top of page
Writer's pictureAshraf Navoor

ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್



ಕನ್ನಡ ನಾಡಿಗೆ ಅನನ್ಯ ಕೊಡುಗೆ ನೀಡಿದ ಹಿರಿಯ ಧರ್ಮಗುರು ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್. ಧಾರ್ಮಿಕ ಅರಿವು ಮಾತ್ರ ಸಿಗುತ್ತಿದ್ದ ವೇಳೆ ಧಾರ್ಮಿಕ ಹಾಗೂ ಲೌಕಿಕ ಸಮನ್ವಯ ಶಿಕ್ಷಣ ಪರಿಕಲ್ಪನೆ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಮಾಡಿದ್ದಾರೆ ಉಸ್ತಾದರು. ಮಾಣಿ ಹಾಗೂ ಮಿತ್ತೂರು ಪ್ರದೇಶದಲ್ಲಿ ತಲೆ ಎತ್ತಿ ನಿಂತಿರುವ ದಾರುಲ್ ಇರ್ಶಾದ್ ಸಮೂಹ ಸಂಸ್ಥೆಗಳೇ ಸಾಕ್ಷಿ. ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಝೈನುಲ್ ಉಲಮಾ ಮಾಣಿ ಉಸ್ತಾದರ ಸೇವೆ ಹಾಗೂ ಕೊಡುಗೆ ಅನನ್ಯವಾದುದು. ಆ ಮಹಾನ್ ನಾಯಕನ ಬದುಕಿನ‌ ಪುಟವನ್ನು ಓದೋಣ.


1945 ಮೇ ತಿಂಗಳ ಒಂದು ಶುಕ್ರವಾರದ ಸುಪ್ರಭಾತ ಸಮಯ, ತಾಯಿ ಪೆರುವಾಯಿ ಮುಹ್ಯುದ್ದೀನರ ಪುತ್ರಿ ಆಸಿಯಮ್ಮ ಬಂಟ್ವಾಳ ತಾಲೂಕಿನ ಬುಡೋಳಿ ಸಮೀಪದಲ್ಲಿ ಪಂಡಿತ ಶ್ರೇಷ್ಟರಿಗೆ ಜನ್ಮ ನೀಡಿದರು. ತಂದೆ ಪರ್ತಿಪ್ಪಾಡಿ ಅಬ್ದುಲ್ಲಾ ವಿದ್ವಾಂಸನಲ್ಲದಿದ್ದರೂ ಮುತ‌ಅಲ್ಲಿಮರನ್ನು ಪ್ರೀತಿಸುವ ಸಾಮಾನ್ಯ ವ್ಯಕ್ತಿ. ಮನೆಯಲ್ಲಿ ತಿಂಗಳಿಗೊಮ್ಮೆ ಮಾಲೆ ಮಜ್ಲಿಸ್‌ಗಳನ್ನು ಏರ್ಪಡಿಸುತ್ತಿದ್ದರು. ರಮಳಾನ್, ರಬೀಉಲ್ ಅವ್ವಲ್‌ ಸೇರಿದ ಪವಿತ್ರ ತಿಂಗಳಲ್ಲಿ ಬೃಹತ್ ಮೌಲಿದ್ ಕಾರ್ಯಕ್ರಮ ನಡೆಸುತ್ತಿದ್ದದ್ದು ಮಗುವಿಗೆ ಆಧ್ಯಾತ್ಮಿಕತೆಯ ಕಡೆಗೆ ಒಲವು ತೋರಿಸಿತು.


ಹೆತ್ತವರಿಗೆ ಹೆಚ್ಚಿನ ಶಿಕ್ಷಣವಿರಲಿಲ್ಲ. ಆದರೂ ವಿದ್ವಾಂಸರೊಂದಿಗೆ ವಿಶೇಷ ಕಾಳಜಿಯಿತ್ತು. ಅಂದಿನ ಖ್ಯಾತ ವಿದ್ವಾಂಸ ಸಯ್ಯಿದ್ ಪೂಕುಂಞಿ ತಂಙಳ್ ಮಗುವಿಗೆ 'ಅಬ್ದುಲ್ ಹಮೀದ್' ಎಂದು ಹೆಸರಿಡಲು ಸೂಚಿಸಿ ವಿದ್ವಾಂಸನಾಗಿ ಬೆಳೆಸುವಂತೆ ಸಲಹೆ ನೀಡಿದರು. ಮಹಾನುಭಾವರ ಮಾತಿನ ಅನ್ವರ್ಥವೆಂಬಂತೆ ಇಂದು ಶೈಖುನಾ ನಮ್ಮ ಮುಂದೆ ಜ್ವಲಿಸಿ ನಿಂತಿದ್ದಾರೆ.


ಶೈಖುನಾರಿಗೆ ವಿದ್ಯಾರ್ಥಿ ಜೀವನದಲ್ಲಿ ಆರ್ಥಿಕತೆ ಪ್ರಮುಖ ಸಮಸ್ಯೆಯಾಗಿತ್ತು. ಮನೆಯಲ್ಲಿ ಪರಿಸ್ಥಿತಿ ಸ್ವಲ್ಪ ಜಟಿಲವಾಗಿತ್ತು. ಪ್ರತೀ ಶುಕ್ರವಾರ ಮತ ಪ್ರವಚನಕ್ಕೆ ಹೋಗಿ ಸಿಕ್ಕಿದ ಪುಡಿಗಾಸಿನಿಂದ ಅಗತ್ಯ ಗ್ರಂಥಗಳನ್ನು ಖರೀದಿಸುತ್ತಿದ್ದರು. ಊರಿಗೆ ಬಂದರೆ ಹಿಂದಿರುಗಲು ಹಣವಿರುತ್ತಿರಲಿಲ್ಲ.! ಆಗ ತಾಯಿ ತನ್ನ ಬೆಳ್ಳಿಯ ಸೊಂಟಪಟ್ಟಿಯನ್ನು ಹಿಂದೂ ಸಹೋದರನ ಮನೆಯಲ್ಲಿ ಅಡವಿಟ್ಟು ಉಸ್ತಾದರಿಗೆ ಹಣ ಪೂರೈಸುತ್ತಿದ್ದರು. ಹೀಗೆ ಹಲವು ಬಾರಿ ಅಡವಿಟ್ಟ ಚರಿತ್ರೆಯಿದೆ. ನಂತರ ಅದನ್ನು ತಂದೆ ಕೂಲಿ ಕೆಲಸದಿಂದ ತೀರಿಸುತ್ತಿದ್ದರು. ಇದು ಉಸ್ತಾದರ ಕಲಿಕೆಗಲ್ಲದೆ ಇನ್ನಾವುದಕ್ಕೂ ಅಡವಿಡಲಿಲ್ಲ ಎನ್ನುವುದು ಗಮನಾರ್ಹ ಸಂಗತಿ.


