ಒಂದು ಸೂರ್ಯ ಅಸ್ತಮಿಸುವಾಗ ಇನ್ನೊಂದು ಸೂರ್ಯ ಉದಯವಾಗುತ್ತದೆ. ಇಮಾಮ್ ಅಬೂ ಹನೀಫಾ (ರ) ಅವರ ಮರಣ ಹಾಗು ಅದೇ ವರ್ಷದಲ್ಲಿ ಇಮಾಮ್ ಶಾಫಿ (ರ) ರವರ ಜನನವನ್ನು ಈ ರೀತಿ ಅಲಂಕಾರಿಕವಾಗಿ ಓದಬಹುದು. ಇಮಾಮ್ ಅಬೂ ಹನೀಫಾ (ರ) ಅಗಲಿದ ಹಿಜ್ರಾ 150 ರಲ್ಲಿಯೇ ಮತ್ತೊಬ್ಬ ಪಂಡಿತ ತೇಜಸ್ಸನ್ನು ಇಸ್ಲಾಮಿಕ್ ಜಗತ್ತು ವರದಾನವಾಗಿ ಪಡೆದುಕೊಂಡಿತು. "ಇಡೀ ಜಗತ್ತಿನ ಭೂಪಟವನ್ನೇ ಜ್ಞಾನದ ಬೆಳಕಿನಿಂದ ಬೆಳಗಿಸುವಂತೆ ಖುರೈಶ್ ವಿದ್ವಾಂಸರು ಬರಲಿದ್ದಾರೆ" ಎಂಬ ಪೈಗಂಬರರ ಮಾತಿನ ನೈಜತೆ, ಒಂದೂವರೆ ಶತಮಾನದ ನಂತರ ಬಂದ ಇಮಾಮ್ ಶಾಫಿಈ (ರ) ರವರೇ ಆಗಿದ್ದಾರೆ ಎಂಬುವುದು ಬಹುತೇಕ ವಿದ್ವಾಂಸರ ಒಮ್ಮತಾಭಿಪ್ರಾಯ. ವಿಶ್ವಾಸ ಶಾಸ್ತ್ರದಲ್ಲಿ ನಮ್ಮ ಇಮಾಮ್ ಅಬುಲ್ ಹಸನುಲ್ ಅಶ್ಅರಿ (ರ). ಅಶ್‌ಅರಿಗಳು ಯೆಮೆನಿಗಳು. ಕರ್ಮಶಾಸ್ತ್ರದ ಇಮಾಮ್ ಕೂಡ ಯೆಮೆನಿ ಆಗಿರುವುದು ಸಂತೋಷದಾಯಕ. 'ವಿಶ್ವಾಸಶಾಸ್ತ್ರ ಮತ್ತು ಕರ್ಮಶಾಸ್ತ್ರ ಯಮೆನಿಯಾಗಿದೆ' ಎಂಬ ಹದೀಸ್ ಗಮನಾರ್ಹ. ತನ್ನ ಪಿತೃಪರಂಪರೆಯಲ್ಲಿ ಒಬ್ಬರು ಸ್ವಹಾಬಿಯೂ ಆಗಿದ್ದ ಶಾಫಿಈ (ರ) ಎಂಬ ಮಹಾನರ ಹೆಸರಿಗೆ ಸೇರಿಸುವ ಮೂಲಕ 'ಶಾಫಿಈ' ಎಂಬ ನಾಮದಲ್ಲಿ ಪ್ರಸಿದ್ಧರಾದರು.
