top of page
Writer's pictureAshiq Gandibagilu

ಸುಖಲೋಲುಪತೆಗೆ ಬಲಿಯಾದ ಅಬ್ಬಾಸಿಯ ಖಿಲಾಫತ್



ಅಬ್ಬಾಸಿ ಖಿಲಾಫತ್, ಚರಿತ್ರೆಯಲ್ಲಿ ವಿಶೇಷ ಸ್ಥಾನಮಾನ ಗಿಟ್ಟಿಸಿದ ರಾಜ ಮನೆತನ ಸುಮಾರು ಐನೂರು ವರ್ಷಗಳ ಕಾಲದ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸುಧಾರಣೆ ಕಂಡಿತು. ಅಬ್ಬಾಸಿ ಖಲೀಫರು ಜ್ಞಾನಾರ್ಜನೆಗೆ ನೀಡಿದ ಪ್ರೋತ್ಸಾಹದಿಂದ ಬಾಗ್ದಾದ್, ರಯ್ಯ್, ಈಜಿಪ್ಟ್, ಮೊರಾಕ್ಕೊ ಇತ್ಯಾದಿ ನಗರಗಳು ಧಾರ್ಮಿಕ ದೃಷ್ಟಿಕೋನ ಮತ್ತು ತತ್ವ ಚಿಂತನೆಯ ಸಂಗಮ ಭೂಮಿಯಾಗಿ ಮಾರ್ಪಟ್ಟಿತ್ತು.


ಪ್ರವಾದಿ ﷺ ರ ಚಿಕ್ಕಪ್ಪ ಅಬ್ಬಾಸಿ ವಂಶ ಪರಂಪರೆಯ ಮುಹಮ್ಮದ್ ಬಿನ್ ಅಲಿಯ್ಯ್ ಬಿನ್ ಅಬ್ದಿಲ್ಲಾಹಿ ಬಿನ್ ಅಬ್ಬಾಸ್ ಎಂಬವರು ಹಿ.132 ರಲ್ಲಿ ಅಬ್ಬಾಸಿ ಖಿಲಾಫತಿಗೆ ಮುಹೂರ್ತವಿಟ್ಟರು. ಪ್ರಥಮ ಖಲೀಫ ಅಬುಲ್ ಅಬ್ಬಾಸ್ ಅಬ್ದುಲ್ಲಾಹಿಲ್ ಸಫ್ಫಾಹ್. ರಾಜ್ಯಭಾರ ಆರಂಭ ಹಿ.656ರಲ್ಲಿ. ಹೌಲಾಕುಖಾನ್ ಮುಗಲಿಯ್ಯ್ ಎಂಬ ಮಂಗೋಲ್ ದೊರೆ ಅಬ್ಬಾಸಿ ಖಿಲಾಫತ್ ನ ಕೊನೆಯ ಖಲೀಫ ಅಬ್ದುಲ್ಲಾಹಿಲ್ ಮುಸ್ತಅಶಿಂ ನ ಹತ್ಯೆಗೆಯ್ಯುವುದರೊಂದಿಗೆ ಅಬ್ಬಾಸಿ ಖಿಲಾಫತ್ ಕೊನೆಗೊಂಡಿತು. ಅಬ್ಬಾಸಿ ಆಡಳಿತ ಕಾಲದಲ್ಲಿ ಹಲವಾರು ಗ್ರಂಥ ರಚನೆ,ವಿಶ್ವ ವಿದ್ಯಾಲಯಗಳು ವಿವಿಧ ಜ್ಞಾನ ಶಾಖೆಗಳಿಗೆ ಶಕ್ತಿ ತುಂಬಿದವು. ಎಲ್ಲಾ ಜ್ಞಾನ ಶಾಖೆಗಳಲ್ಲಿ ಪರಿಣಿತರು, ಯೋಗ್ಯರಾದ ಹಲವು ವ್ಯಕ್ತಿತ್ವಗಳು ಈ ಅವಧಿಯಲ್ಲಿದ್ದರು. ಕರ್ಮಶಾಸ್ತ್ರ, ಖುರ್ಆನ್ ಜ್ಞಾನ, ಹದೀಸ್, ವಿಧಿ ವಿಧಾನ ಶಾಸ್ತ್ರ, ತತ್ವಶಾಸ್ತ್ರ, ಕಾವ್ಯಶಾಸ್ತ್ರ, ಸೂಫಿಸಂ ಇತ್ಯಾದಿ ಕ್ಷೇತ್ರಗಳಲ್ಲಿ ಸಂಪೂರ್ಣ ಯೋಗ್ಯರಾದ ಉನ್ನತ ವಿದ್ವಾಂಸರು ಈ ಕಾಲದಲ್ಲಿ ಸಾನಿಧ್ಯ ವಹಿಸಿದ್ದರು.