ದರ್ಸ್ ಜೀವನ

ಹುಟ್ಟೂರು ಬುಡೋಳಿಯಿಂದ ಮಾಣಿ ಸಮೀಪದ ಹಳೀರಕ್ಕೆ ಕುಟುಂಬ ವರ್ಗಾವಣೆಗೊಂಡವು. ಅಂದು ಶೈಖುನಾ ಆರು ತಿಂಗಳ ಪುಟ್ಟ ಮಗು. ಉತ್ತಮ ವಾತಾವರಣದಲ್ಲಿ ತಾಯಿ ಮಗನನ್ನು ಬೆಳೆಸುತ್ತಾರೆ. ಬಳಿಕ ಮಾಣಿ ಸರ್ಕಾರಿ ಶಾಲೆಗೆ ಸೇರಿದರು. ಮಾಣಿಯ ಆಜು ಬಾಜಿನಲ್ಲಿ ಮದ್ರಸಾ ಇರಲಿಲ್ಲ. ಶಾಲಾ ರಜಾ ದಿನಗಳಲ್ಲಿ ಸೂರಿಕುಮೇರು ಮಸೀದಿಯ ಅಧ್ಯಾಪಕರಾಗಿದ್ದ ಬೋಳಂತೂರು ಅಬ್ದುಲ್ಲಾ ಮುಸ್ಲಿಯಾರರ ಬಳಿ ಕಲಿಯುತ್ತಿದ್ದರು. ಧಾರ್ಮಿಕ ವಿದ್ಯಾಭ್ಯಾಸದಲ್ಲಿ ತುಂಬು ಉತ್ಸಾಹ ಮನಗಂಡ ಶಿಷ್ಯನನ್ನು ಏಳನೇ ತರಗತಿಯ ಬಳಿಕ ಮನೆಯಿಂದ ಆರೇಳು ಕಿಲೋಮೀಟರ್ ದೂರವಿರುವ ಮಿತ್ತೂರಿನ ಹಳೇ ಜುಮಾ ಮಸೀದಿಯ ಅಧೀನದಲ್ಲಿದ್ದ 'ನೂರುಲ್ ಇಸ್ಲಾಂ' ಮದ್ರಸಾಗೆ ಸೇರಿಸಿದರು.


ಅಂದು 'ಅಬ್ಬು ಮುಕ್ರಿಕ' ಎಂಬ ನಾಮದಿಂದ ಅರಿಯಲ್ಪಟ್ಟ ಮರ್ಹೂಂ ಕೋಯಮ್ಮ ಹಾಜಿ ಪ್ರಧಾನ ಗುರು. ನೂರುಲ್ ಇಸ್ಲಾಮಿನಲ್ಲಿ ಎರಡು ವರ್ಷ ಪಠಣ ಪೂರ್ತಿಗೊಳಿಸಿದಾಗ ಅಲ್ಲಿ 'ಅಶ್‌ರತುಲ್ ಕಿತಾಬ್ (ಪತ್ತ್ ಕಿತಾಬ್)' ಸಂಪೂರ್ಣವಾಗಿ ಪಠಿಸಿದರು.


ಸಿ.ಪಿ. ಉಸ್ತಾದರ ಬಳಿ

ಮಿತ್ತೂರಿನಲ್ಲಿ ಪಠಣ ಪೂರ್ಣಗೊಂಡ ಬಳಿಕ ಜ್ಞಾನದ ಜಿಜ್ಞಾಸೆ ತೀರಿಸಲೋಸ್ಕರ ಮಂಜನಾಡಿ ಸಿ.ಪಿ ಮುಹಮ್ಮದ್ ಕುಂಞಿ (ಸಿ.ಪಿ ಉಸ್ತಾದ್) ಯ ಬಳಿಗೆ ತೆರಳುತ್ತಾರೆ. ಅಂದು ಶೈಖುನಾ ಹದಿನಾರು ವಯಸ್ಸಿನ ಬಾಲಕ. ಭಾರೀ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದರು. ಮೂರು ಹೊತ್ತು ಊಟ ಮಾಡಲು ಪ್ರತ್ಯೇಕ ಮೂರು ಮನೆಗೆ ಹೋಗಬೇಕಿತ್ತು. ಸರಿಸುಮಾರು ದಿನಂಪ್ರತಿ ಐದಾರು ಕಿಲೋಮೀಟರ್ ನಡೆದಾಡುತ್ತಿದ್ದರು. ಅದಲ್ಲದೆ ಕೈಯಲ್ಲಿ ಕಾಸೂ ಇಲ್ಲ, ಟಾರ್ಚೂ ಇಲ್ಲ. ಸ್ನೇಹಿತನ ಟಾರ್ಚ್ ಬೆಳಕಿನಿಂದ ರಾತ್ರಿ ಹೊತ್ತಿನ ಊಟಕ್ಕಾಗಿ ಹೋಗುತ್ತಿದ್ದದ್ದು ಉಸ್ತಾದರು ಇಂದೂ ಸ್ಮರಿಸುತ್ತಾರೆ. ಇನ್ನು ನಿದ್ದೆ ಮಾಡಲೋ ತಲೆದಿಂಬು, ಹಾಸಿಗೆಯಿಲ್ಲ. ಹರುಕು ಮುರುಕಾದ ಚಾಪೆಯಲ್ಲೇ ಐದು ವರ್ಷದ ಜೀವನ.


ಸಿ.ಪಿ ಉಸ್ತಾದರ 'ಬಸ್ತಾನುಲ್ ಊಲುಂ' ದರ್ಸಿಗೆ ಸೇರಿದ ಉಸ್ತಾದರ ಜ್ಞಾನದಾಹ ನಿಲ್ಲದೆ, ವರ್ಧಿಸಿದವು. ಇದು ಶೈಖುನಾರ ಜೀವನದಲ್ಲಿ ಹೊಸ ತಿರುವು ಪಡೆದವು. ಅಲ್ಫಿಯಾ, ಫತ್‌ಹುಲ್ ಮುಈನ್ ಹಾಗೂ ಅರಬೀ ವ್ಯಾಕರಣ ಸೇರಿದಂತೆ ಹಲವು ಗ್ರಂಥಗಳನ್ನು ಸಿ‌.ಪಿ. ಉಸ್ತಾದರ ಬಳಿ ಅಭ್ಯಸಿಸಿದರು. ಕಾಕತಾಳೀಯವಾಗಿ ಪಿತೃ ವಿಯೋಗದಿಂದ ಮಂಜನಾಡಿಯ ಐದು ವರ್ಷದ ಜ್ಞಾನ ಪಯಣಕ್ಕೆ ತೆರೆ ಬಿದ್ದವು. ದರ್ಸ್ ಮೊಟಕುಗೊಳಿಸಬೇಕಾದ ಅನಿವಾರ್ಯತೆ ಎದುರಾದವು. ಕುಟುಂಬದ ಹೊರೆ ಬಿದ್ದ ಪರಿಣಾಮವಾಗಿ ಮಂಜನಾಡಿಯಲ್ಲಿ ದರ್ಸ್ ಬಿಡಬೇಕಾಯಿತು. ಆದರೂ ಜ್ಞಾನದಾಹ ನೀಗಲಿಲ್ಲ!