ಎರಡನೇ ವಯಸ್ಸಿನಲ್ಲಿ ತಂದೆ ಇದ್ರೀಸ್ ಮರಣಹೊಂದುತ್ತಾರೆ. ಜನಿಸಿದ ಅಲ್ಪ ಸಮಯದಲ್ಲಿಯೇ ಅವರ ತಂದೆ ನಿಧನರಾದಾಗ, ಶ್ರೇಷ್ಠ ವಿದ್ವಾಂಸರನ್ನು ರೂಪಿಸುವ ಜವಾಬ್ದಾರಿಯನ್ನು ತಾಯಿ ಫಾತಿಮಾ ಸ್ವತಃ ತಾವೇ ವಹಿಸಿಕೊಂಡರು. ಅವರ ಪಿತೃ ಪರಂಪರೆ ಹೀಗಿದೆ. ಇದ್ರೀಸ್, ಅಬ್ಬಾಸ್, ಉಸ್ಮಾನ್, ಶಾಫಿಈ, ಸಾಇಬ್, ಉಬೈದ್, ಅಬ್ದು ಯಝೀದ್, ಹಾಶಿಮ್, ಮುತ್ತಲಿಬ್, ಅಬ್ದು ಮನಾಫ್.
ಇಮಾಂ ಶಾಫಿಈ (ರ) ಖುರೈಷಿಗಳಾಗಿದ್ದರು ಎಂಬ ಐತಿಹಾಸಿಕ ಸತ್ಯದ ವಿರುದ್ಧ ಕೆಲವರು ಎತ್ತಿರುವ ಆಕ್ಷೇಪಗಳು ಆಧಾರರಹಿತವಾಗಿವೆ. ಇಮಾಂ ಬುಖಾರಿ ಮತ್ತು ಇಮಾಂ ಮುಸ್ಲಿಂ ಸೇರಿದಂತೆ ವಿದ್ವಾಂಸ ಶ್ರೇಷ್ಠರು ಈ ಸರಣಿಯನ್ನು ದೃಢಪಡಿಸಿದ್ದಾರೆ. ತಾಯಿ ಅಸದ್ ಗೋತ್ರದವಳು ಎಂಬುದು ಪ್ರಬಲಾಭಿಪ್ರಾಯ. ಇದನ್ನು ಸ್ವತಃ ಇಮಾಂ ಶಾಫಿಈ (ರ) ರವರೇ ಬಹಿರಂಗಪಡಿಸಿದ್ದಾರೆ. ಆದರೆ ಫಾತಿಮಾ ಅವರು ಅಲಿ (ರ) ರವರ ಪುತ್ರ ಹುಸೈನ್ (ರ) ರವರ ಪುತ್ರ ಅಬ್ದುಲ್ಲಾ (ರ) ರವರ ಮಗಳು ಎಂದು ಅಲ್-ಹಾಫಿಝ್ ಹಕೀಮ್ (ರ) ರವರು ಉಲ್ಲೇಖಿಸಿದ್ದಾರೆ. ಈ ಅಭಿಪ್ರಾಯದ ಪ್ರಕಾರ, ತಾಯಿ ಮತ್ತು ತಂದೆ ಈರ್ವರೂ ಖುರೈಷಿಗಳಾಗುತ್ತಾರೆ.
ಹಸಿವು ಮತ್ತು ಸಂಕಷ್ಟಗಳ ನಡುವೆಯೂ ತಾಯಿ ಆ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದಳು. ಇಮಾಮರು ಉದಾತ್ತ ಕುಟುಂಬಕ್ಕೆ ಸೇರಿದವರಾಗಿದ್ದರೂ, ಬಡವರಾಗಿಯೇ ಬದುಕುತ್ತಿದ್ದರು. ವಂಶಜರ ಪ್ರಮಾಣಿತವಲ್ಲದ ಚಟುವಟಿಕೆಗಳಿಂದ ದೂರವಿರುವುದು ಸಹಜ. ಅದರೊಂದಿಗೆ, ನಿರ್ಗತಿಕರೊಂದಿಗೆ ಬದುಕಲು ಮತ್ತು ಬಡತನದ ಮೂಲಕ ಅವರ ಅಗತ್ಯಗಳನ್ನು ಅನುಭವಿಸಲು ಇಮಾಮರಿಗೆ ಸಾಧ್ಯವಾಯಿತು. ಪರಂಪರೆಯ ವೈಭವ ಮತ್ತು ಬಡತನದ ಪರಿಮಳ ಒಂದುಗೂಡಿದಾಗ ಉದಾತ್ತವಾದ ಒಂದು ಬದುಕಿನ ಪಾವಿತ್ರ್ಯತೆ ಪ್ರಾಪ್ತವಾಯಿತು. ಮಂತ್ರಿಗಳು ಬಡವರಿಗೆ ಕೊಡುವ ಉಡುಗೊರೆಯನ್ನು ಅವರು ಸ್ವೀಕರಿಸಲಿಲ್ಲ. ಕಾರಣ, ಅವರು ಕುಟುಂಬದೊಂದಿಗೆ ಶ್ರೀಮಂತರಾಗಿದ್ದರು. ಆದರೆ ರಾಜನು ನೀಡುವ ಹದಿಯಾವನ್ನು ಬಡವರಿಗೆ ಹಂಚಲು ಉತ್ಸುಕರಾಗಿದ್ದರು.
