top of page

ಮಾನವೀಯತೆಯ ಪ್ರತಿರೂಪ ನನ್ನ ಪ್ರವಾದಿ.


ಸೃಷ್ಟಿಕರ್ತನ ಪ್ರೀತಿಯ ದಾಸ, ಮಹಾನ್ ನಾಯಕ, ಗುರು, ಮಾದರೀ ಯಜಮಾನ ಹೀಗೆ ಬೆಳೆಯುತ್ತಾ ಹೋಗುತ್ತದೆ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಜೀವನ ಯಾತ್ರೆ. ಮದೀನಾ ಮಸೀದಿಯಲ್ಲಿ ಸಾವಿರ ವಿದ್ಯಾರ್ಥಿಗಳಿಗೆ ಕಲಿಸುವ ಅದೇ ಗುರು ಮನೆ ತಲುಪಿದರೆ ಮನೆಗೆಲಸ ಮಾಡುತ್ತಾ, ಅದು ಮುಗಿದರೆ ಅಲ್ಲಾಹನೆಡೆಗೆ ಸುಜೂದ್ ಮಾಡುತ್ತಾ ಸಮಯ ಕಳೆಯುವರು. ಈ ದಿನಚರಿಯ ಮಧ್ಯೆ ಊರಿನಲ್ಲಿ ಯಾರಾದರು ಹಸಿವು ಅನುಭವಿಸುವುದನ್ನು ತಿಳಿದರೆ ಅವರಿಗೆ ಆಹಾರ ನೀಡುತ್ತಾ, ರೋಗಿಗಳಿದ್ದರೆ ಅವರಿಗೆ ಸಾಂತ್ವನ ನೀಡುತ್ತಾ, ಸಾಲದಿಂದ ಸೋತು ಹೋದವರಿಗೆ ಅದನ್ನು ತೀರಿಸಲು ದಾರಿಯನ್ನು ಕಂಡುಕೊಳ್ಳುತ್ತಾ, ಏನಾದರೂ ಸಹಾಯ ಕೇಳಿ ಬಂದರೆ ತನ್ನ ಬಳಿ ಇರುವ ವಸ್ತುವನ್ನು ನೀಡುತ್ತಾ ತಮ್ಮ ಅಂದಿನ ದಿನಚರಿಯನ್ನು ಮುಗಿಸುತ್ತಾರೆ. ಪತ್ನಿ, ಶಿಷ್ಯ, ನೆರೆಹೊರೆಯವ, ಸಹೋದರ ಧರ್ಮೀಯದವ ಎಲ್ಲರೊಂದಿಗೂ ಶಾಂತಿ, ಸಮಾಧಾನವನ್ನೇ ಬಯಸುತ್ತಿರುತ್ತಾರೆ. ಫಲ ನೀಡುವ ಬೃಹತ್ ವೃಕ್ಷದಂತಿತ್ತು ಅವರ ಅರವತ್ತ ಮೂರು ಸಂವತ್ಸರ. ನ್ಯಾಯ-ನೀತಿ, ಮಾನವೀಯ ಪಾಠ, ಸ್ನೇಹ ಸಂದೇಶ ಇದಾಗಿತ್ತು ಆ ವೃಕ್ಷ ನೀಡುವ ನಿತ್ಯ ಫಲ. ಇಡೀ ಮಾನವಕುಲಕ್ಕೆ ಮಾನವೀಯ ಮೌಲ್ಯಗಳನ್ನು ಕಲಿಸಿದ ಮಹಾನ್ ಮಾನವತಾವಾದಿಯಾಗಿದ್ದರು ನಮ್ಮ ಪ್ರವಾದಿ. ಅದು ಅವರ ಜೀವನದ ಪ್ರತೀ ಮಜಲುಗಳನ್ನು ಓದುವ ಮೂಲಕ ನಮಗೆ ಅನುಭವಿಸುತ್ತಾ ಕಲಿಯಬಹದು.