ಸಜಿಪ ಉಸ್ತಾದರ ಬಳಿ

ಮನೆಗೆ ಆಗಾಗ್ಗೆ ಬರಬೇಕಾದುದರಿಂದಲೂ ಶೈಖುನಾರ ತಮ್ಮನ ಆರೋಗ್ಯವೂ ಸರಿಯಿರಲಿಲ್ಲ ಇದಕ್ಕಾಗಿ ತನ್ನ ಉಸ್ತಾದರೊಂದಿಗೆ ಸಮ್ಮತಿ ಕೇಳಿ, ಮಂಜನಾಡಿಯಲ್ಲಿ ದರ್ಸ್ ತ್ಯಜಿಸಿದರು. ಹತ್ತಿರದಲ್ಲಿ ಅನ್ವೇಷಿಸಿದಾಗ ಸಜಿಪದಲ್ಲಿ ದರ್ಸ್ ನಡೆಯುತ್ತಿದೆ ಎನ್ನುವಾಗ ಅಲ್ಲಿ ಸೇರಿದರು. ಅಂದು ಸೂಫಿವರ್ಯರಾಗಿದ್ದ ಚೆರ್ವತ್ತೂರು ಅಬ್ದುಲ್ಲಾ ಮುಸ್ಲಿಯಾರ್ (ಸಜಿಪ ಉಸ್ತಾದ್) ಅಲ್ಲಿನ ಮುದರ್ರಿಸ್. ಇದಕ್ಕೂ ಮುನ್ನ ಮಂಜನಾಡಿಯಲ್ಲಿ ಕಲಿಯುತ್ತಿದ್ದಾಗ ಸಜಿಪ ಉಸ್ತಾದರ ಭೇಟಿಯಿಂದ ಆಕರ್ಷಿತರಾಗಿದ್ದರು. ಅಲ್ಲಿ ಸಿ.ಪಿ ಉಸ್ತಾದರಿಗೆ ಪತ್ರ ಬರೆದು ತನ್ನ ಇಂಗಿತ ಹೇಳಿದಾಗ ಅವರು 'ಹ್ಹೋ ಅಬ್ದುಲ್ಲಾರ ದರ್ಸಿನಲ್ಲೋ..!' ಎಂದು ಹೇಳಿದರು. ಸಜಿಪದಲ್ಲಿ ಒಂದು ವರ್ಷ ಅಧ್ಯಯನ ಮಾಡುತ್ತಾರೆ.


'ಎಷ್ಟೇ ಕಷ್ಟಗಳಿದ್ದರೂ ತರಗತಿಗೆ ವಿರಾಮ ಹಾಕಲಿಲ್ಲ. ಅಲ್ಲಾಹನನ್ನು ತುಂಬಾ ಭಯಪಡುತ್ತಿದ್ದರು. ತಫ್ಸೀರ್ (ಖುರ್‌ಆನ್ ವ್ಯಾಖ್ಯಾನ ಶಾಸ್ತ್ರ) ಓದಿಸುವಾಗ ಭಯಭಕ್ತಿಯಿಂದ ಇದ್ದು, ಶಿಕ್ಷೆಯ ಸೂಕ್ತಗಳು ಬಂದರೆ ಹೆದರಿ ಕಣ್ಣೀರಿಳಿಸುತ್ತಿದ್ದರು. ಹಲವಾರು ಸಮಯದಲ್ಲಿ ಕಣ್ಣೀರಿಳಿಸಿ ನಿಯಂತ್ರಣ ತಪ್ಪಿ ಹೋಗುತ್ತಿದ್ದವು. ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಗಾಢ ಸ್ನೇಹ ಬೆಳೆಸಿದ್ದರು. ಹದೀಸ್ ಹೇಳಿಕೊಡುವ ಸಮಯದಲ್ಲಿ ಹಬೀಬರಿಗೆ ಯಾವುದಾದರೆ ಸಂಕಷ್ಟ ಬಂದೆರಗುವ ಘಟನೆ ಬಂದರೆ ಕಣ್ಣೀರಲ್ಲಿ ಮುಳುಗುತ್ತಿದ್ದರು..' ಎಂದು ಸಜಿಪ ಉಸ್ತಾದರ ಬಗೆಗೆ ಶೈಖುನಾ ಹೇಳುತ್ತಾರೆ. ಮಿಶ್ಕಾತುಲ್ ಮಸ್ವಾಬೀಹ್, ಜಲಾಲೈನಿ ಸೇರಿದ ಗ್ರಂಥಗಳನ್ನು ಸಜಿಪ ಉಸ್ತಾದರ ಬಳಿ ಅಭ್ಯಸಿಸಿದರು.


ಕೋಟ ಉಸ್ತಾದರ ಬಳಿ

ಇಂಗ್ಲಿಷ್, ಪಾರ್ಸಿ ಭಾಷೆ ಬಲ್ಲ ಮಂಗಳೂರು ಖಾಝಿ ಕೋಟ ಅಬ್ದುಲ್ ಖಾದಿರ್ ಮುಸ್ಲಿಯಾರರ ಬಳಿ ಮುಂದೆ ದರ್ಸ್ ಮುಂದುವರೆಸಿದರು. ಕೋಟ ಉಸ್ತಾದರ ಬಳಿ ಮುಖ್ತಸರ್, ಶರಹುತ್ತಹ್ಝೀಬ್, ಮಹಲ್ಲಿಯಂತಹ ಬೃಹತ್ ಗ್ರಂಥಗಳನ್ನು ಓದಿ ಕಲಿತರು. ಯ ನಿರಂತರ ಎರಡು ವರ್ಷದ ಕಲಿಕೆಯ ನಂತರ ಉಳ್ಳಾಲಕ್ಕೆ ಬಂದರು.


ತಾಜುಲ್ ಉಲಮಾರ ಬಳಿ

ಅಂದು ಕರಾವಳಿ ಭಾಗದ ಉಳ್ಳಾಲದಲ್ಲಿ ತಾಜುಲ್ ಉಲಮಾ ಉಳ್ಳಾಲ ತಂಙಳರ ನೇತೃತ್ವದ ಪ್ರಖ್ಯಾತ ದರ್ಸ್‌ಗೆ ಉಸ್ತಾದ್ ಸೇರ್ಪಡೆಯಾಗುತ್ತಾರೆ. ಕಂಝುಲ್ ಊಲೂಂ ಎಂಬ ಹೆಸರಿನಲ್ಲಿ ಸುಪ್ರಸಿದ್ಧಗೊಂಡ ದರ್ಸ್, ಕಾಲೇಜಾಗಿ ವಿಸ್ತರಿಸರಲಿಲ್ಲ. ಮೂರು ವರ್ಷಗಳ ಅಧ್ಯಯನ ಮಾಡಿದ ಉಸ್ತಾದರು ತಾಜುಲ್ ಉಲಮಾರ ಬಳಿ ಬೈಳಾವಿ, ಜಂಉಲ್ ಜವಾಮೀಅ್, ಮುಲ್ಲಾ ಹಸನ್ ಮುಂತಾದಂತಹ ಬೃಹತ್ ಗ್ರಂಥಗಳನ್ನು ಅಭ್ಯಸಿಸಿದರು.