ಇಮಾಂ ಮಾಲಿಕ್ (ರ) ಮತ್ತು ಶೇಖ್ ಸಾಂಜಿ (ರ) ಸೇರಿದಂತೆ ಪ್ರಖ್ಯಾತ ಗುರುಗಳಿಂದ ಜ್ಞಾನವನ್ನು ಪಡೆದರು. ಇಮಾಂ ಹಂಬಲಿ ಮದ್ಹಬಿನ ಇಮಾಂ ಅಹ್ಮದ್ ಬಿನ್ ಹಂಬಲ್ (ರ) ಅವರ ಶಿಷ್ಯರಲ್ಲಿ ಪ್ರಮುಖರು. ಆದರೆ ತನಗಿಂತ ಹದಿನಾಲ್ಕು ವರ್ಷ ಕಿರಿಯ ಪ್ರಾಯದ ಇಮಾಂ ಅಹ್ಮದ್ ಇಬ್ನ್ ಹಂಬಲ್ (ರ) ಹದೀಸ್ ಶಾಸ್ತ್ರದಲ್ಲಿ ಪ್ರಾವೀಣ್ಯತೆ ಹೊಂದಿದ್ದರಿಂದ ಅವರಿಂದಲೂ ವಿದ್ಯೆಯನ್ನು ಕಲಿಯಲು ಇಮಾಂ ಶಾಫಿಈ(ರ) ಕಾಳಜಿ ವಹಿಸಿದ್ದು, ಜ್ಞಾನಾಕಾಂಕ್ಷಿಗಳಿಗೆ ಉತ್ತಮ ಮಾದರಿಯಾಗಿದೆ.
ಏಳನೇ ವಯಸ್ಸಿನಲ್ಲಿಯೇ ಖುರ್‌ರಾನ್ ಕಂಠಪಾಠ ಮಾಡಿ ತದನಂತರ ಹದೀಸನ್ನೂ ಕಂಠಪಾಠ ಮಾಡಿದರು. ಹದೀಸ್ ವಿದ್ವಾಂಸರಿಂದ ಹದೀಸ್‌ಗಳನ್ನು ಕೇಳಿ ಕರಗತ ಮಾಡಿಕೊಂಡರು. ಮರದ ತುಂಡುಗಳು, ಚರ್ಮ ಅಥವಾ ಮೂಳೆಗಳ ಮೇಲೆ ಬರೆದಿಡುತ್ತಿದ್ದರು. ಒಂದು ಭಾಗದಲ್ಲಿ ಮಾತ್ರ ಬರೆಯಲಾದ ಕಾಗದ ಮತ್ತು ಗ್ರಂಥಗಳನ್ನು ಹುಡುಕಿ, ಅದರ ಇನ್ನೊಂದು ಭಾಗದಲ್ಲಿ ಹದೀಸನ್ನು ಬರೆದಿಟ್ಟರು. ಬಡತನದಿಂದ ವಿದ್ಯಾಭ್ಯಾಸಕ್ಕೆ ಅಗತ್ಯವಾದ ಹಣವಿಲ್ಲದೆ ಕಷ್ಟಪಟ್ಟರೂ ತಾಯಿಯ ಮಧ್ಯಸ್ಥಿಕೆಗಳು ಮಗನನ್ನು ಜ್ಞಾನದ ಒಡನಾಡಿಯನ್ನಾಗಿ ಮಾಡಿತು.
