ಕೈ ತಟ್ಟಿ ಹೇಳುತ್ತಾರೆ..
ಮಿಸ್ಟರ್ ಜಾರ್ಜ್!!
ನೀವು ನನ್ನ ಧರ್ಮದ ಬಗ್ಗೆ ಕೇಳಿದರೆ..?
ಫಸ್ಟ್ಲೀ, ಸೆಕೆಂಡ್ಲೀ, ಫೈನಲೀ..
'ನಾನು ಮುಸ್ಲಿಂ, ನಾನು ಮುಸ್ಲಿಂ, ನಾನೋರ್ವ ಮುಸ್ಲಿಂ..'
ನೀವು ನನ್ನ ರಾಷ್ಟ್ರದ ಬಗ್ಗೆ ಕೇಳಿದರೆ..?
ಫಸ್ಟ್ಲೀ, ಸೆಕೆಂಡ್ಲೀ, ಫೈನಲೀ..
'ನಾನು ಭಾರತೀಯ, ನಾನು ಭಾರತೀಯ, ನಾನೋರ್ವ ಭಾರತೀಯ..!' ಎಂದು ಘರ್ಜಿಸಿ ಇಡೀ ಸದನವನ್ನೇ ಅಲುಗಾಡಿಸಿದರು ಎಂದು ಚರಿತ್ರೆ ಹೇಳುತ್ತಿದೆ...!! ಇಡೀ ರಾಷ್ಟ್ರಕ್ಕಾಗಿ ಭಾಷಣದ ರಭಸದಿಂದ ಬಿಸಿರಕ್ತ ಕಣಗಳ ಹೊರಚೆಲ್ಲುತ್ತಾರೆ. ಜೌಹರರ ದೇಶಪ್ರೇಮದ ಕುರಿತು ಗಾಂಧೀಜಿಯ ಮಾತು; 'ಹಲವು ರಾಷ್ಟ್ರಗಳಿಗೆ ಸ್ವಾತಂತ್ರ್ಯ ದೊರಕಲು ಹಲವಾರು ಮೇಧಾವಿಗಳು ಮಾತನಾಡಿದ್ದಾರೆ. ಭಾರತಕ್ಕಾಗಿ ಮಾತಾಡಿದವರಲ್ಲಿ ಒಂದನೇ ಸ್ಥಾನ ನೀಡುವೆಯಾದರೆ ಅದು ಮುಹಮ್ಮದ್ ಅಲಿ ಜೌಹರ್‌ಗಾಗಿದೆ..'
ಮುಹಮ್ಮದ್ ಅಲಿ ಜೌಹರ್ ಟೈಮ್ಸ್, ಲಂಡನ್, ದಿ ಮ್ಯಾಂಚೆಸ್ಟರ್ ಗಾರ್ಡಿಯನ್ ಮತ್ತು ದಿ ಅಬ್ಸರ್ವರ್‌ನಂತಹ ಪ್ರಮುಖ ಬ್ರಿಟಿಷ್ ಮತ್ತು ಭಾರತೀಯ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದರು. 1911 ರಲ್ಲಿ ಕಲ್ಕತ್ತಾದಲ್ಲಿ ಇಂಗ್ಲಿಷ್ ವಾರಪತ್ರಿಕೆ 'ದಿ ಕಾಮ್ರೇಡ್' ಅನ್ನು ಪ್ರಾರಂಭಿಸಿದರು. ಇದು ಶೀಘ್ರವಾಗಿ ಮಹತ್ವಕಾರಿ ಬೆಳವಣಿಗೆ ಉಂಟುಮಾಡಿದವು. 1913 ರಲ್ಲಿ ಉರ್ದು ಭಾಷೆಯಲ್ಲಿ 'Hamdard' ಎಂಬ ದಿನಪತ್ರಿಕೆ ಪ್ರಾರಂಭಿಸಿದರು. ಈ ಪತ್ರಿಕೆಗಳು ಭಾರೀ ಜನಪ್ರಿಯತೆ ಪಡೆದವು. ಬ್ರಿಟಿಷ್ ವಿರೋಧಿ ಲೇಖನಗಳು ಪ್ರಕಟವಾಗುವುದರಿಂದ ಆಗಾಗ್ಗೆ ಜೈಲುವಾಸ ಅನುಭವಿಸಬೇಕಾಯಿತು . ಎಚ್. ಜಿ ವೇಲ್ಸ್ ಉಲ್ಲೇಖಿಸುತ್ತಾರೆ-- 'ಮುಹಮ್ಮದ್ ಅಲಿ ಜೌಹರ ಮೆಕಾಲೆಯ ಪೆನ್ನು, ಬರ್ಕ್‌ನ ನಾಲಗೆ ಹಾಗೂ ನೆಪೋಲಿಯನ್ ಹೃದಯ ಹೊಂದಿದ್ದರು. ಕತ್ತಿಯ ಬದಲು ಪೆನ್ನು ಆರಿಸಿದರು'. ಹೀಗೆ ಸ್ವಾತಂತ್ರ್ಯದ ಕುರಿತು ಬರೆಯುವುದು ಪುನಃ ಅರೆಸ್ಟ್ ಆಗುವುದು. ಹೀಗೆ ಚಕ್ರೀಯ ಚಲನೆಯಲ್ಲಿ ಚಲಿಸುತ್ತಿದ್ದವು.