ವಿದ್ಯಾರ್ಥಿಯಾಗಿಯೂ ಖತೀಬ್ ಆಗಿಯೂ

ಶುಕ್ರವಾರ ಪ್ರವಚನದಿಂದ ಸಿಗುತ್ತಿದ್ದ ಒಂದು ರುಪಾಯಿ ಒಂದು ವಾರದ ಖರ್ಚಿಗೆ ಬರುತ್ತಿತ್ತು. ಕೆಲವೊಮ್ಮೆ ಹಣ ಸಿಗುತ್ತಿರಲಿಲ್ಲ. ಶೈಖುನಾ ಉಳ್ಳಾಲದಲ್ಲಿ ಕಲಿಯುತ್ತಿದ್ದ ಸಮಯದಲ್ಲೇ ಮನೆ ಬೀಳುವಷ್ಟರ ಮಟ್ಟಿಗೆ ತಲುಪಿದ್ದವು. ದುಡಿಯಲು ಜನವಿಲ್ಲ. ಕೊನೆಗೆ ಬಜಾಲ್ ಎಂಬಲ್ಲಿ ಖತೀಬ್ ಆಗಿ ನಿಲ್ಲುವೆ ಎಂದಾಗ ತಾಜುಲ್ ಉಲಮಾ ಸಮ್ಮತಿ ಸೂಚಿಸಿದರು. ಹಾಗೆಯೇ ವಿದ್ಯಾರ್ಥಿಯಾಗಿದ್ದುಕೊಂಡೇ ಅಲ್ಲಿ ಖತೀಬ್ ಹುದ್ದೆ ವಹಿಸಿಕೊಂಡರು. ಶೈಖುನಾರ ನಡೆ ನುಡಿ ಜನರ ಮನ ಸೂರೆಯಾದವು. ಶೈಖುನಾ ವಿಷಯ ಪ್ರಸ್ತಾಪಿಸಿದಾಗ ಖುದ್ದಾಗಿ ನಾಡಿನ ಜನತೆ ಬಂದು ಉಸ್ತಾದರ ಮನೆ ಗಟ್ಟಿಗೊಳಿಸಿದರು. ಗಮನಾರ್ಹವೆಂದರೆ ಇದಕ್ಕೆ ಪಕ್ಕಾಸು ನೀಡಿದ್ದು ಮಾತ್ರ ಹಿಂದೂ ಸಹೋದರ. ಅಷ್ಟೊಂದು ಜನತೆಯ ನಡುವೆ ಶೈಖುನಾ ಹಾಸು ಹೊಕ್ಕಾಗಿದ್ದರು ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ.


ಉಳ್ಳಾಲದಲ್ಲಿ ಕಲಿಕೆ ಪೂರ್ತಿಗೊಳಿಸಿ ತಾಜುಲ್ ಉಲಮಾರ ನಿರ್ದೇಶನದ ಮೇರೆಗೆ ಉತ್ತರ ಪ್ರದೇಶದ ದಯೂಬಂದಿನ 'ದಾರುಲ್ ಊಲುಂ' ದರ್ಸಿಗೆ 1969 ರಲ್ಲಿ ಸೇರಿದರು. ಎಪ್ಪತ್ತರಲ್ಲಿ 'ಅಲ್-ಖಾಸಿಮೀ' ಎಂಬ ಪದವೀಧರರಾಗಿ ಹೊರ ಬರುತ್ತಾರೆ.


ಅಧ್ಯಾಪನೆ ವೃತ್ತಿ


ಸೂರಿಂಜೆಯಲ್ಲಿ ಪ್ರಥಮ ದರ್ಸ್

ಬಿರುದುದಾರಿಯಾದ ಶೈಖುನಾ ಉಸ್ತಾದರು ಮಂಗಳೂರು ಸಮೀಪದ ಸೂರಿಂಜೆ ಎಂಬ ಸ್ಥಳವನ್ನು ಆರಿಸಿ ದರ್ಸ್ ಆರಂಭಿಸಲು ತೀರ್ಮಾನಿಸಿದರು. ಉಸ್ತಾದರು ಅಂದಿನ ಓತುಪ್ಪಳ್ಳಿ ವ್ಯವಸ್ಥೆಯನ್ನು ಸುಧಾರಿಸಿ ದರ್ಸ್ ಎಂಬ ಚಿಂತನೆ ಪರಿಚಯಿಸಿಕೊಟ್ಟರು. ತನ್ನ ಸ್ವಂತ ಖರ್ಚಿನಿಂದ ಊರವರನ್ನು ಸೇರಿಸಿ ಸಜಿಪ ಉಸ್ತಾದರಿಂದ ಎರಡು ದಿನ, ಆಲಿಕುಂಞಿ ಉಸ್ತಾದರಿಂದ ಒಂದು ದಿನದ ದರ್ಸಿನ ಮಹತ್ವವನ್ನು ತಿಳಿಯಪಡಿಸುವ ವ‌ಅಳನ್ನು (ದೀರ್ಘ ಭಾಷಣ) ಏರ್ಪಡಿಸಿದರು.


ಅಂದಹಾಗೆ ಸೂರಿಂಜೆ ಎಂಬ ಸ್ಥಳದಲ್ಲಿ ಮೂವತ್ತು ಮುತ‌ಅಲ್ಲಿಮರನ್ನು ಸೇರಿಸಿ ದರ್ಸ್ ಜೀವನಕ್ಕೆ ಮುಹೂರ್ತವಿಟ್ಟರು. ಶೈಖುನಾ ತಾಜುಲ್ ಉಲಮಾ ದರ್ಸ್ ಉದ್ಘಾಟಿಸಿ, ಪ್ರಾರ್ಥಿಸಿ ಕೊಟ್ಟರು. ಅಂದು ಆರಂಭಿಸಿದ ದರ್ಸ್ ಇಂದು ಕೂಡಾ ಬಿಡುವಿಲ್ಲದೆ ಉಸ್ತಾದರು ಮುಂದುವರಿಸುತ್ತಿದ್ದಾರೆ.


ಆಲಡ್ಕದಲ್ಲಿ

ಶೈಖುನಾ ಉಸ್ತಾದರು ಸೂರಿಂಜೆಯಲ್ಲಿ ಎರಡು ವರ್ಷವಾಗುವ ವೇಳೆ ತಾಯಿಯ ಆರೋಗ್ಯ ಹದೆಗೆಟ್ಟಿತು. ತಾಯಿಯ ಆರೈಕೆ ಮಾಡಬೇಕಾದ್ದರಿಂದ ಮನೆ ಸಮೀಪದಲ್ಲೇ ದರ್ಸ್ ಆರಂಭಿಸುವ ತೀರ್ಮಾನಕ್ಕೆ ಬರುತ್ತಾರೆ. ಪರಿಣಾಮವಾಗಿ ಅಲ್ಲಿಂದ ಬಿಡಬೇಕಾದ ಪರಿಸ್ಥಿತಿ ಎದುರಾದವು. ಅಲ್ಲಿ ಬೇಕಲ್ ಉಸ್ತಾದರನ್ನು ನೇಮಿಸಿ ಮನೆ ಸಮೀಪದ ಪಾಣೆಮಂಗಳೂರಿನ ಆಲಡ್ಕ ಮಸೀದಿಯಲ್ಲಿ ದರ್ಸ್ ನಡೆಸಿದರು. ಇಲ್ಲಿ ಎರಡು ವರ್ಷಗಳ ಕಾಲ ದರ್ಸ್ ನಡೆಸಿದರು.