ಇಮಾಮರ ಜೀವನವು ಜ್ಞಾನದ ನಿರಂತರ ಪ್ರಯಾಣವಾಗಿತ್ತು. ಅವರು ಜ್ಞಾನದ ದಾಹದಿಂದ ಮೆಕ್ಕಾ, ಮದೀನಾ, ಯೆಮೆನ್ ಮತ್ತು ಇರಾಕ್ ದೇಶಗಳಲ್ಲಿ ಅಲೆದಾಡಿದರಲ್ಲದೆ, ಪ್ರತಿ ದೇಶದ ವಿದ್ವಾಂಸ ಶ್ರೇಷ್ಠರಿಂದ ಜ್ಞಾನವನ್ನು ಹೀರಿಕೊಂಡರು.
ಇಮಾಂ ಶಾಫಿ (ರ) ವರನ್ನು ಇತರ ಇಮಾಮ್‌ಗಳಿಗಿಂತ ಭಿನ್ನವಾಗಿರಿಸುವುದು ಅವರು ಎಲ್ಲಾ ಕ್ಷೇತ್ರಗಳಲ್ಲಿ ಸಂಪೂರ್ಣ ಪರಿಣತರಾಗಿದ್ದರು ಎಂಬುವುದಾಗಿತ್ತು. ಮುಂದಿನ ಪ್ರಯತ್ನವು ಶುದ್ಧ ಅರೇಬಿಕ್ ಭಾಷೆಯನ್ನು ನೈಜ ಶೈಲಿಯಲ್ಲಿ ಕಲಿಯುವುದಾಗಿತ್ತು. ಪಟ್ಟಣಗಳು ಮತ್ತು ನಗರಗಳಲ್ಲಿ ಅರಬ್ಬೇತರರೊಂದಿಗೆ ಸಹವಾಸದಿಂದ ಅಸ್ತಿತ್ವದಲ್ಲಿರಬಹುದಾದ ಅರೇಬಿಕ್ ಭಾಷೆಯ ,ಅರೇಬಿಕ್ ಅಲ್ಲದ ಸ್ವಾಧೀನವನ್ನು ಅರಿತು, ಹಳ್ಳಿ ಪ್ರದೇಶದೆಡೆಗೆ ಹೊರಟು ಹುಝೈಲ್ ಗೋತ್ರದವರೊಂದಿಗೆ ಬೆರೆತು ಜೀವಿಸಿದರು.