ಸಮದಾಯದೊಂದಿಗೆ ನನ್ನ ಪ್ರವಾದಿ;

ಇಮಾಮ್ ಮುಸ್ಲಿಮರು ವರದಿ ಮಾಡಿದ ಹದೀಸೊಂದು ಹೀಗಿದೆ. ಆರಾಧನೆ ಹಾಗು ಆದರ್ಶದಲ್ಲಿ ವಿಶ್ವಾಸವಿರಿಸುವ ಮುಸ್ಲಿಮರು ಪರಸ್ಪರ ಸಹೋದರರಂತೆ ಬೆಳೆಯಬೇಕೆಂಬುದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಕಲಿಸಿಕೊಟ್ಟ ಪಾಠ. ಅವರು ಹೇಳುತ್ತಾರೆ: ಮುಸ್ಲಿಮರು ಪರಸ್ಪರ ಪ್ರೀತಿ ಕಾರುಣ್ಯ, ಅನುಕಂಪದಲ್ಲಿ ಒಂದೇ ಶರೀರದಂತೆ. ಅಂಗಾಂಗದ ಒಂದು ಭಾಗಕ್ಕೆ ರೋಗ ಹಿಡಿದುಕೊಂಡರೆ ಶರೀರವು ತಿಂಗಳುಗಳ ಕಾಲ ನಿದ್ದೆಬಿಟ್ಟು ಆ ಅಂಗಾಂಗದೊಂದಿಗೆ ಅನುಭಾವ ತೋರಿಸುತ್ತೆ. ಮುಸ್ಲಿಮ್ ಸಮುದಾಯ ಒಂದೇ ಶರೀರವೆಂದು ಭಾವಿಸಿ ಪರಸ್ಪರ ಸಹಕಾರಿಗಳಾಗಬೇಕು ಎಂದಾಗಿದೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಸಂದೇಶ. ಸಮುದಾಯದ ಒಬ್ಬ ವ್ಯಕ್ತಿಗೆ ಏನಾದರು ಅನಾಹುತ ಸಂಭವಿಸಿದರೆ ಅದರಿಂದ ಮುಕ್ತನಾಬೇಕಾದ ಎಲ್ಲ ಸೌಕರ್ಯವನ್ನು ಉಳಿದವರು ಮಾಡಿಕೊಡಬೇಕೆಂಬುದು ಪ್ರವಾದಿವರ್ಯರು ಸಮುದಾಯಕ್ಕೆ ನೀಡುವ ಅತೀ ದೊಡ್ಡ ಮಾನವೀಯತೆ ಪಾಠ. ಶರೀರ, ಆಸ್ತಿ, ಸ್ವಾಧೀನ, ಉಪದೇಶ, ಮಧ್ಯಸ್ಥಿಕೆಯಿಂದ ಆಗಬಲ್ಲ ಸಹಕಾರಗಳತ್ತ ಶ್ರದ್ಧೆ ವಹಿಸುವುದು ವಿಶ್ವಾಸಿಯೊಬ್ಬನ ಹಕ್ಕು ಕೂಡ ಹೌದು ಎಂಬುದು ಪ್ರವಾದಿ ನುಡಿ.


• ಅಮುಸ್ಲಿಮರೊಂದಿಗೆ ನನ್ನ ಪ್ರವಾದಿ;