ಮಚ್ಚಂಪಾಡಿಯಲ್ಲಿ

ಶೈಖುನಾ ಉಸ್ತಾದರು ಕೆಲವು‌ ಕಾರಣಾಂತರಗಳಿಂದ ಪಾಣೆಮಂಗಳೂರಿನಿಂದ ಬಿಟ್ಟು ಕಾಸರಗೋಡು ಜಿಲ್ಲೆಯ ಮಚ್ಚಂಪಾಡಿಗೆ ತೆರಳಿದರು. ಅಲ್ಲಿಯೂ ಶೈಖುನಾ ತಾಜುಲ್ ಉಲಮಾ ದರ್ಸ್ ಉದ್ಘಾಟಿಸಿದರು. ದೀರ್ಘ ಕಾಲು ಶತಮಾನಗಳ ಕಾಲ ಮಚ್ಚಂಪಾಡಿಯಲ್ಲೇ ಅಧ್ಯಾಪನೆ ನಡೆಸಿ ಊರ ಜನತೆಯ ಪ್ರೀತಿಗೆ ಪಾತ್ರರಾದ ಉಸ್ತಾದರು 'ಮಚ್ಚಂಪಾಡಿ ಉಸ್ತಾದ್' ಎಂದು ಸುಪರಿಚಿತರಾದರು.


ಉಸ್ತಾದರು ಮಚ್ಚಂಪಾಡಿಯಿಂದ ಶುಕ್ರವಾರ ಜುಮುಆದ ಬಳಿಕ ಮನೆಗೆ ಬಂದರೆ ಮರುದಿನ ಬೆಳಿಗ್ಗಿನ ದರ್ಸ್‌ಗೆ ತಲುಪುತ್ತಿದ್ದರು. ಹೊಸಂಗಡಿಯಿಂದ ಮಚ್ಚಂಪಾಡಿಗೆ ಮೂರು ಕಿಲೋಮೀಟರ್ ನಡೆದುಕೊಂಡು ಒಬ್ಬರೇ ಹೋಗಿ ಬರುತ್ತಿದ್ದರು. ಯಾರೊಬ್ಬರ ಸಹಾಯವನ್ನು ಉಸ್ತಾದರು ಆಶ್ರಯಿಸಿರಲಿಲ್ಲ.



'ದಾರುಲ್ ಇರ್ಶಾದ್'ಗೆ ಅಡಿಗಲ್ಲು

ಸಮೀಪದ ಕೇರಳದಲ್ಲಿ ಬಹುಮುಖ ವಿದ್ಯಾಕೇಂದ್ರಗಳು ತಲೆಯೆತ್ತಿ ಹಲವು ದಶಕಗಳೇ ಕಳೆದರೂ ಕರ್ನಾಟಕದಲ್ಲಿ ಮಾತ್ರ ಮದ್ರಸಾ ಹಾಗೂ ಪಳ್ಳಿದರ್ಸ್‌ಗೆ ಸೀಮಿತವಾಗಿದ್ದವು. ಗಣನೀಯವಾಗಿ ಹೆಚ್ಚುತ್ತಿರುವ ಲೌಕಿಕ ವ್ಯಾಮೋಹದಿಂದ ಸಾಕಷ್ಟು ವಿದ್ಯಾರ್ಥಿಗಳು ಶಾಲಾ - ಕಾಲೇಜುಗಳನ್ನು ನೆಚ್ಚಿಕೊಂಡು ಧಾರ್ಮಿಕ ವಿದ್ಯಾಭ್ಯಾಸಕ್ಕೆ ಹಿಂದೇಟು ಹಾಕುತ್ತಿದ್ದರು. ಇನ್ನೊಂದೆಡೆ ಧಾರ್ಮಿಕ ಶಿಕ್ಷಣಕ್ಕೆ ಮಾತ್ರ ಒಲವು ತೋರಿ ಲೌಕಿಕ ಜ್ಞಾನ ತೀರಾ ಇಲ್ಲದೆ ನಿರ್ಲಕ್ಷ್ಯಕ್ಕೊಳಗಾಗುವ ಅಪಾಯವಿತ್ತು. ಮತ್ತೊಂದೆಡೆ ಶಿಕ್ಷಣವೂ ಇಲ್ಲದೆ, ಸೂಕ್ತ ಪೋಷಣೆಯೂ ಸಿಗದೆ ಹಲವು ಮುಗ್ಧರು ಬೀದಿ ಸಂಸ್ಕೃತಿಗೆ ಪಾಲಾಗುತ್ತಿದ್ದರು. ಇದೆಲ್ಲವನ್ನೂ ಮನಗಂಡು 1991 ಮಾರ್ಚ್ 11 ಆದಿತ್ಯವಾರ ತನ್ನ ಮನೆಯಲ್ಲಿ ನಡೆಸಿಕೊಂಡು ಬರುತ್ತಿದ್ದ 'ಜಲಾಲಿಯ್ಯ ರಾತೀಬ್' ಎಂಬ ಆಧ್ಯಾತ್ಮಿಕ ಮಜ್ಲಿಸ್‌ನಲ್ಲಿ ದಾರುಲ್ ಇರ್ಷಾದ್‌ಗೆ ಹೊಸ ರೂಪು ನೀಡಿ, ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆಯಲಾಯಿತು.


ಇನ್ನು ಮಾತಿನಲ್ಲೇ ದಾರುಲ್ ಇರ್ಶಾದಿನ ಹುಟ್ಟಿನ ಮಾಹಿತಿಯನ್ನು ಕೇಳೋಣ..