ಅದರ ಬಗ್ಗೆ ಸ್ವತಃ ಇಮಾಮರೇ ಹೇಳುತ್ತಾರೆ. ನಾನು ಮೆಕ್ಕಾದಿಂದ ಹೊರಟು, ಗ್ರಾಮ ವಾಸಿಗಳಾದ ಹುಝೈಲ್ ಗೋತ್ರದವರೊಂದಿಗೆ ಸೇರಿಕೊಂಡೆ. ಅವರ ಪ್ರಕೃತಿ ಮತ್ತು ಭಾಷೆ ಕರಗತ ಮಾಡಿಕೊಂಡೆ. ಅರಬ್ಬರಲ್ಲಿ ಅತ್ಯಂತ ಸಾಹಿತ್ಯಿಕ ಸಂಪ್ರದಾಯ ಅವರದಾಗಿತ್ತು. ಅವರೊಂದಿಗೆ ಪ್ರಯಾಣಿಸುತ್ತಾ, ಅವರು ಎಲ್ಲಿ ಇಳಿಯುತ್ತಾರೆ ಅಲ್ಲಿಯೇ ಇಳಿದು ನೆಲೆಸುತ್ತಿದ್ದೆ. ಮೆಕ್ಕಾಕೆ ಮರಳಿ ಬರುವಾಗ ಕವಿತೆಗಳು ಚೆನ್ನಾಗಿ ಪಳಗಿತು. ಸಾಹಿತ್ಯ ಮತ್ತು ಇತಿಹಾಸ ಹಿಡಿತದಲ್ಲಿತ್ತು. ಅರೇಬಿಕ್ ಭಾಷಾಪಂಡಿತ ಪ್ರಖ್ಯಾತನಾದ ಅಲ್-ಇಸ್ಮಾಯಿ ಹೇಳುತ್ತಾರೆ: 'ಹುಸೇಲ್ ಅವರ ಕವಿತೆಗಳಲ್ಲಿ ನನ್ನಲ್ಲಿದ್ದ ಕೆಲವು ದೋಷಗಳನ್ನು ನಾನು ಸರಿಪಡಿಸಿದ್ದು ಮುಹಮ್ಮದ್ ಬಿನ್ ಇದ್ರಿಸ್ ಎಂಬ ಕುರೈಶಿ ಯುವಕನ ಮೂಲಕವಾಗಿತ್ತು'. ಹತ್ತು ವರ್ಷಗಳ ಕಾಲ ಆ ಪಟ್ಟಣದಲ್ಲಿ ವ್ಯಯಿಸಿದರಲ್ಲದೆ ಆ ಸಮಯದಲ್ಲೇ ಬಿಲ್ಲುಗಾರಿಕೆಯನ್ನೂ ಕಲಿತರು.
ಕುರಾನ್, ಹದೀಸ್, ಕರ್ಮ, ವ್ಯಾಕರಣ, ಕಾವ್ಯ, ಬಿಲ್ಲುಗಾರಿಕೆ, ವೈದ್ಯಶಾಸ್ತ್ರ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು. ಇಮಾಂ ಶಾಫಿಯವರೊಂದಿಗೆ ಒಬ್ಬರು ಕೇಳುತ್ತಾರೆ. ತಮಗೆ ವಿದ್ಯೆಯಲ್ಲಿರುವ ಉತ್ಸಾಹ ಯಾವ ಬಗೆಯದ್ದು? ಮಹಾನರು ಉತ್ತರಿಸಿದರು, ನಾನು ಇದುವರೆಗೂ ಕೇಳಿರದ ಜ್ಞಾನದಿಂದ ಪ್ರತಿಯೊಂದು ಅಕ್ಷರಗಳು ಕೇಳುವಾಗ ನನ್ನ ಅಂಗಾಂಗಗಳಿಗೆಲ್ಲಾ ಕೇಳುವ ಶಕ್ತಿ ಇರುತ್ತಿದ್ದರೆ ಎಂದು ನಾನು ಬಯಸುತ್ತಿದ್ದೆ. ಹಾಗಾಗುವಾಗ ಅವಗಳಿಗೆಲ್ಲಾ ಆ ಜ್ಞಾನವನ್ನು ಕೇಳಿ ಆನಂದಿಸಬಹುದಲ್ಲವೇ? ಅವರು ಮತ್ತೂ ಕೇಳಿದರು. ನೀವು ಜ್ಞಾನವನ್ನು ಹೇಗೆ ಅರಸುತ್ತೀರಿ ? ಇಮಾಮರ ಉತ್ತರ ಹೀಗಿತ್ತು. ಒಬ್ಬ ಮಗನಲ್ಲದೆ ಇನ್ಯಾರೂ ಇಲ್ಲದ ಸ್ತ್ರೀ ಯೋರ್ವಳು ಅವಳ ಮಗ ನಾಪತ್ತೆಯಾದರೆ ಎಷ್ಟರವರೆಗೆ ಅರಸಿ ಹೋಗುವಳೋ ಅದೇ ರೀತಿಯಲ್ಲಿ ನಾನು ಜ್ಞಾನವನ್ನು ಅರಸುತ್ತೇನೆ. (ತದ್ಕಿರತ್ ಅಲ್-ತುಸಾಮಿ: 32)
ಆಳವಾದ ಜ್ಞಾನದ ಜೊತೆಗೆ ಅಲ್ಲಾಹನ ಮುಂದೆ ನಿರಂತರವಾಗಿ ಆರಾಧನೆಯಲ್ಲಿ ಮಗ್ನರಾಗಿದ್ದರು. ಪ್ರತಿ ದಿನವೂ ಖುರ್‌ಆನ್ ಒಂದು ಖತ್ಮ್ ಮತ್ತು ರಂಜಾನ್ನಲ್ಲಿ ಎರಡು ಖತ್ಮ ಗಳನ್ನು ಓದುತ್ತಿದ್ದರು ಎಂದು ರಬಿಅ ಇಬ್ನ್ ಸುಲೈಮಾನ್ ಹೇಳಿದ್ದಾರೆ.