ಮುಸ್ಲಿಮರೊಂದಿಗೆ ಮಾತ್ರವಲ್ಲ ಇತರೆ ಸಂಸ್ಕೃತಿಯೊಂದಿಗೆ ಸಹಿಷ್ಣುತೆಯಿಂದ ಬಾಳಬೇಕು ಎಂಬುದು ಪ್ರವಾದಿ ಪಾಠ. ಧರ್ಮ ನಿರಪೇಕ್ಷತೆ, ಸೌಹಾರ್ದತೆಯನ್ನು ಕಲಿಸಿಕೊಟ್ಟ ನಾಯಕನನ್ನು ಇನ್ನು ಈ ಜಗದ ಮೇಲೆ ಕಾಣುವುದು ಅಸಾಧ್ಯದ ಮಾತು. ಸಹಧರ್ಮದೊಂದಿಗೆ ತೋರಿಸಿದ ವಿಶಾಲ ಮನಸ್ಸು ಚರಿತ್ರೆ ಪುಟಗಳಲ್ಲಿ ಭದ್ರವಾಗಿ ಅಚ್ಚಾಗಿದೆ. ಎಷ್ಟರ ಮಟ್ಟಿಗೆಂದರೆ ಶತ್ರು ಕೂಡ ಮಿತ್ರನಾಗಿ, ಇಸ್ಲಾಮಿನ ವಕ್ತಾರರಾದ ಚರಿತ್ರೆ ಕೂಡ ಇದೆ. ಒಮ್ಮೆ ಒಬ್ಬ ಯಹೂದಿ ಪಂಡಿತ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಬಳಿ ತನಗೆ ಲಭಿಸಬೇಕಾದ ದೀನಾರನ್ನು ಕೇಳಿ ಪಡೆಯಲು ಬಂದರು. ಮೊದಲು ನಿಶ್ಚಯಿಸಿದ್ದ ಸಮಯಕ್ಕೆ ಮುಂಚಿತವಾಗಿತ್ತು ಅವರು ಹಣವನ್ನು ಕೇಳಿ ಬರುವುದು. ಸಾಲ ತೀರಿಸಲು ನನ್ನ ಬಳಿ ಈಗ ಬೇರೇನು ದಾರಿ ಇಲ್ಲವೆಂದರು. ಆದರೆ ಆತ ಹಣ ಕೈಗೆ ಸಿಗದೆ ನಾನು ಇಲ್ಲಿಂದ ಹಿಂದೆ ಸರಿಯಲ್ಲ ಎಂದು ಹಠಹಿಡಿದನು. ಇವೆಲ್ಲವನ್ನು ನೋಡುತ್ತಿದ್ದ ಸ್ವಹಾಬರು ಅವರೊಬ್ಬ ಯಹೂದಿಯಲ್ಲವೇ ಎಂದು ಪ್ರಶ್ನಿಸಿದಾಗ "ನಮ್ಮೊಂದಿಗೆ ಕರಾರು ಮಾಡಿದವರು ಹಾಗು ಮಾಡದವರೊಂದಿಗೆ ಅನ್ಯಾಯ ತೋರುವುದು ನನ್ನ ಸೃಷ್ಟಿಕರ್ತನು ವಿರೋಧಿಸಲಾಗಿದೆ" ಅಂದರು. ಇವರ ಒಡನಾಟ ಕಂಡು ಆ ವ್ಯಕ್ತಿ ಇಸ್ಲಾಮಿನತ್ತ ಬಂದರು.

ಅಮುಸ್ಲಿಮರೊಂದಿಗೆ ಹಬೀಬ್ﷺರ ಒಡನಾಟದ ಬಗ್ಗೆ ಇನ್ನೂ ಹಲವು ನಿದರ್ಶನಗಳು ಕಾಣಬಹುದು. 'Non Muslim, under muslim rulers' ಗ್ರಂಥದಲ್ಲಿ ಒಂದು ಘಟನೆ ಕಾಣಬಹುದು. ಒಮ್ಮೆ ಮದೀನಾದಲ್ಲಿ ಯಹೂದಿ ಪಂಡಿತರು ಹಾಜರಾದರು. ಅವರು ಆರಾಧನೆಗೆ ಸ್ಥಳಸೌಕರ್ಯ ಸಿಗದೆ ಬೇಸರದಿಂದಿರುವಾಗ ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಸ್ವಂತ ಮಸೀದಿಯನ್ನೇ ಬಿಟ್ಟುಕೊಟ್ಪರು..!