'ದಾರುಲ್ ಇರ್ಶಾದ್ ಸಮಾಜದ ಆಸ್ತಿಯೇ ಹೊರತು ನನ್ನದೋ ಅಥವಾ ನನ್ನ ಮಕ್ಕಳದಲ್ಲ. ಶಿಷ್ಯ ಸಂಘಟನೆ ‘ಜಂಇಯ್ಯತ್ತುಲ್ ಇರ್ಶಾದಿಯಾ’ದ ಸಭೆಯೊಂದು ವರ್ಷಂಪ್ರತಿ ನನ್ನ ಮನೆಯಲ್ಲಿ ಶಿಷ್ಯರೆಲ್ಲರನ್ನು ಒಟ್ಟುಗೂಡಿಸಿ ಮಾಡುವ ಜಲಾಲಿಯ್ಯ ರಾತೀಬಿನ ಬಳಿಕ ನಡೆಯುತ್ತಿತ್ತು. ಕಾಕತಾಳೀಯವೆಂಬಂತೆ ನನ್ನ ಬಳಿಯಿದ್ದ ಗ್ರಂಥಗಳನ್ನೆಲ್ಲಾ ಸಂಗ್ರಹಿಸಿ ಗ್ರಂಥಾಲಯ ಮಾಡುವ ಯೋಜನೆಯ ಮುಂದಿಟ್ಟರು. ಎಲ್ಲರೂ ಅಂಗೀಕರಿಸಿ, ಒಂದು ರಶೀದಿ ತಯಾರಿಸಿ ಅಜ್ಮೀರ್ ಖಾಜಾರ ಸನ್ನಿಧಿಗೆ ತೆರಳಿದೆವು. ಸರ್ವ ಕಾರ್ಯವೂ ಖಾಜಾರ ದರ್ಬಾರಿನಲ್ಲಿಯೇ ನಡೆಯಲಿ ಎಂಬುದು ನನ್ನ ಮಹದಾಸೆ. ಖಾಜಾರ ಸನ್ನಿಧಿಯಲ್ಲಿ ಓರ್ವ ಹಿತೈಷಿಯ ಭೇಟಿಯಾಯಿತು, ಆತ ಖತ್ತರಿಗೆ ಹೋಗವ ಪ್ರವಾಸಿ. ವಿಷಯ ತಿಳಿಸಿ, ನಮ್ಮ ಸಂಸ್ಥೆಯ ಪ್ರಥಮ ಹಣ ತಾವು ನೀಡಬೇಕು ಎಂದೆ. ‘ನನ್ನ ಬಳಿ ಯಾವ ಹಣವೂ ಇಲ್ಲ ₹50 ಮಾತ್ರ ಇರುವುದು ಎಂದು ಹೇಳಿ ರಶೀದಿ ಪಡೆದುಕೊಂಡರು. ನಿಮಗೆ ಹಣ ಸಿಗಬಹುದು, ಇದು ಬರ್ಕತಿನ ಹಣ ಕೂಡಾ ಅಂದರು. ಖಾಜಾರ ಬಳಿ ಎಲ್ಲವನ್ನೂ ಹೇಳಿ ಮುಂಬೈಗೆ ಬಂದೆ. ಅಲ್ಲಿ ಸುಮಾರು ಐವತ್ತು ಸಾವಿರದಷ್ಟು ಹಣ ಕ್ರೋಢೀಕರಿಸಲು ಸಾಧ್ಯವಾಯಿತು..' ಎಂದು ಶೈಖುನಾ ನೆನಪಿನ ಬುತ್ತಿಯನ್ನು ಬಿಚ್ಚುತ್ತಾರೆ.



ಶೈಖುನಾ ಮಚ್ಚಂಪಾಡಿಯಲ್ಲಿರುವ ಸಮಯ. ಅಂದು ವಿದ್ಯಾರ್ಥಿಗಳು ರಜಾ ಸಮಯಗಳಲ್ಲಿ ಮಚ್ಚಂಪಾಡಿಯಿಂದ ಬಂದು ಶೈಖುನಾರ ಮನೆ ಬಳಿಯಿರುವ ಆಳೆತ್ತರದ ಗುಡ್ಡೆಯನ್ನು ಜೆಸಿಬಿಯ ಸಹಾಯವಿಲ್ಲದೆ ನೆಲಸಮ ಗೊಳಿಸಿ ಸಂಸ್ಥೆ ಸ್ಥಾಪಿಸಲು ಮುಹೂರ್ತವಿಟ್ಟರು. ಇದಕ್ಕೆ ಶೈಖುನಾರೇ ಸಾಕ್ಷಿ. ಹಲವು ಸಮಯಗಳಲ್ಲಿ ಶೈಖುನಾ ಇದನ್ನು ಸ್ಮರಿಸುವುದಿದೆ. ನಮ್ಮ ಮನೋದಾರ್ಢ್ಯವು ಎಂತಹಾ ಪರ್ವತವನ್ನು ಪುಡಿ ಮಾಡಲು ಸಾಧ್ಯವಿದೆ ಎನ್ನುದಕ್ಕೆ ಇದು ಸ್ಪಷ್ಟ ನಿದರ್ಶನ.


ಶೈಖುನಾರ ಶಿಷ್ಯ ಸಂಘಟನೆಯಾದ 'ಇರ್ಶಾದುತ್ತುಲಬಾ' ದ ಮೊದಲ ಪದ ಸೇರಿಸಿ ದಾರುಲ್ ಇರ್ಶಾದ್ ಎಂದು ನಾಮಕರಣ ಮಾಡಲಾಯಿತು. ಸಂಸ್ಥೆಯ ವರಮಾನವೆಂಬಂತೆ ತಿಂಗಳಿಗೆ ನೂರು ರುಪಾಯಿ ನೀಡುವ ಸದಸ್ಯತ್ವ ಅಭಿಯಾನಕ್ಕೆ ಶೈಖುನಾ ತಾಜುಲ್ ಉಲಮಾ ಚಾಲನೆ ನೀಡಿದರು. ಇದರ ಮೊದಲ ಸದಸ್ಯರು ಪೊಸೋಟ್ ತಂಙಳ್. ಮಹಾತ್ಮರ ಪಾದಸ್ಪರ್ಶದ ಅನುಗ್ರಹವೆಂಬಂತೆ ಬೆರಳೆಣಿಕೆಯಷ್ಟು ಮುತ‌ಅಲ್ಲಿಮರಿಂದ ಪ್ರಾರಂಭಗೊಂಡ ದಾರುಲ್ ಇರ್ಶಾದ್ ಇಂದು ಅನಂತವಾಗಿ ಬೆಳೆದದ್ದು ನಿಜಕ್ಕೂ ಅದ್ಭುತ..!


ಮುಈನಿ ಪದವಿ

ಶೈಖುನಾರಿಗೆ ಔಲಿಯಾಗಳೊಂದಿಗೆ ಸದಾ ಸಂಪರ್ಕವಿಟ್ಟುಕೊಂಡಿದ್ದರು. ಅದರಲ್ಲೂ ಸಾಣೂರು ಶಾಹುಲ್ ಹಮೀದ್, ಏರ್ವಾಡಿ ಶುಹಾದಾಗಳು ಹಾಗೂ ಅಜ್ಮೀರ್ ಖಾಜಾರೊಂದಿಗೆ ವಿಶೇಷ ನಂಟು. ಮಿತ್ತೂರಿನಲ್ಲಿ ಸ್ಥಾಪಿಸಲ್ಪಟ್ಟ ವಿದ್ಯಾಸಮುಚ್ಚಯಕ್ಕೆ 'ಖಾಜಾ ಗರೀಬ್ ನವಾಝ್‌ ದ‌ಅವಾ ಕಾಲೇಜ್' ಎಂದು ನಾಮಕರಣ ಮಾಡಿದ್ದಾರೆ. ಅದಲ್ಲದೆ ಬಿಡುವಿಲ್ಲದೆ ವರ್ಷಂಪ್ರತಿ ಅಜ್ಮೀರ್ ಮೌಲಿದ್ ಹಾಗೂ ಏರ್ವಾಡಿ ಶುಹದಾ ನೇರ್ಚೆ ನಡೆದುಕೊಂಡು ಬರುತ್ತಿರುವುದು ನಿಜಕ್ಕೂ ಅದ್ಭುತ. ಇನ್ನು ಖಾಜಾ ಮುಈನುದ್ದೀನ್ ಜಿಸ್ತೀ (ರ) ರ ಸ್ಮರಣಾರ್ಥವಾಗಿ ದಾರುಲ್ ಇರ್ಷಾದ್ ಅಧೀನದ ಮಿತ್ತೂರು ಕೆಜಿಎನ್ ದ‌ಅವಾ ಕಾಲೇಜಿನಲ್ಲಿ ಏಳು ವರ್ಷ ಅಧ್ಯಯನ ಪೂರ್ತಿ ಗೊಳಿಸಿದ ವಿದ್ಯಾರ್ಥಿಗಳಿಗೆ 'ಮುಈನಿ' ಪದವಿ ಪ್ರದಾನ ಮಾಡಲಾಗುತ್ತದೆ. ಆ ಮೂಲಕ ಪುಣ್ಯ ಪರಂಪರೆಯ ಕೊಂಡಿ ಇನ್ನಷ್ಟು ಗಟ್ಟಿಯಾಗುತ್ತದೆ.