ಅಬ್ಬಾಸಿ ಖಿಲಾಫತಿನಲ್ಲಿ ಉತ್ತಮ ಆಡಳಿತ ನಡೆಸಿದ ಅನೇಕ ಖಲೀಫರಿದ್ದರು. ಅಬೂ ಜಅಫರ್ ಅಬ್ದುಲ್ಲಾಹಿಲ್ ಮನ್ಸೂರ್ ಉತ್ತಮ ಆಡಳಿತಗಾರ ಹಾಗೂ ಉತ್ತಮ ರಾಜನೀತಿ ತಜ್ಞರಾಗಿದ್ದರು. ಹಲವು ಪ್ರದೇಶಗಳಲ್ಲಿ ಹಂಚಿ ಹೋಗಿದ್ದ ರಾಜ್ಯಗಳನ್ನು ಒಟ್ಟುಗೂಡಿಸಿ ಸುಭದ್ರ ರಾಜ್ಯವನ್ನು ನಿರ್ಮಾಣ ಮಾಡಿದರು. ರಾಜ್ಯದ ಪ್ರಜೆಗಳ ಸುಭದ್ರತೆಗೆ ಹಿ.132 ರಲ್ಲಿ ಟೈಗ್ರಿಸ್ ನದಿ ತಟದಲ್ಲಿ ಬಗ್ದಾದ್ ನಗರ ನಿರ್ಮಿಸಿದರು. ಅಬ್ಬಾಸಿ ಖಿಲಾಫತ್ ನ ಮೂರನೇ ಖಲೀಫ ಮುಹಮ್ಮದುಲ್ ಮಹಿದಿಯ ಆಡಳಿತಲ್ಲಿ ಪ್ರಜೆಗಳಿಗೆ ಉತ್ತಮ ಆಡಳಿತ, ಕ್ಷೇಮಾಭಿವೃದ್ಧಿ ದೊರಕಿತು. ಮಸ್ಜಿದುಲ್ ಹರಾಂ ಮತ್ತು ಮಸ್ಜಿದುನ್ನಬವಿ ವಿಸ್ತರಣೆಯಾದುದು ಇವರ ಅವಧಿಯಲ್ಲಾಗಿದೆ. ಐದನೇ ಖಲೀಫ ಹಾರೂನ್ ರಶೀದ್ ಮತ್ತು ಹತ್ತನೇ ಖಲೀಫ ಉತ್ತಮ ಆಡಳಿತ ನೀಡಿ ಅಭಿವೃದ್ಧಿಯ ಪಥಕ್ಕೆ ಕೊಂಡೊಯ್ದಿದ್ದಾರೆ.