ಜಾಮಿಉಸ್ವಗೀರ್ ಗ್ರಂಥದಲ್ಲಿ ಉಲ್ಲೇಖವಾದ ಒಂದು ಹದೀಸ್ ಹೀಗಿದೆ. ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ; ಯಾರಾದರು ಝಿಮ್ಮಿಯ್ಯ್ [ಮುಸ್ಲಿಮ್ ಆಡಳಿತ ಪ್ರದೇಶದಲ್ಲಿ ತೆರಿಗೆ ನೀಡಿ ಜೀವಿಸುವವರು] ಆದ ಕಾಫಿರನನ್ನು ಉಪದ್ರವಿಸಿದರೆ ಅವನು ನನ್ನನ್ನು ಉಪದ್ರವಿಸಿದಂತೆ. ನನ್ನನ್ನು ಉಪದ್ರವಿಸಿದರೆ ಅಲ್ಲಾಹನನ್ನು ಉಪದ್ರವಿಸದಂತೆ. ಮತ್ತೊಂದು ಹದೀಸ್ ಹೀಗಿದೆ, ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು; ಒಬ್ಬನಿಗೆ ಆಶ್ರಯ ನೀಡಿ ನಂತರ ಅವನನ್ನು ಕೊಂದರೆ ಅವನಿಗೆ ನರಕವು ಕಡ್ಡಾಯವಾಗಿದೆ. ಕೊಲೆಯಾದ ವ್ಯಕ್ತಿ ಸತ್ಯವಿಶ್ವಾಸಿಯಲ್ಲದಿದ್ದರೂ ಸರಿ. ಮುಂದುವರಿದು, ಮದೀನಾದಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಸೃಷ್ಟಿಸಿದ ಆಡಳಿತ ಮಂಡಳಿಯಲ್ಲಿ ಅಲ್ಲಿನ ಯಹೂದಿಯರನ್ನೂ ಸೇರಿಸಿದ್ದರು.

ನೋಡಿ ಈ ಎಲ್ಲ ಹದೀಸ್, ಘಟನೆಗಳು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಅಮುಸ್ಲಿಮರೊಂದಿಗೆ ಶಾಂತಿಯುತವಾಗಿ, ಮಾನವೀಯತೆಯ ದೃಷ್ಟಿಯಿಂದ ವರ್ತಿಸಲು ಕಲಿಸಿಕೊಟ್ಟಿದೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ.


ಆಬೂಝರ್ರ್ ರಳಿಯಲ್ಲಾಹು ಅನ್ಹು ಒಬ್ಬ ವ್ಯಕ್ತಿಯನ್ನು 'ಓ ಕರಿಯನ ಮಗನೇ..' ಎಂದು ಕರೆದರು. ಈ ವಿಷಯ ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಬಳಿ ತಲುಪಿತು. "ನಿನ್ನಲ್ಲಿ ಇನ್ನು ಕೂಡ ಜಾಹಿಲಿಯ್ಯತ್ ಬದಲಾಗಲಿಲ್ವಾ..?" ಎಂದು ವಿಷಯದ ಗೌರವವ ತಿಳಿಸಲು ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಅವರೊಂದಿಗೆ ಪ್ರಶ್ನಿಸಿದರು. ಅಬೂಝರ್ರ್ ರಳಿಯಲ್ಲಾಹು ಅನ್ಹುರವರು ಪಶ್ಚಾತ್ತಾಪಪಟ್ಟರು. ಈ ಘಟನೆಯು ಕರಿಯ-ಬಿಳಿಯರು ಸಮಾನರು ಎಂಬ ಮನಾವತಾ ಸಂದೇಶದೊಂದಿಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಜಗತ್ತಿಗೆ ಸಾರಿ ಹೇಳಿದರು.


ಅನಾಥ ನಿರ್ಗತಿಕರೊಂದಿಗೆ ನನ್ನ ಪ್ರವಾದಿ;