ಸಮಯ ನಿಷ್ಠೆ

ಸಮಯವನ್ನು ನೀನು ಕೊಲ್ಲಬೇಕು, ಇಲ್ಲದಿದ್ದರೆ ನಿನ್ನನ್ನು ಕೊಲ್ಲುತ್ತದೆ ಎಂಬ ಮಾತನ್ನು ಅಕ್ಷರಶಃ ಪಾಲಿಸಿದವರು ಶೈಖುನಾ ಉಸ್ತಾದರು. ಯಾವುದೇ ಕಾರ್ಯಕ್ರಮಕ್ಕೂ ಹೋಗುವುದಾದರೆ ಒಂದೈದು ನಿಮಿಷ ಮುಂಚೆಯೇ ಹಾಜರಿರುತ್ತಾರೆ. ಸಮಯ ಪಾಲಿಸಬೇಕೆಂಬ ಮೌನ ಪಾಲಿಸಿಯೂ ಇದರಲ್ಲಿ ಅಡಗಿದೆ.


ಆತಿಥ್ಯ

ಇಸ್ಲಾಮಿನಲ್ಲಿ ಅತಿಥಿ ಸತ್ಕಾರಕ್ಕೆ ವಿಶೇಷ ಮಹತ್ವವಿದೆ. ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಪ್ರಮುಖ ಸುನ್ನತ್ತಾದ ಆತಿಥ್ಯಕ್ಕೆ ಅನ್ವರ್ಥವಾಗಿ ಬದುಕುವ ಮಹಾಭಾಗ್ಯ ಉಸ್ತಾದರಿಗೆ ಲಭಿಸಿದೆ. ಕಾಕತಾಳೀಯವಾಗಿ ಯಾರಾದರೂ ದಣಿದು ಬಂದು, ಮನೆಗೆ ಭೇಟಿ ನೀಡಿದರೆ ಸತ್ಕರಿಸದೆ ಹಿಂದಿರುಗಿಸುವ ಜಾಯಮಾನ ಉಸ್ತಾದರದ್ದಲ್ಲ. ವಿನಯದ ಪ್ರತೀಕವಾದ ಉಸ್ತಾದರನ್ನು ಭೇಟಿ ಮಾಡಿದರೆ ಹಸನ್ಮುಖಿಯಾಗಿ ಸ್ವೀಕರಿಸುವರು. ಯಾರನ್ನೂ ನೋಯಿಸದೆ ಎಲ್ಲರೊಂದಿಗೂ ತುಂಬು ಪ್ರೀತಿಯಿಂದ ಅತಿಥಿಗಳನ್ನು ಸತ್ಕರಿಸುವುದು ಉಸ್ತಾದರ ಶ್ರೇಯಸ್ಸಿನ ಹಿನ್ನೆಲೆಯೆನ್ನಬಹುದು.


ಆಧ್ಯಾತ್ಮಿಕ ರಂಗದಲ್ಲಿ ಮಹೋನ್ನತ ನಾಯಕರಾದ ತಾಜುಲ್ ಉಲಮಾ ಉಳ್ಳಾಲ ತಂಙಳ್, ಚೆರ್ವತ್ತೂರು ಅಬ್ದುಲ್ಲಾ ಮುಸ್ಲಿಯಾರ್, ಕಕ್ಕಡಿಪುರ ಅಬೂಬಕರ್ ಮುಸ್ಲಿಯಾರರಂತಹ ಸೂಫೀವರ್ಯರಿಂದ ಇಜಾಝತ್ ಪಡೆದುಕೊಂಡಿದ್ದಾರೆ. ಶೈಖುನಾ ದೇಶ ವಿದೇಶಗಳಲ್ಲಿ ಹಲವಾರು ಮಹಾನ್ ಔಲಿಯಾಗಳ ಝಿಯಾರತ್ ಮಾಡಿದ್ದಾರೆ. ಇದೇ ಉಸ್ತಾದರ ಔನ್ನತ್ಯಕ್ಕೆ ನಿಮಿತ್ತವಾದವು.


ದೈನಂದಿನ ದಿನಚರಿ

ಸುಪ್ರಭಾತದ ಮುಂಚೆಯೇ ಶೈಖುನಾರ ದಿನ ಆರಂಭಗೊಳ್ಳುತ್ತದೆ. ಸುಬ್‌ಹಿ ನಮಾಝಿನ ಬಳಿಕ ಎಲ್ಲಾ ಔಲಿಯಾ ಮಹಾನುಭಾವರ ಹೆಸರಿನಲ್ಲಿ ಯಾಸೀನ್ ಪಾರಾಯಣ. ಇನ್ನು ಅಸ್ಮಾಉಲ್ ಹುಸ್ನಾ, ವಿರ್ದುಲ್ಲತೀಫ್, ಹಿಝ್‌ಬುಲ್ ಬಹ್‌ರ್, ಹಿಝ್ಬುನ್ನಸ್‌ರ್, ದಲಾಇಲುಲ್ ಖೈರಾತ್ ಹಾಗೂ ಇನ್ನಿತಿರ ದ್ಸಿಕ್ರ್ ಔರಾದ್‌ಗಳು ಇದರ ಪಟ್ಟಿ ಉದ್ದವಿದೆ. ಮಧ್ಯಾಹ್ನ- ಸಂಜೆಯ ಕಾಲಾವಧಿಯಲ್ಲಿ ಬದ್ರ್ ಮಹಾತ್ಮರ ಸ್ಮರಣೆ. ಪ್ರತೀ ಐದು ವಕ್ತ್ ನಮಾಝಿನ ಬಳಿಕ ಒಂದದಿನೈದು ನಿಮಿಷ ದ್ಸಿಕ್ರ್. ಯಾವ ಕಡೆಯಲ್ಲೂ ಇರಲಿ, ಕಾರಲ್ಲಾದರೂ ಸರಿ. ಮಗ್ರಿಬ್ ನಮಾಝಿನ ಬಳಿಕ ಸಬ್‌ಉಲ್ ಮುಂಜಿಯಾತ್ ಎಂದು ಎನಿಸಿಕೊಂಡ ಸೂರತ್‌ಗಳ ಪಾರಾಯಣ. ಇಶಾ ನಮಾಝಿನ ಬಳಿಕ ಹದ್ದಾದ್ ಹಾಗೂ ವಿತ್ರ್ ನಮಾಝ್. ಮತ್ತೆ ತಹಜ್ಜುದ್. ದಿನವಿಡೀ ದ್ಸಿಕ್ರ್ ಹೇಳುವುದು ಇದು ಬಿಟ್ಟರೆ ಗ್ರಂಥ ಅಧ್ಯಯನ ಮಾಡುವುದು ಶೈಖುನಾರಿಗೆ ಅಪ್ಯಾಯಮಾನವಾದ ಸಂಗತಿ. ಬೇಗ ನಿದ್ದೆ ಮಾಡಿ ಬೇಗನೆ ಏಳುವುದು ಶೈಖುನಾರ ರೂಢಿ. ಈಗೀಗ ಮಹಾಮನೀಷಿಗೆ ನಿದ್ದೆ ಹತ್ತಲ್ಲವಂತೆ! ಅಂದರೆ ರಾತ್ರಿಯೂ ಆ ನಾಲಗೆ ಜಪಿಸುತ್ತಿರಬಹುದು !