ಅಬ್ಬಾಸಿ ಖಲೀಫರಲ್ಲಿ ಆರಂಭದ ಖಲೀಫರು ಉತ್ತಮ ಅಧಿಕಾರ ನಡೆಸಿದರೂ ನಂತರ ಬಂದ ಖಲೀಫರು ಮೋಜು - ಮಸ್ತಿ, ಆಟ ಸಂಗೀತ, ನೃತ್ಯ ಇತ್ಯಾದಿ ಮನೋರಂಜನೆಗೆ ಜೋತು ಬಿದ್ದು ಜನರ ನೋವು ಅಹವಾಲುಗಳನ್ನು ಸ್ವೀಕರಿಸುವಲ್ಲಿ ವಿಫಲರಾದರು. ಖಲೀಫರು ಮುಅ್ತಝಿಲತ್ ಮತ್ತು ಷೀಯಿಸಿಂ ಚಿಂತನೆಗೆ ವಾಲಿಕೊಂಡು ಅಹ್ಲು ಸುನ್ನತ್ತಿನ ನೈಜ ಆದರ್ಶಗಳನ್ನು ವಿರೂಪಗೊಳಿಸಿದರು. ಜನರೆಲ್ಲರು ಪವಿತ್ರ ಖುರ್ಆನ್ ಸೃಷ್ಟಿಕರ್ತನ ಸೃಷ್ಟಿ ಎಂಬ ವಿತಂಡ ವಾದವನ್ನು ಸ್ವೀಕರಿಸಬೇಕು ಎಂಬುದಾಗಿ ಸಾಮ್ರಾಜ್ಯದಲ್ಲಿ ಬಹಿರಂಗ ಹೇಳಿಕೆಯನ್ನು ಖಲೀಫ ನೀಡತೊಡಗಿದರು. ಈ ವಾದವನ್ನು ಸ್ವೀಕರಿಸದಿದ್ದರೆ ಜನರನ್ನು ಕಠೋರ ಶಿಕ್ಷೆಗೆ ಗುರಿಯಾಗಿಸುತ್ತಿದ್ದರು. ಏಳನೇ ಖಲೀಫ ಮಅ್ ಮೂನ್ ಸಾಮ್ರಾಜ್ಯದಲ್ಲಿ ಪ್ರಥಮ ಬಾರಿಗೆ ಮುಅ್ತಝಿಲತ್ ಚಿಂತನೆಯನ್ನು ಜಾರಿಗೆ ತಂದನು. ನಂತರದ ಮುಅ್ತಶಿಂ, ವಾಷಿಕ್ ಅದನ್ನು ಇನ್ನಷ್ಟು ಪ್ರಚಾರ ಪಡಿಸಿದರು. ಅಧಿಕಾರಕ್ಕೆ ಬೇಕಾಗಿ ಅಪ್ಪ, ಚಿಕ್ಕಪ್ಪಂದಿರನ್ನು ಖಲೀಫರು ಹತ್ಯೆ ಮಾಡುತಿದ್ದರು. ಈ ರೀತಿಯ ಅನೇಕ ಅರಾಜಕತೆಗಳು ಸಾಮ್ರಾಜ್ಯದಲ್ಲಿ ವೃದ್ಧಿಸಿತು.


ಖಲೀಫರು ದುರ್ಬಲರಾದಂತೆ ಸೈನಿಕ ಕಮಾಂಡರ್ ಗಳು ಮುನ್ನೆಲೆಗೆ ಬಂದು ರಾಜರನ್ನು ನಿಯಂತ್ರಿಸುವ ಸ್ಥಿತಿಗೆ ಅಬ್ಬಾಸಿ ಖಿಲಾಫತ್ ಬಂದು ಬಿಟ್ಟಿತು. ಈ ರೀತಿಯ ಕಾರ್ಯಗಳಿಂದ ಬುವೈಹ್, ಸಲ್ಜೂಖಿ ವಂಶಸ್ಥರು ಸಿಂಹಾಸನಕ್ಕೆ ಏರಿ ಆಡಳಿತ ನಡೆಸಿದರು. ಅಬ್ಬಾಸಿ ಖಲೀಫರು ನಾಮ ಮಾತ್ರ ಖಲೀಫರಾಗಿ ಉಳಿದರಲ್ಲದೆ ಸೇನಾ ಮುಖ್ಯಸ್ಥರ ಕೈಗೊಂಬೆಯಾದರು. ಹೀಗೆ ಪ್ರಜೆಗಳ ಹಿತರಕ್ಷಣೆಯನ್ನು ಮರೆತು ಸುಖಲೋಲುಪತೆಯಿಂದ ಬದುಕು ಕಟ್ಟಿಕೊಂಡಾಗ ಸಾಮ್ರಾಜ್ಯ ಅವನತಿ ಕಂಡಿತು.


~ ಮುಹಮ್ಮದ್ ಆಶಿಕ್ ಗಂಡಿಬಾಗಿ

80 views0 comments

Comentários


bottom of page