ಅನಾಥ ನಿರ್ಗತಿಕರೊಂದಿಗೆ ಸಂಯಮ ರೂಪದಲ್ಲಿ ಬೆರೆಯಬೇಕೆಂಬುದು ಪ್ರವಾದಿ ಪಾಠ. ಏಳು ಮಹಾಪಾಪಗಳ ಪೈಕಿ 'ಅನ್ಯರ ಸೊತ್ತನ್ನು ಉಣ್ಣುವವ'ನನ್ನೂ ಸೇರಿಸಲಾಗಿದೆ. ಅದು ಅಷ್ಟು ಗಂಭೀರ ವಿಷಯ ಕೂಡ ಹೌದು. ಬಡವ, ನಿರ್ಗತಿಕರಿಗೆ ಸಹಾಯ ಮಾಡುವುದರೊಂದಿಗೆ ವಿಧವೆಗಳನ್ನು ಸಂರಕ್ಷಣೆ ಮಾಡಬೇಕು ಎಂದು ಹಬೀಬ್ﷺರು ಕಲಿಸಿಕೊಟ್ಟಿದ್ದಾರೆ. ಬಡವರೊಂದಿಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ತೋರಿದ ಮಾನವೀಯತೆಯ ಸಂದೇಶ ಹಿರಿದಾದುದು. ಸ್ವಹಾಬೀ ಸಂಗಡಿಗರೊಂದಿಗೆ ಪ್ರತಿ ಮನೆಗೆ ತೆರಳಿ ಯಾರಾದರು ಅನ್ನವಿಲ್ಲದೆ ಕಷ್ಟ ಅನುಭವಿಸುತ್ತಿದ್ದಾರೋ ಎಂದು ಅರಿಯಲು ಆಜ್ಞೆ ಹೊರಡಿಸುತ್ತಿದ್ದರು. 'ಯತೀಮ್ ಮಕ್ಕಳನ್ನು ಸಂರಕ್ಷಣೆ ಮಾಡುವವರು ಸ್ವರ್ಗ ಪಡೆಯುವನು. ಅಲ್ಲದೆ ಯತೀಮ್ ಮಕ್ಕಳ ಮುಂದೆ ತಮ್ಮ ಮಕ್ಕಳನ್ನು ಚುಂಬಿಸದಿರಿ ಅವರ ಮನಸ್ಸು ನೋವುನ್ನಬಹುದು' ಎಂಬ ಎಚ್ಚರಿಕೆಯೆ ವಾತ್ಸಲ್ಯದ ಮಾತುಗಳು ನನ್ನ ಪ್ರವಾದಿ ಮಾನವೀಯತೆಯ ಪ್ರತಿರೂಪ ಎಂದರೆ ಸುಳ್ಳಾಗಲಾರದು.

ಅನುಯಾಯಿಗಳನ್ನು ಬಹಳ ಪ್ರೀತಿ, ಕಾಳಜಿಯಿಂದ ನೋಡಿಕೊಂಡ ಇಷ್ಟು ಮಾನವೀಯತೆಯ ಮಹಾನ್ ನಾಯಕರನ್ನು ಇನ್ನು ಈ ಜಗತ್ತು ಸಾಕ್ಷಿಯಾಗಲಿಕ್ಕಿಲ್ಲ.


ಈ ಎಲ್ಲಾ ಜೀವನ ಕ್ರಮ ಸಾಧಿಸಿ ತೋರಿಸಿದ್ದು ಕೇವಲ ತಮ್ಮ ಅರವತ್ತು ಮೂರು ವರ್ಷದಲ್ಲಾಗಿತ್ತು. ಜನನದೊಂದಿಗೆ ಶುರುವಾಗಿ ಮರಣಾನಂತರ ಇರುವ ಜೀವನದ ಬಗ್ಗೆ ಜಗತ್ತಿಗೆ ಬೋಧನೆ ಮಾಡಿದ ಮಹಾನ್ ಗುರುವನ್ನು, ಮಾನವೀಯತೆಯ ನಾಯಕನನ್ನು ಈ ಜಗತ್ತು ಚರಿತ್ರೆಯ ಪುಟದಲ್ಲಿ ಕಾಣಲು ಅಸಾಧ್ಯ ಎಂಬುದು ತಿಳಿನೀರಿನಷ್ಪೇ ಸತ್ಯದ ಮಾತು. ಮುಂದೊಂದು ದಿನ ಇಡೀ ಜಗತ್ತು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಜೀವನ ಪಾಠವನ್ನು ಬೇಡುವ, ಸ್ಥಾಯಿ ಪರಿಹಾರಕನಾಗಿ ಕಾಣುವ ಕಾಲ ಬರುವುದರಲ್ಲಿ ಸಂಶಯವಿಲ್ಲ. ನನ್ನ ಪ್ರವಾದಿ ಈ ಜಗತ್ತಿನ ಅತೀ ಶ್ರೇಷ್ಠ ಮಾನವೀಯತೆಯ ಪ್ರತೀಕ.


~ಸಲೀಂ ಮುಈನಿ, ಇರುವಂಬಳ್ಳ.

116 views0 comments

Comments


bottom of page