ಅವರು ಇಮಾಂ ಮಲಿಕ್ (ರ) ರವರ ಬಳಿ ಗುರುತ್ವದೊಂದಿಗೆ ಸಂಪೂರ್ಣವಾಗಿ ಮುವತ್ವ ಗ್ರಂಥವನ್ನು ಅಧ್ಯಯನ ಮಾಡಿದರು. ಅವರಿಂದ ಕರ್ಮಶಾಸ್ತ್ರವನ್ನು ಅಧ್ಯಯನ ಮಾಡಿದರು. ಆದರೂ ಕೆಲವೊಮ್ಮೆ ಜನರ ಬಗ್ಗೆ ತಿಳಿದುಕೊಳ್ಳಲು ಇಸ್ಲಾಮಿಕ್ ದೇಶಗಳನ್ನು ಸುತ್ತುತ್ತಿದ್ದರು. ಕೆಲವೊಮ್ಮೆ ಮಕ್ಕಾಗೆ ಹೋಗಿ ತಾಯಿಯನ್ನು ಕಂಡು ಸಲಹೆಯನ್ನು ಪಡೆಯಲು ಸಮಯವನ್ನು ಕಂಡುಕೊಂಡರು.
ತನ್ನ ಚಿಂತನೆಗಳು ಮತ್ತು ಫತ್ವಾಗಳನ್ನು ಇಡೀ ಪ್ರಪಂಚವೇ ಅನುಸರಿಸುವ ರೀತಿಯಲ್ಲಿ ಇಸ್ಲಾಮಿಕ್ ಜ್ಞಾನ ಶಾಖೆಯನ್ನು ಜನಪ್ರಿಯಗೊಳಿಸಿದರಲ್ಲದೆ, ವಿಶೇಷವಾಗಿ ಇಸ್ಲಾಮಿಕ್ ಕರ್ಮ ಶಾಸ್ತ್ರಕ್ಕೆ ಜೀವ ತುಂಬಿದರು. ಖುರ್‌ಆನ್ ಮತ್ತು ಹದೀಸ್‌ನಲ್ಲಿನ ಇಮಾಮರ ಅಗಾಧ ಜ್ಞಾನವನ್ನು ಆಧರಿಸಿದ ಅವರ ಸಂಶೋಧನೆಗಳು ಹನಫಿ ಮತ್ತು ಮಾಲಿಕಿ ಕರ್ಮ ಶಾಸ್ತ್ರಧಾರೆಯಿಂದ ಭಿನ್ನವಾದ ಹೊಸ ಕರ್ಮಶಾಸ್ತ್ರಧಾರೆಯ ನಿರ್ಧಾರಕ್ಕೆ ತಲುಪಿಸಿತು. ಅದರೊಂದಿಗೆ ಇಮಾಮರು ಶಾಫಿಈ ಕರ್ಮ ಶಾಸ್ತ್ರದ ಅಮರನಾಗಿ ಬದಲಾದರು.