ಸದನದಲ್ಲಿ ಆವೇಶಕಾರಿ ಭಾಷಣ ಮಾಡುತ್ತಿದ್ದ ಜೌಹರ್ 'ಪಾಶ್ವವಾಯು'ವಿನಿಂದ ಥಟ್ಟನೇ ನೆಲಕ್ಕಪ್ಪಳಿಸಿದರು. ಅಲ್ಲಿಂದ ತಾನು ಕಲಿತ ಕ್ಯಾಂಪಸ್ಸಿನ 'ಮೆಡಿಕಲ್ ಕಾಲೇಜಿ'ಗೆ ಕರೆದೊಯ್ದು ಜೀವನದ ಕೊನೇ ಗಳಿಗೆಯಲ್ಲಿ ಉರ್ದುವಿನಲ್ಲೂ ಇಂಗ್ಲೀಷ್‌ನಲ್ಲೂ ಎರಡು ಮಾತನ್ನಾಡುತ್ತಾರೆ..
೧] ಪ್ರಜ್ಞಾಹೀನ ಸ್ಥಿತಿಯಲ್ಲೂ ಮಿಂಚಿನಂತೆ ನನ್ನ ಪ್ರವಾದಿಯನ್ನು ದರ್ಶಿಸುತ್ತಿದ್ದೇನೆ. ಅವರು ಈ ನಿಮಿಷದಲ್ಲೂ ಹೇಗೆ ಬರುತ್ತಿದ್ದಾರೆ!. ಬಳಿಕ 'ಬಾಲ್ಯದಿಂದಲೇ ನನ್ನ ತಾಯಿ ಆ ಸ್ನೇಹವನ್ನು ನೀಡಿ ಬೆಳೆಸಿದ್ದಾರೆ' ಎಂದು ವೇದ್ಯವಾಯಿತು.
೨] 'ಭಾರತ ನನ್ನನ್ನು ಕಾಯುತ್ತಿದೆ. ಒಂದೋ ನನ್ನನ್ನು ದಫನ ಮಾಡಲು ಆರಡಿ ಮಣ್ಣು ಕೊಡಿ, ಇಲ್ಲದಿದ್ದರೆ ನನ್ನ ದೇಶಕ್ಕೆ ಸ್ವಾತಂತ್ರ್ಯ ಕೊಡಿ. ಪರಾತಂತ್ರದ ಮಣ್ಣಲ್ಲಿ ನಾನು ದಫನವಾಗಲಾರೆ'
ಎಂದು ಘರ್ಜಿಸಿದರು..
ಲಂಡನ್ನಿನಲ್ಲಿ ರೋಗ ಊಲ್ಬಣಗೊಂಡು ಪರಿಸ್ಥಿತಿ ಬಿಗಡಾಯಿಸಿತು. ಕೊನೆಗೆ 1931 ಜನವರಿ 4 ರಂದು ಅಸುನೀಗಿದರು. ಗಮನಾರ್ಹ ಅಂಶವೆಂದರೆ, ಜೌಹರರ ಮಾತಿನಂತೆ ಸ್ವಾತಂತ್ರ್ಯ ಸಿಗುವವರೆಗೂ ಮಾತೃಭೂಮಿಗೆ ಕೊಂಡಯ್ಯಬಾರದು ಎಂಬ ಮಾತಿನಂತೆ ಫೆಲೆಸ್ತೀನಿನ ಬೈತುಲ್ ಅಖ್ಸಾದಲ್ಲಿ ದಫನಗೈಯ್ಯಲಾಯಿತು.
ಸುಬ್‌ಹಾನಲ್ಲಾ!
ಜೌಹರ್, 1920 ರಲ್ಲಿ ಸ್ಥಾಪನೆಯಾದ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಸಹ-ಸಂಸ್ಥಾಪಕರಲ್ಲಿ ಒಬ್ಬರು. ರಾಂಪುರದ ಬಳಿ ತನ್ನ ಹೆಸರಿನ ಒಂದು ಯುನಿವರ್ಸಿಟಿಯೇ ಇದೆ! ಜೌಹರರ ಸ್ಮರಣಾರ್ಥವಾಗಿ ಭಾರತ ಸರ್ಕಾರ ಅಂಚೆಚೀಟಿಗಳು ಜಾರಿ ಮಾಡಿದ್ದವು. ಒಟ್ಟಿನಲ್ಲಿ ಕ್ರಾಂತಿ ಮಾಡಿದ ಮುಹಮ್ಮದ್ ಅಲಿ ಜೌಹರ್ ನಂತಹ ಜೌಹರ್‌ಗಳು ಇನ್ನೂ ಹುಟ್ಟು ಪಡೆಯಲಿ..
~ ಅಶ್ರಫ್ ನಾವೂರು
Comentários