ಕುಟುಂಬ

ಸಜಿಪದ ಆಸಿಯಮ್ಮ ಹಾಗೂ ಕಿಲ್ಲೂರಿನ ನಫೀಸಾರನ್ನು ವರಿಸಿರುವ ಶೈಖುನಾರಿಗೆ ಒಟ್ಟು ಏಳು ಗಂಡು ಹಾಗೂ ಮೂರು ಹೆಣ್ಮಕ್ಕಳು. ಪತ್ನಿ ಆಸಿಯಮ್ಮ ಈಚೆಗೆ ತೀರಿಕೊಂಡರು. ಗಂಡು ಮಕ್ಕಳೆಲ್ಲರನ್ನೂ ಉತ್ತಮ ರೀತಿಯಲ್ಲಿ ಬೆಳೆಸಿ ವಿದ್ವಾಂಸರನ್ನಾಗಿ ಮಾಡುವ ಜೊತೆಗೆ ಹೆಣ್ಮಕ್ಕಳೆಲ್ಲರನ್ನೂ ವಿದ್ವಾಂಸರಿಗೆ ವರಿಸಿ ಕೊಟ್ಟಿದ್ದಾರೆ. ಆಸಿಯಮ್ಮ ಎಂಬವರಿಂದ ಅಶ್ರಫ್ ಮುಸ್ಲಿಯಾರ್, ಸಲೀಂ ಮದನಿ, ಜಮೀಲಾ, ಇಲ್ಯಾಸ್ ಅಮ್ಜದಿ, ದಾವೂದ್ ಹಾಗೂ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಅದೇ ರೀತಿ ನಫೀಸಾರಿಂದ ಝೈನಬಾ, ತಾಹಿರಾ, ಶರೀಫ್ ಸಖಾಫಿ ಹಾಗೂ ಸ್ವದಖತುಲ್ಲಾ ನದ್ವಿಗೆ ಜನ್ಮ ನೀಡಿದ್ದಾರೆ.


ಖಾಝಿಯಾಗಿ ಝೈನುಲ್ ಉಲಮಾ

ತಾಜುಲ್ ಫುಖಹಾ ಬೇಕಲ್ ಉಸ್ತಾದರ ಬಳಿಕ ಮಾಣಿ ಉಸ್ತಾದರು ನವೆಂಬರ್ ೧೯, 2020 ರಂದು ಉಡುಪಿ ಜಿಲ್ಲಾ ಖಾಝಿಯಾಗಿಯೂ ಬಳಿಕ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡದ ಕೆಲವು ಮೊಹಲ್ಲಾಗಳಲ್ಲಿ ಖಾಝಿಯಾಗಿ ಆಯ್ಕೆಯಾದರು. ಸರಳ ಶೈಲಿಯಲ್ಲಿ ಬದುಕು ಸವೆಸಿದ ಶೈಖುನಾ ಸರ್ವ ವಿಷಯದಲ್ಲೂ ಮಿತವ್ಯಯ ಪಾಲಿಸಿದವರು. ದರ್ಸ್ ರಂಗದಲ್ಲಿ ನಾಲ್ಕುವರೆ ದಶಕಗಳ ಪೂರ್ತೀಕರಿಸಿದ ಸಮಯದಲ್ಲಿ ಶೈಖುನಾರ ಸಮಾಜ ಸೇವೆ ಪರಿಗಣಿಸಿ 2015 ಎಪ್ರಿಲ್ 5 ರಂದು ಸುಲ್ತಾನುಲ್ ಉಲಮಾ ಶೈಖುನಾರಿಗೆ ಝೈನುಲ್ ಉಲಮಾ (ವಿದ್ವಾಂಸರ ಸೌಂದರ್ಯ) ಎಂಬ ನಾಮವನ್ನು ಘೋಷಿಸಿದರು. ಇದಲ್ಲದೆ ಇಮಾಂ ಬೂಸೂರೀ, ತಾಜುಲ್ ಉಲಮಾ ಅವಾರ್ಡ್‌ ಇಂತಹ ಅನೇಕಾರು ಪ್ರಶಸ್ತಿ ಶೈಖುನಾರಿಗೆ ಪ್ರಾಪ್ತಿಯಾಗಿದೆ.


ದೃಢತೆ

ಆಖಿರಾದ ಬಗ್ಗೆ ಚಿಂತಿಸಲು ಉಸ್ತಾದರು ನೆನಪಿಸುತ್ತಾರೆ. ಒಳಿತನ್ನು ಬೋಧಿಸುವ ಕೆಡುಕನ್ನು ವಿರೋಧಿಸುವ ಒಂದು ಬಳಗ ನಿಮ್ಮಲ್ಲಿರಲಿ ಎಂದು ಆಗಾಗ್ಗೆ ಎಚ್ಚರಿಕೆಯನ್ನೂ ನೀಡುತ್ತಿರುತ್ತಾರೆ. ಖಾಝಿಯಾಗುವುದಕ್ಕಿಂತ ಮುಂಚೆ ನಾನು ಹೇಗಿದ್ದೆ ಈಗಲೂ ಹಾಗೆಯೇ ಇದ್ದೇನೆ. ಒಂದು ನೂರು ಗ್ರಾಂ ಕೂಡಾ ಹೆಚ್ಚಾಗಿಲ್ಲ ! ಎಂದು ತರಗತಿಯಲ್ಲಿ ಉಸ್ತಾದರು ಹೇಳಿದ್ದರು. ನಮ್ಮ ಜೀವನವನ್ನು ರೂಪಿಸಬಹುದಾದ ಉಸ್ತಾದರ ಗುಣಪಾಠಗಳು ಧಾರಾಳ ಇವೆ.


ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾದ ಅಧ್ಯಕ್ಷರಾಗಿ, ದಾರುಲ್ ಇರ್ಷಾದಿನ ಶಿಲ್ಪಿಯಾಗಿ, ಹಾಸನ, ಉಡುಪಿ, ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನಷ್ಟು ಕಾಲ ನಮಗೆ ನೇತೃತ್ವ ನೀಡಲು ಅಲ್ಲಾಹು ಅನುಗ್ರಹಿಸಲಿ - ಆಮೀನ್.


~ ಅಶ್ರಫ್ ನಾವೂರು

7348858044



[ಮುಈನುಸ್ಸುನ್ನಃ ಆನ್‌ಲೈನ್ ವೆಬ್ಸೈಟ್ ವೀಕ್ಷಿಸುತ್ತಿರುವ ಶೈಖುನಾ]


566 views0 comments

Comments


bottom of page