ಇಮಾಂ ಶಾಫಿ(ರ) ರವರ ಜೀವನದಲ್ಲಿ ಮೂರು ಪ್ರಮುಖ ಹಂತಗಳನ್ನು ಕಾಣಬಹುದು. ಒಂದು ಬಾಗ್ದಾದ್‌ನಿಂದ ಮಕ್ಕಾವರೆಗಿನ ಹಂತ. ಈ ಹಂತದಲ್ಲಿಯೇ ಇಮಾಮರ ಆಲೋಚನೆಗಳು ಬೆಳೆಯುವುದು ಮತ್ತು ಅವರು ಜ್ಞಾನದ ಆಳವನ್ನು ಹುಡುಕುತ್ತಾ ಪ್ರಯಾಣಿಸುವುದು. ಮಸ್ಜಿದ್ ಅಲ್-ಹರಾಮ್‌ನಲ್ಲಿ ಪ್ರತ್ಯೇಕ ಹಲ್ಕಾವನ್ನು ಸ್ಥಾಪಿಸಿ, ಕರ್ಮ ಶಾಸ್ತ್ರದ ಮೂಲಗಳನ್ನು ಪರಸ್ಪರ ತುಲನೆ ಮಾಡಿ ನೋಡಿದರು. ಎರಡನೆಯದಾಗಿ, ಇಮಾಮ್ ಶಾಫಿಯವರು ಮರಳಿ ಬಾಗ್ದಾದ್‌ಗೆ ಹಿಂದಿರುಗಿದ ಹಂತ. ಅದು ಹಿಜ್ರಾ 195 ರಲ್ಲಾಗಿತ್ತು. ಈ ಹಂತದಲ್ಲಿ ವಿವಿಧ ಕರ್ಮ ಶಾಸ್ತ್ರ ವಿದ್ವಾಂಸರ ಅಭಿಪ್ರಾಯಗಳನ್ನು ಅರ್ಥೈಸಿಕೊಂಡು ತನ್ನ ಉಸೂಲಿನೊಂದಿಗೆ ತುಲನೆಯಾಗುವುದನ್ನು ಬಲಪಡಿಸಿದ ಈ ಅವಧಿಯಲ್ಲಿ ಇಮಾಂ ಶಾಫಿ (ರ) ಕರ್ಮಶಾಸ್ತ್ರದ ಖದೀಮ್ (ಹಳೆಯ ನಿಯಮಗಳು) ರಚನೆಯಾಯಿತು.
ಮೂರನೆಯದಾಗಿ, ಬಾಗ್ದಾದ್‌ನಿಂದ ಈಜಿಪ್ಟ್‌ಗೆ (ಮಿಸ್ರ್) ತಲುಪಿದ ಹಂತ. ಇದು ಹಿಜ್ರಾ 195 ರಲ್ಲಾಗಿತ್ತು. ಈ ಸಂದರ್ಭದಲ್ಲಿ ಇಮಾಂ ಶಾಫಿಈ (ರ) ರವರು ಈ ಹಿಂದೆ ಕಾಣದ ಅನೇಕ ವಿಷಯಗಳನ್ನು ಮತ್ತು ಅನುಭವಗಳನ್ನು ಕಂಡರಿತರು. ಈ ಹೊಸ ಅನುಭವಗಳೊಂದಿಗೆ ಅವರು ತಮ್ಮ ಹಿಂದಿನ ಹಲವು ಅಭಿಪ್ರಾಯಗಳನ್ನು ಮೌಲ್ಯಮಾಪನ ಮಾಡಿ ಪರಿಷ್ಕರಿಸಿದರು. ಅದನ್ನೇ ಶಾಫಿಈ ಕರ್ಮ ಶಾಸ್ತ್ರದಲ್ಲಿ ಜದೀದ್ (ಹೊಸ ನಿಯಮ) ಎಂದು ಕರೆಯಲಾಗುತ್ತದೆ.
ಈಜಿಪ್ಟ್‌ಗೆ ತಲುಪಿದ ಇಮಾಮರು ತನ್ನ ಜೀವನದ ಕೊನೆಯ ಹಂತದಲ್ಲಿ ಶಾಫಿಈ ಕರ್ಮಶಾಸ್ತ್ರದ ನವೀಕರಣಕ್ಕೆ ಮುಂದಾಗುತ್ತಾರೆ. ಜದೀದ್‌ನನ್ನು ಕಂಡುಹಿಡಿಯುವುದರ ಜೊತೆಗೆ, ಉಮ್ಮು, ಇಮ್ಲಾ, ಕಿತಾಬುಲ್ ಖಸಾಮಾ, ಕಿತಾಬುಲ್ ಜಿಝಿಯಾ ಸೇರಿದಂತೆ ಅನೇಕ ಗ್ರಂಥಗಳನ್ನು ಈ ಅವಧಿಯಲ್ಲಿ ರಚಿಸಿದರು. ನಂತರದ ಕಾಲದಲ್ಲಿ ಬಂದ ಸಾವಿರಾರು ಕರ್ಮಶಾಸ್ತ್ರ ಗ್ರಂಥಗಳ ತಾಯಿ ಎಂದು ಇಮಾಮರ ಉಮ್ಮು ಗ್ರಂಥವನ್ನು ಪರಿಗಣಿಸಲಾಯಿತು.
ಕೇವಲ ನಾಲ್ಕು ವರ್ಷಗಳ ಅಲ್ಪಾವಧಿಯಲ್ಲಿ ಎಲ್ಲಾ ಧಾರ್ಮಿಕ ನಿಯಮಗಳನ್ನು ಪ್ರಮಾಣಬದ್ಧವಾಗಿ ನಿರ್ಧರಿಸಿ, ಕರ್ಮಶಾಸ್ತ್ರದ ಚಿಂತನೆಗಳನ್ನು ರೂಪಿಸಲು ಇಮಾಂ ಶಾಫಿಈ (ರ) ರವರಿಗೆ ಸಾಧ್ಯವಾಯಿತು ಎನ್ನುವುದು ಅಲ್ಲಾಹನು ಅವರಿಗೆ ನೀಡಿದ ಕರಾಮತ್ತೆಂದು ಬೆಲೆ ಕಲ್ಪಿಸಲಾಗಿದೆ. ಇಬ್ನ್ ಹಜರ್ ಹೈತಮಿ (ರ) ರವರು ತಮ್ಮ ಫಿಹ್ರಸ್ ನಲ್ಲಿ ಹೇಳುತ್ತಾರೆ.
ಇದು ಸಾಕಷ್ಟು ಚಿಂತನೀಯವಾದದ್ದು, ಮಾತ್ರವಲ್ಲದೆ ಇಮಾಮ್ ಶಾಫಿಯವರ ಮದ್ಹಬ್ ಮತ್ತು ಸಂಬಂಧಿತ ವಿಷಯಗಳ ವಿಸ್ತಾರವು ಇಷ್ಟು ಕಡಿಮೆ ಅವಧಿಯಲ್ಲಿ ಸಾಮಾನ್ಯವಾಗಿ ಸಂಭವಿಸಲು ಅಸಾಧ್ಯವಾದ ರೀತಿಯದ್ದು. ಒಂದು ಪುರುಷಾಯುಷ್ಯವಿಡೀ ದೀನಿಗಾಗಿ ದುಡಿದ ಇಮಾಮರು ಹಿಜ್ರಾ 204 ರಲ್ಲಿ ಮರಣಹೊಂದಿದಾಗ ಅವರಿಗೆ 54 ವರ್ಷವಾಗಿತ್ತು.
ಮೂಲ: ಮಲಯಾಳಂ
ಕನ್ನಡಕ್ಕೆ: ಸ್ವಾದಿಖ್ ಮುಈನಿ, ಬೆಳಾಲ್
תגובות